ಯಾವ ಕ್ಷಣದಲ್ಲೂ ಆರೆಸ್ಸೆಸ್ ನಾಯಕರಿಂದ ನನ್ನ ಕೊಲೆಯಾಗಬಹುದು: ಆರೆಸ್ಸೆಸ್ ಮಾಜಿ ಪ್ರಚಾರಕ ಹನುಮೇಗೌಡ

Update: 2017-05-05 07:14 GMT

"ನನಗೆ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರಿಂದ ಕೊಲೆ ಬೆದರಿಕೆಯಿದೆ. ಯಾವ ಕ್ಷಣದಲ್ಲೂ ನನ್ನ ಕೊಲೆಯಾಗಬಹುದು" ಹೀಗೆಂದು ಆರೆಸ್ಸೆಸ್‌ನ ಮಾಜಿ ಪ್ರಚಾರಕ, ಮುಖಂಡ ಎನ್. ಹನುಮೇಕೌಡ ಆತಂಕ ವ್ಯಕ್ತಪಡಿಸಿದ್ದಾರೆ.

ಪತ್ರಿಕೆಯ ಪ್ರತಿನಿಧಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ಆತಂಕವನ್ನು ತೋಡಿಕೊಂಡಿದ್ದಾರೆ. "ಬಿಜೆಪಿಯ ಯಲಹಂಕ ಶಾಸಕ ವಿಶ್ವನಾಥ್‌ರ ಅಕ್ರಮಗಳ ವಿರುದ್ಧದ ನನ್ನ ಧ್ವನಿಯನ್ನು ಅಡಗಿಸುವ ವಿವಿಧ ಷಡ್ಯಂತ್ರಗಳು ನಡೆದವು. ಆತನ ಭೂ ಅವ್ಯವಹಾರಗಳ ಬಗ್ಗೆ ಜಿಲ್ಲಾಧಿಕಾರಿಗೆ ಸಾಕಷ್ಟು ದೂರು ನೀಡಿದ್ದೇನೆ. ಆ ಮೂಲಕ ಸುಮಾರು ನೂರು ಕೋಟಿ ರೂ. ಮೊತ್ತದ ಭೂಮಿಯನ್ನು ಸರಕಾರಕ್ಕೆ ಉಳಿಸಿಕೊಟ್ಟಿದ್ದೇನೆ. ದೇಶಭಕ್ತಿಯ ಹೆಸರಿನಲ್ಲಿ ದೇಶವನ್ನು ಲೂಟಿ ಹೊಡೆಯುತ್ತಿರುವ ಖದೀಮರಿವರು. ಇವರಿಂದ ಸಮಾಜಕ್ಕೆ ಒಳ್ಳೆಯದಾಗುವುದಿಲ್ಲ" ಎಂದು ಅವರು ಈ ಸಂದರ್ಭದಲ್ಲಿ ಆಕ್ರೋಶವನ್ನು ವ್ಯಕ್ತಪಡಿಸಿದರು.

"ನನಗೆ ಕೊಲೆ ಬೆದರಿಕೆ ಇರುವುದು ಬಿಜೆಪಿ ನಾಯಕರಿಂದ ಹಾಗೂ ಆರೆಸ್ಸೆಸ್‌ನ ಕೆಲವು ಮುಖಂಡರಿಂದ. ಯಾವ ಕ್ಷಣದಲ್ಲೂ ನನ್ನನ್ನು ಅವರು ಕೊಲ್ಲಬಹುದು. ಸಾವಿಗೆ ಅಂಜಿ ಸತ್ಯವನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲ. ನನಗೆ ಯಾವುದೇ ಹಣ ಹಾಗೂ ಅಧಿಕಾರದ ಆಸೆ ಇಲ್ಲ. ನಾನು ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭ ಕರಾವಳಿಯ ಪ್ರಮುಖ ದೈನಿಕಗಳಲ್ಲಿ ಜಾಹೀರಾತೊಂದು ನೀಡಿದ್ದೆ. ಆ ಪ್ರಕಾರ ಬಿಜೆಪಿಯವರಿಗೆ ನಾನು ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದೆ. ಜಾಹೀರಾತನ್ನು ಪ್ರಕಟಿಸದಂತೆ ಪತ್ರಿಕೆ ಹಾಗೂ ನನ್ನ ಮೇಲೆ ಒತ್ತಡ ಹೇರಲಾಯಿತು ಹಾಗೂ ಬೆದರಿಕೆಯೊಡ್ಡಲಾಯಿತು. ಆದರೆ ನಾನು ಅದರಿಂದ ಹಿಂಜರಿಯಲಿಲ್ಲ. ಜಾಹೀರಾತು ಬಂದ ದಿನ ನನ್ನ ಮೊಬೈಲ್ ಫೋನ್‌ಗೆ ಒಟ್ಟು 800 ಬೆದರಿಕೆ ಕರೆಗಳು ಬಂದಿವೆ. ಅದೆಷ್ಟರ ಮಟ್ಟಿಗೆ ಜನರಲ್ಲಿ ಪರಿಣಾಮ ಬೀರಿದೆಯೋ ಗೊತ್ತಿಲ್ಲ, ಅಂತೂ ಕರಾವಳಿ ಭಾಗದಲ್ಲಿ ಬಿಜೆಪಿ ಭಾರೀ ಹಿನ್ನಡೆಯನ್ನು ಕಂಡಿದ್ದು ಮಾತ್ರ ಸತ್ಯ" ಎಂದು ಅವರು ನೆನಪಿಸಿಕೊಂಡರು.

1988ರಿಂದ 98ರವರೆಗೆ ಕರ್ನಾಟಕದ 11 ಜಿಲ್ಲೆಗಳಲ್ಲಿ ಆರೆಸ್ಸೆಸ್ ಪ್ರಚಾರಕರಾಗಿದ್ದ ಎನ್. ಹನುಮೇಗೌಡ, ಜಿಲ್ಲಾ ಮಟ್ಟದ ತನಕವೂ ಸಂಘದ ವಿವಿಧ ಜವಾಬ್ದಾರಿಗಳನ್ನು ಹೆಗಲೇರಿಸಿಕೊಂಡವರು. ಆರೆಸ್ಸೆಸ್ ನಾಯಕರ ದುರ್ನಡತೆಯ ವಿರುದ್ಧ ಧ್ವನಿಯೆತ್ತಿದರು ಎನ್ನುವ ಕಾರಣಕ್ಕಾಗಿಯೇ ಅವರನ್ನು ನಿಧಾನಕ್ಕೆ ಆರೆಸ್ಸೆಸ್‌ನಿಂದ ದೂರವಿಡಲಾಯಿತು ಎಂದು ಹನುಮೇಗೌಡ ಹೇಳುತ್ತಾರೆ. 1998ರಲ್ಲಿ ಹನುಮೇಗೌಡರಿಗೆ ಆರೆಸ್ಸೆಸ್ ಪ್ರಚಾರಕ ಹುದ್ದೆಯಿಂದ ಹಿಂಭಡ್ತಿ ನೀಡುವ ಬಗ್ಗೆ ಸೂಚನೆ ಸಿಗುತ್ತದೆ. ಇದಕ್ಕೊಪ್ಪದ ಹನುಮೇಗೌಡರು ತಾವಾಗಿಯೇ ಆರೆಸ್ಸೆಸ್‌ನಿಂದ ಹೊರಬಂದರು.

ಹನುಮೇಗೌಡರ ಜೊತೆಗೆ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ವಾ.ಭಾ.: ನೀವು ಆರೆಸ್ಸೆಸ್‌ನ ನಿಷ್ಠಾವಂತ ಕಾರ್ಯಕರ್ತನಾಗಿದ್ದುಕೊಂಡು ಈಗೇಕೆ ಅದನ್ನು ವಿರೋಧಿಸುತ್ತಿದ್ದೀರಿ?

ಹನುಮೇಗೌಡ: ನಾನು ಆರೆಸ್ಸೆಸ್ಸನ್ನು ವಿರೋಧಿಸುತ್ತಿಲ್ಲ. ಇಂದಿಗೂ ನಾನು ಅದರ ಕಾರ್ಯಕರ್ತನಾಗಿಯೇ ಇದ್ದೇನೆ. ನಾನು ವಿರೋಧಿಸುತ್ತಿರುವುದು ಸಂಘದ ನಾಯಕರ ನಡವಳಿಕೆಯನ್ನು. ರಾಜಕೀಯ ಉದ್ದೇಶಗಳ ಹಿಂದೆ ಸಂಘದ ನಾಯಕರು ತಮಗೆ ಬೇಕಾದ ಹಾಗೆ ಸಂಘವನ್ನು, ಅದರ ಕಾರ್ಯಕರ್ತರನ್ನು ನಡೆಸಿಕೊಳ್ಳಲು ಶುರುಮಾಡಿದರೋ ಅಂದಿನಿಂದ ನಾನು ಅವರ ನಡವಳಿಕೆಯನ್ನು ವಿರೋಧಿಸುತ್ತಿದ್ದೇನೆ. ಹಾಗಾಗಿಯೇ ಸಂಘದ ನಾಯಕರಿಗೆ ನಾನು ನುಂಗಲಾರದ ತುಪ್ಪವಾಗಿದ್ದೇನೆ.

ವಾ.ಭಾ.: ಆರೆಸ್ಸೆಸ್ ತತ್ವಗಳಲ್ಲಿ ರಾಜಕೀಯ ಅಧಿಕಾರದ ಆಕಾಂಕ್ಷೆ ಅಡಗಿದೆಯೇ?
ಹನುಮೇಗೌಡ: ಹಿಂದೂ ಸಂಸ್ಕೃತಿ ಎಲ್ಲ ಮನೆಗಳಲ್ಲೂ ಆಚರಣೆಗೆ ಬಂದ ಬಳಿಕ ಸಹಜವಾಗಿ ಸಂಘದ ಕಾರ್ಯ ಸಮಾಜದಲ್ಲಿ ಲೀನವಾಗಬೇಕು ಎಂಬುದಾಗಿ ಡಾಕ್ಟರ್ ಜೀಯವರ ಉದ್ದೇಶವಾಗಿತ್ತು. ಆದರೆ ನಂತರದ ಆರೆಸ್ಸೆಸ್ ನಾಯಕರು ಆ ಉದ್ದೇಶವನ್ನು ಮರೆತಂತಿದೆ. ಯಾವಾಗ ಬಿಜೆಪಿಯಿಂದಾಗಿ ಅಧಿಕಾರ ಹಣ ಎರಡೂ ಕೂಡಾ ಸಿಗುತ್ತದೆ ಎಂಬುದು ಅರಿವಿಗೆ ಬಂತೋ ಅಂದಿನಿಂದ ಆರೆಸ್ಸೆಸ್ ನಾಯಕರು ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ. ನೈಜ ಆಶಯಗಳನ್ನು ಮರೆಮಾಚುತ್ತಿದ್ದಾರೆ.

ವಾ.ಭಾ.: ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಆರೆಸ್ಸೆಸ್ ಜೊತೆಗಿನ ಸಂಬಂಧ ಹೇಗಿತ್ತು?
ಹನುಮೇಗೌಡ: ಎಂದೂ ಕೂಡಾ ವಿಧಾನಸೌಧದ ಮೆಟ್ಟಿಲು ಹತ್ತದ ಆರೆಸ್ಸೆಸ್ ನಾಯಕರು ಮತ್ತು ಪ್ರಚಾರಕರು ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಹತ್ತಿದರು. ಅಧಿಕಾರದ ರುಚಿ ಹಿಡಿದರು. ಬಿಜೆಪಿ ಅಧಿಕಾರದಲ್ಲಿದ್ದ ಅಷ್ಟೂ ದಿನವೂ ರಾಜ್ಯದ ಪ್ರಮುಖ ಆರೆಸ್ಸೆಸ್ ನಾಯಕರು ವಿಧಾನಸೌಧದ ತುಂಬಾ ಹರಡಿಕೊಂಡಿದ್ದರು. ಒಂದು ರೀತಿಯಲ್ಲಿ ಆರೆಸ್ಸೆಸ್ ಪರೋಕ್ಷವಾಗಿ ರಾಜ್ಯವನ್ನು ಆಳ್ವಿಕೆ ಮಾಡುತ್ತಿತ್ತು. ನಾನು ಬಿಜೆಪಿಯವರ ಆಡಳಿತ ವೈಖರಿ, ಭ್ರಷ್ಟಾಚಾರ ಹಾಗೂ ಅಕ್ರಮ ವ್ಯವಹಾರಗಳ ಬಗ್ಗೆ ಆರೆಸ್ಸೆಸ್‌ನ ಪ್ರಮುಖರಲ್ಲಿ ಮತ್ತು ಸಭೆಗಳಲ್ಲಿ ಪ್ರಸ್ತಾಪಿಸುತ್ತಿದ್ದೆ.

ದರ ವಿರುದ್ಧ ಧ್ವನಿಯೆತ್ತುತ್ತಿದ್ದೆ. ಸಂಘದ ಹಾಗೂ ಬಿಜೆಪಿ ಪ್ರಮುಖರ ಭೂ ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತಿದ್ದೆ. ಅದಕ್ಕೆ ನನಗೆ ಪ್ರತಿಫಲವಾಗಿ ಸಿಕ್ಕಿದ್ದು ಮಾತ್ರ ಕೊಲೆ ಬೆದರಿಕೆ. ಅಂದಿನಿಂದ ಇಂದಿನವರೆಗೂ ನಾನು ನೂರಾರು ಕೊಲೆ ಬೆದರಿಕೆಗಳನ್ನು ಎದುರಿಸಿದ್ದೇನೆ. ನನ್ನ ಮೇಲೆ ಹಲ್ಲೆ ನಡೆಸಲಾಯಿತು. ಸಾಲದ್ದಕ್ಕೆ ಮಾನಭಂಗ ಕೇಸು ದಾಖಲಿಸಿ ನಾನು ಜೈಲುಪಾಲಾಗುವಂತೆ ಮಾಡಲಾಯಿತು. ಮನೆಗೂ ನುಗ್ಗಿದ್ದಾರೆ. ನನ್ನ ಸಹೋದರನ ಮೇಲೆ ಹಾಗೂ ಆತನ ಮಗನ ಮೇಲೆ ಎರಡು ಸಲ ಹಲ್ಲೆ ನಡೆಸಿ ಹಲ್ಲುಮುರಿದಿದ್ದಾರೆ. ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದೇನೆ. ಸರಕಾರಿ ಆಸ್ತಿ ರಕ್ಷಣೆ ವಿಷಯ ಅರಿತಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ರಕ್ಷಣೆ ನೀಡಲು ಸೂಚಿಸಿದರೂ ಪ್ರಯೋಜನವಾಗಿಲ್ಲ. ಮಾನವ ಹಕ್ಕು ಆಯೋಗ ನಾಲ್ಕು ಬಾರಿ ರಕ್ಷಣೆ ಒದಗಿಸಿ ಎಂದು ಪೊಲೀಸ್ ಆಯುಕ್ತರಿಗೆ ಆದೇಶಿಸಿದರೂ ನನಗೆ ಪೊಲೀಸ್ ಭದ್ರತೆ ಸಿಗಲಿಲ್ಲ.

ವಾ.ಭಾ.: ಆರೆಸ್ಸೆಸ್ ದೇಶದಲ್ಲಿ ರಾಜಕೀಯವಾಗಿ ಜನರನ್ನು ಒಟ್ಟಾಗಿಸುವಷ್ಟು ಪ್ರಬಲ ಸಂಘಟನೆಯೆಂದು ನೀವು ಹೇಳಬಲ್ಲಿರಾ?
ಹನುಮೇಗೌಡ: ಆರೆಸ್ಸೆಸ್ ರಾಜಕೀಯ ಉದ್ದೇಶದಿಂದ ಕಾರ್ಯನಿರ್ವಹಿಸಬಾರದು ಎಂಬುದು ನನ್ನ ಅಭಿಮತ. ಆದಾಗ್ಯೂ ಆರೆಸ್ಸೆಸ್‌ನ ಮುಖಂಡರು ನೀಡುವ ಅನೇಕ ಸುಳ್ಳು ಮಾಹಿತಿಗಳನ್ನು ಸಂಘದ ಹಿರಿಯರಿಗೆ ತಲುಪುಸುತ್ತಿದ್ದಾರೆ. ಇತ್ತೀಚಿಗೆ ಆರೆಸ್ಸೆಸ್‌ನ ಕಡೆಗೆ ಬರುತ್ತಿರುವ ಯುವಜನಾಂಗ ಧ್ಯೇಯೋದ್ದೇಶಗಳನ್ನು ಮರೆತು ರಾಜಕೀಯ ಹಿತಾಸಕ್ತಿಯನ್ನು ಹೊಂದಿದ್ದಾರೆ. ಅದಕ್ಕೆ ಕಾರಣ, ಸಂಘದ ಧ್ಯೇಯೋದ್ದೇಶಗಳಲ್ಲ. ಬದಲಾಗಿ ನಾಯಕರ ಕಾರ್ಯವೈಖರಿ. ಇದರ ಪರಿಣಾಮವಾಗಿ ಭ್ರಷ್ಟರಿಂದ ಸಂಘ ತುಂಬಿ ಹೋಗಿದೆ.

ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸಂದರ್ಭ ಆರೆಸ್ಸೆಸ್ ಪ್ರಾಯೋಜಿತ ಅಸ್ತಿತ್ವದಲ್ಲೇ ಇಲ್ಲದ ಸಂಸ್ಥೆಗಳಿಗೆ ಕೋಟಿಗಟ್ಟಲೆ ಅನುದಾನಗಳನ್ನು ಯಡಿಯೂರಪ್ಪಮಂಜೂರು ಮಾಡಿಸಿದ್ದಾರೆ. ಯಡಿಯೂರಪ್ಪರಿಂದಾಗಿ ಹಲವು ಆರೆಸ್ಸೆಸ್ ನಾಯಕರು ಕೋಟಿಗಟ್ಟಲೆ ಬೆಲೆಬಾಳುವಂತಾಗಿದ್ದಾರೆ. ಇದು ಆರೆಸ್ಸೆಸ್ ಮುಖಂಡರ ಸಾಧನೆ. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ನಡೆಸಿದ ಅಕ್ರಮಗಳ ಸರಮಾಲೆ ಏನೂ ಸಣ್ಣದಲ್ಲ.

Writer - ಸಂದರ್ಶನ: ನಮ್ಮ ಪ್ರತಿನಿಧಿ

contributor

Editor - ಸಂದರ್ಶನ: ನಮ್ಮ ಪ್ರತಿನಿಧಿ

contributor

Similar News