ವೀಸಾ ಸಮಸ್ಯೆ: ಅಮೆರಿಕದಿಂದ ಕುಟುಂಬದೊಂದಿಗೆ ಹಿಂದಿರುಗಿದ ಒಂದೇ ತಿಂಗಳಲ್ಲಿ ಮಹಿಳೆ ಆತ್ಮಹತ್ಯೆ

Update: 2017-05-06 03:33 GMT

ಹೈದರಾಬಾದ್, ಮೇ 6: ಎಚ್1ಬಿ ವೀಸಾ ಸಮಸ್ಯೆಯಿಂದಾಗಿ ಕಳೆದ ತಿಂಗಳಷ್ಟೇ ಹೈದರಾಬಾದ್ ನಗರಕ್ಕೆ ತನ್ನ ಪತಿ ಮತ್ತು ಮಕ್ಕಳೊಂದಿಗೆ ಹಿಂದಿರುಗಿದ್ದ 39 ವರ್ಷದ ಮಹಿಳೆಯೊಬ್ಬರು ನಗರದ ಹೈಟೆಕ್ ಪ್ರದೇಶದ ಪುಪ್ಪಲಗುಡ ಇಲ್ಲಿನ ಅಲ್ಕಪುರ ಕಾಲನಿಯಲ್ಲಿನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಮಹಿಳೆಯನ್ನು ರಶ್ಮಿ ಶರ್ಮ ಎಂದು ಗುರುತಿಸಲಾಗಿದೆ. ಅವರ ಪತಿ ಸಂಜಯ್ ಹಾಗೂ ಇಬ್ಬರು ಪುತ್ರರು ಲ್ಯಾಪ್‌ಟಾಪ್ ರಿಪೇರಿಗೆಂದು ಮನೆಯಿಂದ ಹೊರ ಹೋಗಿದ್ದಾಗ ಮನೆಯಲ್ಲಿ ಒಬ್ಬಳೇ ಇದ್ದ ರಶ್ಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಬ್ಯಾಂಕ್ ಆಫ್ ಅಮೆರಿಕದಲ್ಲಿ ಉದ್ಯೋಗಿಯಾಗಿದ್ದ ಸಂಜಯ್ ಅವರಿಗೆ ಅಲ್ಲಿನ ಹೊಸ ವೀಸಾ ನಿಯಮಗಳಿಂದಾಗಿ ವೀಸಾ ವಿಸ್ತರಣೆಗೆ ಅನುಮತಿ ದೊರೆತಿರಲಿಲ್ಲ. ಆದ್ದರಿಂದ ಅವರ ಕುಟಂಬ ಇತ್ತೀಚೆಗೆ ಹೈದರಾಬಾದ್ ಗೆ ಮರಳಿತ್ತು. ಈ ಸಂದರ್ಭ ಅಮೆರಿಕದಲ್ಲಿ ಕುಟುಂಬದ ಮನೆ ಮತ್ತಿತರ ಸಾಮಾನುಗಳನ್ನು ತೀರಾ ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗಿ ಬಂದಿತ್ತೆಂದೂ ತಿಳಿದು ಬಂದಿದೆ.

ಉತ್ತರ ಪ್ರದೇಶದವರಾದ ರಶ್ಮಿಗೆ ಅವರ ಕುಟುಂಬ ಹೈದರಾಬಾದ್ ನಗರದಲ್ಲಿ ನೆಲೆಸುವುದು ಸುತಾರಾಂ ಇಷ್ಟವಿರಲಿಲ್ಲವೆಂದು ಹೇಳಲಾಗುತ್ತಿದೆಯಲ್ಲದೆ, ಆಕೆ ದಿಲ್ಲಿ ಅಥವಾ ಉತ್ತರ ಭಾರತದ ಬೇರೆ ಯಾವುದಾದರೂ ನಗರಕ್ಕೆ ಸ್ಥಳಾಂತರಗೊಳ್ಳಬೇಕೆಂದು ಬಯಸಿದ್ದರು ಎಂದು ಮೂಲಗಳು ತಿಳಿಸಿವೆ.

ಕುಟುಂಬ ಸದಸ್ಯರಲ್ಲಿ ಯಾವುದೇ ವೈಮನಸ್ಸು ಇರಲಿಲ್ಲವೆಂದು ಹೇಳಲಾಗಿದೆ. ಮಾನಸಿಕ ಖಿನ್ನತೆಯೇ ಆಕೆಯ ಆತ್ಮಹತ್ಯೆಗೆ ಕಾರಣವಾಗಿದೆ ಎಂದು ಶಂಕಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News