×
Ad

ಮಹಾದಲಿತ ಮಹಿಳೆಗೆ ದೇವಳ ಪ್ರವೇಶ ನಿರಾಕರಿಸಿ ಹಲ್ಲೆ; ಬಿಹಾರ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ

Update: 2017-05-06 17:06 IST

ಪಾಟ್ನಾ,ಮೇ 6 : ತನ್ನನ್ನು ಹಾಗೂ ತನ್ನ ಕುಟುಂಬದ ಇತರ ಮಹಿಳೆಯರನ್ನು ಗ್ರಾಮದ ಕೆಲ ಪ್ರಭಾವಿ ಪುರುಷರು ದೇವಳವೊಂದನ್ನು ಪ್ರವೇಶಿಸದಂತೆ ತಡೆದಿದ್ದಾರೆ ಎಂದು ಆರೋಪಿಸಿ ಇಲ್ಲಿಂದ ಸುಮಾರು 71 ಕಿಮೀ ದೂರವಿರುವ ಮುಝಫ್ಫರ್ ಪುರ ಜಿಲ್ಲೆಯ ಬಿಶುನ್ಪುರ್ ಬಘ್ನಗರಿ ಗ್ರಾಮದ ಮಹಾದಲಿತ ಮಹಿಳೆಯೊಬ್ಬಳು ಶುಕ್ರವಾರ ಪೊಲೀಸ್ ದೂರು ದಾಖಲಿಸಿದಂದಿನಿಂದ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ.

ಪೊಲೀಸ್ ದೂರು ನೀಡಿದ್ದಕ್ಕಾಗಿ ತಮ್ಮ ಮೇಲೆ ಹಲ್ಲೆ ಕೂಡ ನಡೆಸಲಾಗಿದೆ ಎಂದು ದೂರುದಾರ ಮಹಿಳೆ 30 ವರ್ಷದ ಉಷಾದೇವಿ ಆರೋಪಿಸಿದ್ದಾಳೆ. ಗಾಯಾಳು ಮಹಿಳೆಯರಿಗೆ ಸಕ್ರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಗ್ರಾಮದಲ್ಲಿ ಪರಿಸ್ಥಿತಿ ನಿಯಂತ್ರಣ ಮೀರದಂತೆ ತಡೆಯಲು ಪೊಲೀಸ್ ತಂಡವೊಂದು ಅಲ್ಲಿ ಬೀಡು ಬಿಟ್ಟಿದೆ ಎಂದು ಮುಝಫ್ಫರ್ ಪುರ್ ಡಿವೈಎಸ್ಪಿ ಮುತಾಫಿಖ್ ಅಹ್ಮದ್ ಹೇಳಿದ್ದಾರೆ.

ಮಹಿಳೆ ನೀಡಿದ ದೂರಿನಂತೆ ಶ್ರೀನಾಥ್ ಮಿಶ್ರಾ, ಅಮನ್ ಕುಮಾರ್, ಶಿವಕುಮಾರ್ ಮಿಶ್ರಾ ಮತ್ತಿತರ ಗ್ರಾಮದ ಪ್ರಭಾವಿ ವ್ಯಕ್ತಿಗಳು ಆಕೆ ಇತರರೊಂದಿಗೆ ತನ್ನ ಮೈದುನನ ವಿವಾಹಪೂರ್ವ ವಿಧಿಗಳನ್ನು ನೆರವೇರಿಸಲು ದೇವಳಕ್ಕೆ ಹೊದಾಗ ಅವರನ್ನು ತಡೆದಿದ್ದರು. ಅವರು ಪ್ರತಿಭಟಿಸಿದಾಗ ಅವರ ಮೇಲೆ ಹಲ್ಲೆ ಕೂಡ ನಡೆದಿತ್ತು ಎಂದು ದೂರಲಾಗಿದೆ.

ಆದರೆ  ಹೆಸರು ಹೇಳಲಿಚ್ಛಿಸದ ಗ್ರಾಮಸ್ಥನೊಬ್ಬನ ಪ್ರಕಾರ ಮಹಿಳೆ ಮತ್ತಾಕೆಯ ಕುಟುಂಬ ಲೌಡ್ ಸ್ಪೀಕರುಗಳಲ್ಲಿ ದೊಡ್ಡ ದನಿಯಲ್ಲಿ ಹಾಡುಗಳನ್ನು ಹೇಳುತ್ತಾ ಹೋಗುತ್ತಿದ್ದಾಗ ಲೌಡ್ ಸ್ಪೀಕರ್ ಬಂದ್ ಮಾಡುವಂತೆ ಕೆಲವರು ಹೇಳಿದ್ದರು. ಇದನ್ನು ಸಹಿಸದ ಉಷಾದೇವಿ ಮನೆಯ ಪುರುಷರು ವಾಗ್ವಾದಕ್ಕಿಳಿದಿದ್ದರು ಎಂದು ಆತ ಹೇಳಿದ್ದಾನೆ.

ಆದರೆ ದೇವಳದ ಅರ್ಚಕ ಶ್ರವಣ್ ಗಿರಿ ಮಾತ್ರ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳುತ್ತಿದ್ದಾರೆ.‘‘ಕೆಲ ಮಹಿಳೆಯರು ಪೂಜೆ ಸಲ್ಲಿಸಲು ಬಂದಿದ್ದರು. ನಂತರ ನನಗೆ ದಕ್ಷಿಣೆ ಕೂಡ ನೀಡಿದರು’’ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News