ಸಚಿವ ಸ್ಥಾನಕ್ಕೆ ಪರಮೇಶ್ವರ್ ರಾಜೀನಾಮೆ ನೀಡಲಿ: ಕೆ.ಎಚ್.ಮುನಿಯಪ್ಪ

Update: 2017-05-06 14:38 GMT

ಹೊಸದಿಲ್ಲಿ, ಮೇ 6: ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರೆಯುವುದಾದರೆ ಗೃಹ ಸಚಿವರ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಗೂ ಭೇಟಿ ನೀಡಿ ಪಕ್ಷ ಸಂಘಟನೆ ಮಾಡಬೇಕಿದೆ. ಗೃಹ ಇಲಾಖೆಯು ಅತ್ಯಂತ ಸೂಕ್ಷ್ಮ ಇಲಾಖೆಯಾಗಿದ್ದು, ಏಕಕಾಲದಲ್ಲಿ ಪರಮೇಶ್ವರ್ ಎರಡು ಹುದ್ದೆಗಳನ್ನು ನಿಭಾಯಿಸುವುದು ಕಷ್ಟವಾಗಲಿದೆ ಎಂದರು.

 ಸರಕಾರದ ಕಾರ್ಯಕ್ರಮಗಳು ಜನರಿಗೆ ತಲುಪಬೇಕು, ಜಿಲ್ಲಾವಾರು ಸಭೆಗಳನ್ನು ಮಾಡಿ ಪಕ್ಷ ಸಂಘಟನೆ ಮಾಡಬೇಕಿದೆ. ಪರಮೇಶ್ವರ್‌ರನ್ನು ಗೃಹ ಸಚಿವರನ್ನಾಗಿ ಅಧಿಕಾರ ನೀಡಿದ ಬಳಿಕ, ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕವಾಗಲಿದೆ ಎಂದು ಭಾವಿಸಿದ್ದೆವು. ಆದರೆ, ಈವರೆಗೆ ಆಗಿಲ್ಲ ಎಂದು ಮುನಿಯಪ್ಪ ತಿಳಿಸಿದರು.

ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ್, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದು, ಹೈಕಮಾಂಡ್ ಯಾರನ್ನು ಆಯ್ಕೆ ಮಾಡುತ್ತದೋ ಅವರೊಂದಿಗೆ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.

ಹೈಕಮಾಂಡ್ ನನಗೆ ಅವಕಾಶ ನೀಡಿದರೆ ಪಕ್ಷದ ಎಲ್ಲ ನಾಯಕರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುಂದಿನ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಮುನಿಯಪ್ಪ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಬಯಸುತ್ತಿರುವ ಎಲ್ಲರೂ 50-60 ವರ್ಷ ವಯಸ್ಸಿನವರಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕರಾದ ಎ.ಕೆ.ಆ್ಯಂಟನಿ, ದಿಗ್ವಿಜಯ್‌ಸಿಂಗ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸೇರಿದಂತೆ ಇನ್ನಿತರರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇನೆ ಎಂದು ಅವರು ಹೇಳಿದರು.

ನೀವು ಹಿರಿಯರಾಗಿದ್ದು, ನಿಮ್ಮನ್ನು ಕೆಪಿಸಿಸಿಗೆ ನೂತನ ಅಧ್ಯಕ್ಷರ ನೇಮಕ ಸಂದರ್ಭದಲ್ಲಿ ಪರಿಗಣಿಸುತ್ತೇವೆ ಎಂದು ಹೈಕಮಾಂಡ್ ಹಾಗೂ ಪಕ್ಷದ ನಾಯಕರು ನನಗೆ ಭರವಸೆ ನೀಡಿದ್ದಾರೆ. ಎಲ್ಲ ವಿಷಯಗಳನ್ನು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಿದ್ದೇನೆ ಎಂದು ಮುನಿಯಪ್ಪ ಹೇಳಿದರು.

ರಾಜ್ಯದಲ್ಲಿ ಪಕ್ಷ ಸಂಘಟನೆಯ ಕೆಲಸ ಸ್ಥಗಿತವಾಗಿದೆ. ಆದಷ್ಟು ಬೇಗ ಹೈಕಮಾಂಡ್ ನೂತನ ಅಧ್ಯಕ್ಷರ ನೇಮಕಾತಿ ಕುರಿತು ತೀರ್ಮಾನ ಕೈಗೊಳ್ಳಲಿ. ಅಧ್ಯಕ್ಷರಾಗುವವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮುನಿಯಪ್ಪ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News