×
Ad

ಮರಳಿ ಮನೆಗೆ

Update: 2017-05-07 00:06 IST

ಇದು ಸಂಬಂಧಗಳ ಕತೆ. ಜಾಗತೀಕರಣದ ಹಿನ್ನೆಲೆಯಲ್ಲಿ ಕುಟುಂಬದೊಳಗೆ ಏರ್ಪಡುವ ತಾಕಲಾಟಗಳನ್ನು ಹಿಡಿದಿಡುವ ಕತೆಯೂ ಹೌದು. ಆಕರ್ಷಣೆಯಿಂದಲೋ, ಅನಿವಾರ್ಯತೆಗೋ ಹಳ್ಳಿಗಳಿಂದ ನಗರ-ಪಟ್ಟಣಗಳಿಗೆ ವಲಸೆ ಬಂದು ಬದುಕು ಕಟ್ಟಿಕೊಳ್ಳಲು ಹೆಣಗುವವರೂ ಇಲ್ಲಿ ಕಾಣಸಿಗುತ್ತಾರೆ. ಯಾವುದೋ ಒಂದು ಕೆಟ್ಟ ಗಳಿಗೆಯಲ್ಲಿ ಹೆತ್ತವರನ್ನು ತೊರೆದು ಬಂದು ಮುಂದೆ ಅವರ ದುಃಖಕ್ಕೆ ಎರವಾಗುವ, ಸ್ವತಃ ತಾವೂ ಅನಾಥರಂತೆ ಬದುಕುವ ಮಕ್ಕಳ ಕತೆಯನ್ನು ಭಾವುಕ ನೆಲೆಯಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಯೋಗೇಶ್ ಮಾಸ್ಟರ್.

ಮೂಲತಃ ಲೇಖಕರಾದ ಯೋಗೇಶ್ ಮಾಸ್ಟರ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನೆಮಾ. ಸುಮಾರು ಇಪ್ಪತ್ತು ವರ್ಷಗಳ ಹಿಂದೆ ತಾವೇ ಬರೆದಿದ್ದ ಕಾದಂಬರಿಯನ್ನು ಅದೇ ಶೀರ್ಷಿಕೆಯಡಿ ಈಗ ತೆರೆಗೆ ಅಳವಡಿಸಿದ್ದಾರೆ. ಚಿತ್ರಕತೆ, ಸಂಭಾಷಣೆ ರಚನೆಯ ಹೊಣೆಗಾರಿಕೆ ಜೊತೆ ಹಾಡುಗಳನ್ನೂ ಅವರೇ ರಚಿಸಿದ್ದಾರೆ. ಸದೃಢ ಕತೆ ಮತ್ತು ಸತ್ವಯುತ ಸಂಭಾಷಣೆ ಚಿತ್ರದ ಶಕ್ತಿ. ಲೇಖಕರೇ ತಮ್ಮ ಕಾದಂಬರಿಯನ್ನು ತೆರೆಗೆ ಅಳವಡಿಸಿರುವುದರ ಲಾಭ ಇದು. ಆದರೆ ನಿರೂಪಣೆಯ ಸಂದರ್ಭದಲ್ಲಿ ಒಂದಷ್ಟು ಮಿತಿಗಳಿವೆ.

ಇದರಿಂದಾಗಿ ಚಿತ್ರದ ಓಘಕ್ಕೆ ಆಗಾಗ ಅಡ್ಡಿಯಾಗುವುದು ಹೌದು. ಸರಳ ನಿರೂಪಣೆಗೆ ಮೊರೆ ಹೋಗಿರುವ ನಿರ್ದೇಶಕರಿಗೆ ತಾವು ದಾಟಿಸಬೇಕಿರುವ ಕತೆಯಷ್ಟೇ ಮುಖ್ಯವಾಗಿದೆ. ಆದರೇನಂತೆ ಸದೃಢ ಕತೆ ಇರುವುದರಿಂದಾಗಿ ಸಿನೆಮಾದ ತಾಂತ್ರಿಕ ಮಿತಿಗಳೂ ಗೌಣವಾಗುತ್ತವೆ. ರಂಗಭೂಮಿ ನಟ, ನಿರ್ದೇಶಕರೂ ಆಗಿರುವ ಯೋಗೇಶ್ ಸಿನೆಮಾದಲ್ಲಿ ರಂಗಭೂಮಿ ತಂತ್ರಗಳನ್ನೂ ಬಳಕೆ ಮಾಡಿದ್ದಾರೆ.

ಕನ್ನಡ ಸಿನೆಮಾ ಮಟ್ಟಿಗೆ ಖಂಡಿತವಾಗಿ ಇದೊಂದು ವಿಶಿಷ್ಟ ಪ್ರಯತ್ನ. ಇನ್ನು ಚಿತ್ರದ ಕಲಾವಿದರದ್ದು ಪಾತ್ರೋಚಿತ ಅಭಿನಯ. ನಿರ್ದೇಶಕರ ಆಣತಿಯಂತೆ ಎಲ್ಲರೂ ತಮ್ಮ ಪಾತ್ರಗಳನ್ನು ಉತ್ತಮವಾಗಿ ಪೋಷಿಸಿದ್ದಾರೆ. ಶೃತಿ ಅವರಿಗೆ ಇದು ವೃತ್ತಿ ಬದುಕಿನ ಶ್ರೇಷ್ಠ ಪಾತ್ರಗಳಲ್ಲೊಂದು ಎಂದು ಹೇಳಬಹುದು. ಸಂಗೀತ ಮತ್ತು ಛಾಯಾಗ್ರಹಣ ಕತೆಯ ಭಾವಕ್ಕೆ ಪೂರಕವಾಗಿದೆ. ಅಪ್ಪಟ ಕನ್ನಡದ ಸಿನೆಮಾಗಳ ಪಟ್ಟಿಗೆ ಸೇರ್ಪಡೆಯಾಗಬಹುದಾದ ಪ್ರಯೋಗವಿದು ಎಂದು ನಿಸ್ಸಂಶಯವಾಗಿ ಹೇಳಬಹುದು.

ನಿರ್ದೇಶನ: ಯೋಗೇಶ್ ಮಾಸ್ಟರ್, ನಿರ್ಮಾಣ: ಎಸ್.ಎನ್.ಲಿಂಗೇಗೌಡ ಮತ್ತು ಸುಭಾಷ್ ಎಲ್. ಗೌಡ, ಸಂಗೀತ: ಯೋಗೇಶ್ ಮಾಸ್ಟರ್ ಮತ್ತು ಗುರುಮೂರ್ತಿ ವೈದ್ಯ, ಛಾಯಾಗ್ರಹಣ: ರಾಜ್ ಶಿವಶಂಕರ್, ತಾರಾಗಣ: ಶೃತಿ, ಸುಚೇಂದ್ರ ಪ್ರಸಾದ್, ಶಂಕರ್ ಆರ್ಯನ್, ಸಹನಾ, ಅನಿರುದ್ಧ, ಆರುಂಧತಿ ಜಟ್ಕರ್ ಮತ್ತಿತರರು.

ರೇಟಿಂಗ್ - ***  ½
 

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News