×
Ad

ಹ್ಯಾಪಿ ನ್ಯೂ ಇಯರ್

Update: 2017-05-07 00:09 IST

ಚಿತ್ರವೊಂದರಲ್ಲಿ ಬಿಡಿಬಿಡಿ ಕತೆಗಳನ್ನು ಹೇಳುವ ಶೈಲಿ ಬೆಳ್ಳೆತೆರೆಗೆ ಹೊಸದೇನಲ್ಲ. ಹಿಂದಿ, ದಕ್ಷಿಣ ಭಾರತದ ಇತರ ಭಾಷೆಗಳಲ್ಲದೆ ಕನ್ನಡದಲ್ಲೂ ಅಂತಹ ಪ್ರಯೋಗಗಳಾಗಿವೆ. ಈ ಪಟ್ಟಿಗೆ ಮತ್ತೊಂದು ಸೇರ್ಪಡೆ ‘ಹ್ಯಾಪಿ ನ್ಯೂ ಇಯರ್’. ಇದು ನಿರ್ದೇಶಕ ಪನ್ನಗ ಭರಣ ಅವರಿಗೆ ಚೊಚ್ಚಲ ನಿರ್ದೇಶನದ ಸಿನೆಮಾ. ನಿರೂಪಣೆಯಲ್ಲಿ ಹೊಸತನ ಇರಬೇಕೆಂದು ಅವರು ಪಣತೊಟ್ಟು ಸಿನೆಮಾ ಮಾಡಿದ್ದಾರೆ. ಈ ಹಂತದಲ್ಲಿ ಅವರಿಗೆ ಸಂಪೂರ್ಣ ಯಶಸ್ಸು ಸಿಕ್ಕಿಲ್ಲ ಎಂದೇ ಹೇಳಬಹುದು. ಸಿನೆಮಾದ ಇತರ ತಾಂತ್ರಿಕ ವಿಭಾಗಗಳಲ್ಲಿ ಸೂಕ್ತ ನೆರವು ಸಿಕ್ಕಿದ್ದರೂ ನಿರೂಪಣೆಯಲ್ಲಿ ಹಿಡಿತ ಕಂಡುಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.

ಚಿತ್ರದಲ್ಲಿ ಐದು ಬೇರೆ ಬೇರೆ ಕತೆಗಳಿವೆ. ಒಂದೊಕ್ಕೊಂದು ಸಂಬಂಧವಿಲ್ಲದ ಈ ಕತೆಗಳು ಪ್ರತ್ಯೇಕ ಟ್ರ್ಯಾಕ್‌ನಲ್ಲಿ ಸಾಗುತ್ತವೆ. ಐದು ಭಿನ್ನ ಕತೆಗಳನ್ನು ಆಯ್ದುಕೊಳ್ಳುವಲ್ಲಿ ಜಾಣ್ಮೆ ಮೆರೆದಿರುವ ಪನ್ನಗ ಅವರು ನಿರೂಪಣೆಯಲ್ಲಿ ಹದ ಕಾಯ್ದುಕೊಳ್ಳುವಲ್ಲಿ ವಿಫಲವಾಗಿದ್ದಾರೆ. ಇದರಿಂದಾಗಿ ಚಿತ್ರದ ದ್ವಿತೀಯಾರ್ಧದಲ್ಲಿ ಸಂಭವಿಸಬಹುದಾದ ತಿರುವುಗಳನ್ನು ಎದುರುಗೊಳ್ಳಲು ವೀಕ್ಷಕರಲ್ಲಿ ತಾಳ್ಮೆಯೇ ಉಳಿದಿರುವುದಿಲ್ಲ. ಚಿತ್ರದ ಛಾಯಾಗ್ರಹಣ ಸೊಗಸಾಗಿದ್ದು ರಘು ದೀಕ್ಷಿತ್ ಹಿನ್ನೆಲೆ ಸಂಗೀತ ವೇಗದ ನಿರೂಪಣೆಗೆ ಹೊಂದಿಕೆಯಾಗಿದೆ. ನಿರೂಪಣೆ ಮತ್ತು ಸಂಕಲನ ಹರಿತವಾಗಿದ್ದಿದ್ದರೆ ಒಂದೊಳ್ಳೆಯ ಪ್ರಯೋಗ ಆಗುವ ಎಲ್ಲಾ ಸಾಧ್ಯತೆಗಳು ಈ ಸಿನೆಮಾಕ್ಕೆ ಇತ್ತು.

ನಟನೆಯಲ್ಲಿ ಧನಂಜಯ ಮತ್ತು ಶೃತಿ ಹರಿಹರನ್ ಹೆಚ್ಚು ಸ್ಕೋರ್ ಮಾಡುತ್ತಾರೆ. ಬೆಳ್ಳಿತೆರೆಗೆ ಪದಾರ್ಪಣೆ ಮಾಡಿರುವ ಸೃಷ್ಟಿ ಪಾಟೀಲ್ ನಟನೆಯಲ್ಲಿನ್ನೂ ಪಳಗಬೇಕು. ಪ್ರೌಢ ಪಾತ್ರಗಳೊಂದಿಗೆ ಕತೆ ಹೆಣೆದಿರುವ ನಿರ್ದೇಶಕರು ದ್ವಂದ್ವಾರ್ಥಗಳ ಸಂಭಾಷಣೆಯಿಂದ ದೂರ ಉಳಿಯಬಹುದಿತ್ತೇನೋ... ಹೊಸತನದೊಂದಿಗೆ ನಿರ್ದೇಶನಕ್ಕಿಳಿದಿರುವ ಪನ್ನಗ ಅವರಿಂದ ಮುಂದಿನ ದಿನಗಳಲ್ಲಿ ಒಳ್ಳೆಯ ಸಿನೆಮಾ ನಿರೀಕ್ಷಿಸಬಹುದು.

ನಿರ್ದೇಶನ: ಪನ್ನಗ ಭರಣ, ನಿರ್ಮಾಣ: ವನಜಾ ಪಾಟೀಲ್, ಸಂಗೀತ: ರಘು ದೀಕ್ಷಿತ್, ಛಾಯಾಗ್ರಹಣ: ಶ್ರೀಷಾ ಕೂಡುವಳ್ಳಿ, ತಾರಾಗಣ: ಧನಂಜಯ್, ಶೃತಿ ಹರಿಹರನ್, ಸಾಯಿ ಕುಮಾರ್, ಬಿ.ಸಿ.ಪಾಟೀಲ್, ಸುಧಾರಾಣಿ, ದಿಗಂತ್, ಸೋನು ಗೌಡ ಮತ್ತಿತರರು.

ರೇಟಿಂಗ್ - **1/2

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News