ಎದೆ ಸೀಳಿದ ಗುಂಡು!

Update: 2017-05-07 05:08 GMT

‘‘ಅರೇ ಗೊತ್ತಿಲ್ಲವೇ? ನಾನು ಅಮೆರಿಕಕ್ಕೆ ಹೋಗೋದು ಇಡೀ ಊರಿಗೆ ಗೊತ್ತು. ಹೆಚ್ಚಿನ ಓದಿಗಾಗಿ ಹೋಗುತ್ತಿದ್ದೇನೆ. ನಾನೊಂದು ಥೀಸಿಸ್ ಕೂಡ ಮಾಡುತ್ತಿದ್ದೇನೆ. ನನಗೆ ಶಾಲೆಯಲ್ಲಿ ಒಂದು ಸನ್ಮಾನ ಕಾರ್ಯಕ್ರಮ ಕೂಡ ಇತ್ತು. ನೀನೂ ಇರಬೇಕಾಗಿತ್ತು ಅದನ್ನು ನೋಡಲು....ಇಲ್ಲೇ ಕೂತಿರು. ಚಾ ತರ್ತೇನೆ’’

ಜಾನಕಿ ಅಡುಗೆ ಮನೆಯತ್ತ ನಡೆದಳು. ಇವಳು ತನ್ನ ಜಾನಕಿಯೇ? ಹಾಗಾದರೆ ಅವಳ ಹಣೆಯಲ್ಲಿ ಇಷ್ಟಗಲ ಕಣ್ಣುಕುಕ್ಕಿಸುತ್ತಿದ್ದ ಕುಂಕುಮ ಏನಾಯಿತು? ಸಾಂಪ್ರದಾಯಿಕ ಗಚ್ಚೆ ಲಂಗ ಧರಿಸುತ್ತಿದ್ದ ಜಾನಕಿ ಜೀನ್ಸ್ ಧರಿಸುವುದಕ್ಕೆ ಹೇಗೆ ಸಾಧ್ಯ? ಜೊತೆಗೆ ಟೀಶರ್ಟ್!

‘ಛೇ...ಗುರೂಜಿಯಾದರೂ ಇದ್ದಿದ್ದರೆ...’ ಅನ್ನಿಸಿತು. ತಾನೆಲ್ಲೋ ತಪ್ಪಿ ಬೇರೆ ಮನೆಗೆ ಬಂದಿದ್ದೇನೆಯೇ? ಈಕೆ ಜಾನಕಿಯಂತೆ ನನ್ನಲ್ಲಿ ನಟಿಸುತ್ತಿದ್ದಾಳೆಯೇ? ಎಂದೆಲ್ಲ ಕುಳಿತಲ್ಲೇ ಯೋಚಿಸತೊಡಗಿದ.

ತುಸು ಹೊತ್ತಲ್ಲೇ ಕಾಫಿಯೊಂದಿಗೆ ಪಪ್ಪುವಿನ ಎದುರು ಬಂದು ನಿಂತಳು ಜಾನಕಿ. ಪಪ್ಪು ಕಾಫಿಯನ್ನು ಇನ್ನೇನು ತುಟಿಗಿಡಬೇಕು. ‘‘ಅಲ್ವೋ ಪಪ್ಪು...ಹೋಗಿ ಹೋಗಿ ನೀನು ಸೇನೆಗೆ ಯಾಕೆ ಸೇರಿದೆ?’’ ಜಾನಕಿ ಕೇಳಿ ಬಿಟ್ಟಳು.

ಇದೀಗ ಗಡಿಯಾಚೆಯಿಂದ ತೂರಿ ಬಂದ ಗುಂಡು ನೇರ ಎದೆಯನ್ನೇ ಹೊಕ್ಕಂತೆ ಪಪ್ಪು ‘‘ಆಹ್...’’ ಎಂದ.

‘‘ಏನಾಯಿತು?’’ ಜಾನಕಿ ಆತಂಕದಿಂದ ಕೇಳಿದಳು. ‘‘ಬಿಸಿಯಿದೆ. ನಾಲಗೆ ಸುಟ್ಟಿತು’’ ಎನ್ನುತ್ತಾ ಪಪ್ಪು ಕಾಫಿಯ ಕಪ್‌ನ್ನು ನೆಲದ ಮೇಲಿಟ್ಟ.

‘‘ತಣ್ಣಗಾಗಲಿ. ಆ ಮೇಲೆ ಕುಡಿ....’’ ಎಂದಳು ಜಾನಕಿ.

ಪಪ್ಪು ಗರಬಡಿದವನಂತೆ ಜಾನಕಿಯ ಮುಖ ನೋಡುತ್ತಿದ್ದ. ‘‘ಅಲ್ವೋ...ಡಿಗ್ರಿ ಮಾಡ್ಕೊಂಡು ಯಾವುದಾದರೂ ಒಂದು ಮರ್ಯಾದೆಯ ಕೆಲಸ ಹಿಡಿಯೋದು ಬಿಟ್ಟು ಹೋಗಿ ಹೋಗಿ ಸೇನೆ ಸೇರಿದ್ದೀಯಲ್ಲ...ಬುದ್ಧಿ ಇದೆಯ ನಿನಗೆ? ಸೇನೆಯೊಳಗೆ ನೀನು ಅದು ಹೇಗೆ ಅಡ್ಜಸ್ಟ್ ಆಗುತ್ತಿದ್ದೀಯ?’’ ಜಾನಕಿ ಪಟಪಟನೆ ಸಿಡಿಸತೊಡಗಿದಳು.

ಪಪ್ಪು ಆಕೆಯಿಂದ ಹೊರಬೀಳುತ್ತಿರುವ ಒಂದೊಂದು ಶಬ್ದಗಳಿಗೂ ತತ್ತರಿಸುತ್ತಿದ್ದ. ‘‘ನಾನು ಅಮೆರಿಕದ ವಿಶ್ವವಿದ್ಯಾನಿಲಯ ಒಂದರಲ್ಲಿ ಮಾನವ ಹಕ್ಕುಗಳ ಬಗ್ಗೆಯೇ ವಿಶೇಷ ಅಧ್ಯಯನ ಮಾಡುತ್ತಿದ್ದೇನೆ. ಯುದ್ಧದ ಹೆಸರಿನಲ್ಲಿ ನಡೆಯುತ್ತಿರುವ ರಾಜಕೀಯ, ಮಾನವ ಹಕ್ಕು ಉಲ್ಲಂಘನೆಯೂ ಅಧ್ಯಯನದ ಭಾಗ. ಅದರಲ್ಲಿ ನಮ್ಮೂರಿನ ಹುತಾತ್ಮ ಯೋಧ ವೆಂಕಟನ ಬಗ್ಗೆಯೂ ಒಂದು ಭಾಗ ಇದೆ...’’

ಜಾನಕಿ...ಬೇಡ...ಸಾಕು ಮಾಡು....ಪಪ್ಪುವಿನ ಮನಸ್ಸು ರೋದಿಸತೊಡಗಿತು. ಆಕೆ ಮಾತ್ರ ಅವನ ಕಡೆಗೆ ಗಮನ ಹರಿಸದೆ ಮುಂದುವರಿಸಿದ್ದಾಳೆ. ‘‘ಹೇ...ನಿನಗೆ ವೆಂಕಟನ ಬಗ್ಗೆ ಗೊತ್ತಾ? ಅದೇ ನಮ್ಮೂರ ಯೋಧ ವೆಂಕಟ್...ಕಾರ್ಗಿಲ್ ಯುದ್ಧದಲ್ಲಿ ತೀರಿ ಹೋದನಲ್ಲ...ಅವನ ಮನೆಗೆ ನಾನು ಹೋಗಿದ್ದೆ...’’

ಪಪ್ಪು ಅವಳ ಮಾತನ್ನು ಕೇಳಿಸಿಕೊಳ್ಳುತ್ತಿದ್ದನೇ ಹೊರತು ಪ್ರತಿಕ್ರಿಯಿಸುವ ಶಕ್ತಿ ಅವನಿಗಿರಲಿಲ್ಲ.

‘‘ಅವನ ಹೆಂಡತಿಯನ್ನು ಇಂಟರ್ವ್ಯೆ ಮಾಡಿದೆ. ಅಷ್ಟೇ ಅಲ್ಲ ವೆಂಕಟ್ ಕುರಿತಂತೆ ಬೇರೆ ಮೂಲ ಗಳಿಂದಲೂ ಕೆಲವು ಮಾಹಿತಿಗಳನ್ನು ಸಂಗ್ರಹಿಸಿದ್ದೇನೆ...ಅವನ ಬಗ್ಗೆ ಪ್ರತ್ಯೇಕವಾಗಿ ಒಂದು ಪುಸ್ತಕವನ್ನು ಬರೆದರೆ ಹೇಗೆ ಎಂದೂ ಯೋಚಿಸುತ್ತಿದ್ದೇನೆ...’’

‘‘ನೀನೇ ಹೇಳಿದ್ದೆಯಲ್ಲ ಜಾನಕಿ...ಅವನ ದೇಹಕ್ಕೆ 25 ಗುಂಡುಗಳು ಬಿದ್ದಿದ್ದು...ಕಾರ್ಗಿಲ್ ಯುದ್ಧದಲ್ಲಿ ಅವನು ವೀರಾವೇಶದಿಂದ ಹೋರಾಡಿದ್ದು...ಅದನ್ನೆಲ್ಲ ಪುಸ್ತಕದಲ್ಲಿ ಬರೀತೀಯಲ್ಲ?’’ ಪಪ್ಪು ಗೊಗ್ಗರು ಸ್ವರದಿಂದ ಕೇಳಿದ.

‘‘ನಾನು ಯಾವಾಗ ಹೇಳಿದ್ದೆ? ನಿನಗೆ ವಿಷಯವೇ ಗೊತ್ತಿಲ್ಲವ ಹಾಗಾದರೆ? ವೆಂಕಟ್ ಸತ್ತಿದ್ದು ಕಾರ್ಗಿಲ್ ಯುದ್ಧದಲ್ಲಿ ಅಲ್ಲ...’’

 ಅಪ್ಪಯ್ಯ ಹೇಳಿದ ಮಾತುಗಳಿಂದಾದ ಗಾಯ ಒಣಗಿತ್ತು ಎಂದರೆ, ಇದೀಗ ಪಕ್ಕನೆ ಬಾಯಿ ತೆರಿದಿದೆ. ಜಾನಕಿ ಆ ಗಾಯವನ್ನು ಮತ್ತೆ ಕೊರೆಯ ತೊಡಗಿದ್ದಾಳೆ. ಇವೆಲ್ಲ ಈಗ ಅಗತ್ಯವಿತ್ತೆ ಜಾನಕಿ...ನಾನು ನಿನ್ನ ಮುಖಕ್ಕೆ ಮುಖ ಕೊಟ್ಟು ಪ್ರೀತಿಯನ್ನು ಅರುಹಲು ಬಂದವನು. ಒಮ್ಮೆ ನಾನು ಬರೆದ ಆ ಪತ್ರವನ್ನು ನೀನು ಓದಬೇಕು ಎಂಬ ಹಂಬಲಿಕೆಯಲ್ಲಿ ಬಂದವನು. ಆದರೆ ನೀನು ಮಾಡುತ್ತಿರುವುದೇನು?

ಕನಿಷ್ಠ ನನ್ನ ಕೈಯಲ್ಲಿದ್ದ ‘ರಣ ವಿಕ್ರಮ’ ಪುಸ್ತಕವನ್ನಾದರೂ ನೀನು ಗಮನಿಸಬಹುದಿತ್ತು. ಅದು ನೀನೇ ನನಗೆ ಕೊಟ್ಟ ಪುಸ್ತಕ. ಕನಿಷ್ಠ ಒಮ್ಮೆ ಅದನ್ನು ಬಿಡಿಸಿ ನೋಡಬಹುದಿತ್ತು. ‘ಇದೇಕೆ ಈಗ ನಿನ್ನ ಕೈಯಲ್ಲಿದೆ?’ ಎಂದು ಕೇಳಬಹುದಿತ್ತು. ಪುಟಗಳನ್ನು ಬಿಡಿಸುವಾಗ ಒಂದು ಪತ್ರದ ಪಳೆಯುಳಿಕೆಗಳು ನಿನ್ನ ಕಣ್ಣಿಗೆ ಬೀಳಬಹುದಿತ್ತು. ‘‘ಯೋಧ ವೆಂಕಟ್‌ನ ಸಾವು ಒಂದು ಕೊಲೆ. ಅದೊಂದು ಅನುಮಾನಾಸ್ಪದ ಸಾವು. ವೆಂಕಟ್ ಕಾರ್ಗಿಲ್ ಗಡಿಯಲ್ಲಿ ಕೆಲಸವೇ ಮಾಡಿರಲಿಲ್ಲ. ಆತ ತನ್ನ ಯುನಿಟ್‌ನಲ್ಲಿ ಇದ್ದನಂತೆ. ತಾನು ಹೇಳಿದ ಕೆಲಸ ಮಾಡಿಲ್ಲ ಎಂಬ ಸಿಟ್ಟಲ್ಲಿ ಕಂಠಪೂರ್ತಿ ಕುಡಿದಿದ್ದ ಮೇಲಕಾರಿಯೇ ಅವನನ್ನು ಗುಂಡಿಟ್ಟು ಕೊಂದನಂತೆ....’’

ಪಪ್ಪು ತಟ್ಟನೆ ಎಂದು ನಿಂತ ‘‘ಜಾನಕಿ...ನನಗೆ ಅರ್ಜಂಟ್ ಸ್ವಲ್ಪ ಕೆಲಸವಿದೆ. ಬಂದೆ...’’ ಎಂದವನೇ ಮನೆಯಿಂದ ಹೊರ ಬಂದ.

‘‘ಪಪ್ಪು ಒಂದು ನಿಮಿಷ ನಿಲ್ಲು...’’ ಜಾನಕಿ ಕೂಗಿದಳು.

ಪಪ್ಪು ನಿಂತ. ಅವನ ಸಮೀಪ ಬಂದ ಜಾನಕಿ ಒಂದು ಕ್ಷಣ ಅವನ ಕಣ್ಣಿಗೆ ಕಣ್ಣು ಕೊಟ್ಟಳು. ಅವನ ಕಣ್ಣಲ್ಲಿ ಅದೇನನ್ನೋ, ಅದ್ಯಾರನ್ನೋ ಹುಡುಕುವವಳಂತೆ. ‘‘ನಾನು ನಿನಗೇನೋ ಕೊಡಬೇಕು. ಅಮೆರಿಕಕ್ಕೆ ಹೋದ ಬಳಿಕ ಮತ್ತೆ ಭೇಟಿಯಾಗುತ್ತೇವೆಯೋ ಇಲ್ಲವೋ? ಯಾರಿಗೆ ಗೊತ್ತು? ನನ್ನ ನೆನಪಿಗಾಗಿ ನಿನಗೊಂದು ಸಣ್ಣ ಉಡುಗೊರೆ ಕೊಡಬೇಕಾಗಿದೆ. ಸ್ವಲ್ಪ ನಿಲ್ಲು’’ ಜಾನಕಿ ಒಳಗೆ ಹೋದಳು.

ಪಪ್ಪುವಿಗೆ ಉಸಿರುಗಟ್ಟುತ್ತಿತ್ತು. ಒಮ್ಮೆ ಆ ಮನೆಯ ಅಂಗಳ ದಾಟಿದರೆ ಸಾಕು ಎನ್ನುವಂತಾಗಿತ್ತು. ಇದೀಗ ಜಾನಕಿ ಅದೇನು ಉಡುಗೊರೆಯನ್ನು ಕೊಡಲು ಮುಂದಾಗಿದ್ದಾಳೆ? ಶವಪೆಟ್ಟಿಗೆಯಾಗಿರಬಹುದೇ? ಆಕೆ ನನ್ನ ಕಣ್ಣಲ್ಲಿ ಕಣ್ಣಿಟ್ಟು ಹುಡುಕಿದ್ದು ಏನನ್ನು? ವೆಂಕಟನ ಹೆಣವನ್ನೇ?

ತುಸು ಹೊತ್ತಲ್ಲೇ ಅವಳು ಹೊರ ಬಂದಳು. ಅವಳ ಮುಖ ಗಂಭೀರವಾಗಿತ್ತು. ಅವಳ ಕೈಯಲ್ಲಿ ಅದೇನೋ ಇತ್ತು.

ಓಹ್ ಅದೊಂದು ಪೆನ್ನು. ಬಂಗಾರದ ಬಣ್ಣದ ಪೆನ್ನು!

‘‘ಪಪ್ಪು ಈ ಪೆನ್ನಿನ ಬಗ್ಗೆ ನಾನು ನಿನಗೆ ಈ ಹಿಂದೆ ಹೇಳಿರಬೇಕು...ಇದು ವಿವೇಕ ಶ್ರೀ ಕಾಲೇಜಿನಲ್ಲಿ ಕನ್ನಡ ಪಂಡಿತರು ಉಡುಗೊರೆಯಾಗಿ ಕೊಟ್ಟ ಪೆನ್ನು’’ ಎನ್ನುತ್ತಾ ಪೆನ್ನನ್ನು ಪಪ್ಪುವಿಗೆ ಹಸ್ತಾಂತರಿಸಿದಳು. ‘‘ಹೌದು. ನೀನು ಅದ್ಯಾವುದೋ ರಾಮಾಯಣ ಪರೀಕ್ಷೆಯಲ್ಲಿ ಗೆದ್ದಾಗ ಪಂಡಿತರು ಮೆಚ್ಚಿ ಉಡುಗೊರೆ ನೀಡಿದ ಪೆನ್ನು...’’ ಪಪ್ಪು ಬಾಯಿಂದ ಹೊರಬಿತ್ತು.

ಜಾನಕಿ ಯಾಕೋ ವೌನವಾದಳು. ತುಸು ಹೊತ್ತಿನ ಬಳಿಕ ಅವಳೇ ಮಾತನಾಡತೊಡಗಿದಳು.

‘‘ಹೌದು. ಆದರೆ ಈ ಪೆನ್ನನ್ನು ಕನ್ನಡ ಪಂಡಿತರು ಬಹುಮಾನವಾಗಿ ಕೊಟ್ಟದ್ದು ನನಗಲ್ಲ. ನನ್ನೊಬ್ಬ ಸ್ನೇಹಿತನಿಗೆ. ನಾನು ಅವತ್ತು ನಿನ್ನ ಬಳಿ ಸುಳ್ಳು ಹೇಳಿದ್ದೆ...ಅವನೂ ನಿನ್ನಂತೆಯೇ ಇದ್ದ. ಮೊದ್ದು ಮೊದ್ದಾಗಿ. ನನಗೆ ಅವನನ್ನು ನೋಡಿದಾಗ ನಿನ್ನನ್ನೇ ನೋಡಿದಂತೆ ಅನ್ನಿಸುತ್ತಿತ್ತು. ಒಳ್ಳೆಯ ಭಾಷಣಕಾರ. ಕಲಿಯುವುದರಲ್ಲಂತೂ ತುಂಬಾ ಜಾಣ. ರಾಮಾಯಣ ಪರೀಕ್ಷೆಯಲ್ಲಿ ರಾಜ್ಯಕ್ಕೇ ಬಹುಮಾನವನ್ನು ಪಡೆದಿದ್ದ...ಅವನ ಹೆಸರು ಮುಸ್ತಾ ಅಂತ. ಈ ಪೆನ್ನನ್ನು ಆ ಸ್ನೇಹಿತನಿಗೆ ಕನ್ನಡ ಪಂಡಿತರು ಕೊಟ್ಟಿದ್ದರು. ಆಗ ನಮ್ಮ ಬದುಕಿನಲ್ಲಿ ಇದಕ್ಕಿಂತ ಅಮೂಲ್ಯವಾದ ಒಂದು ವಸ್ತು ಇರಲಿಲ್ಲ. ಇದನ್ನು ಆ ಗೆಳೆಯ ನನ್ನ ಹುಟ್ಟು ಹಬ್ಬಕ್ಕೆ ಉಡುಗೊರೆಯಾಗಿ ಕೊಟ್ಟ.’’

ಪಪ್ಪು ಕಲ್ಲಿನಂತೆ ನಿಂತು ಜಾನಕಿಯನ್ನು ನೋಡುತ್ತಿದ್ದ.

‘‘ಈಗ ಅವನ ಪ್ರಸ್ತಾಪವೇ ಬೇಡ. ಅವನೆಲ್ಲಿದ್ದಾನೆ, ಹೇಗಿದ್ದಾನೆ ಎನ್ನುವುದೂ ಗೊತ್ತಿಲ್ಲ....’’ ಎಂದವಳು ಮನೆಯ ಒಳ ಹೋಗಿ ಬಿಟ್ಟಳು.

25 ಗುಂಡುಗಳು ನಾಲ್ದೆಸೆಗಳಿಂದ ಯೋಧ ವೆಂಕಟನ ದೇಹವನ್ನು ಸೀಳುತ್ತಿರುವಾಗ ಅವನಿಗೆ ಇಷ್ಟು ನೋವಾಗಿರಬಹುದೇ? ಅವನ ದೇಹದಿಂದ ಇಷ್ಟೊಂದು ರಕ್ತ ಸುರಿದಿರಬಹುದೇ? ಪಪ್ಪು ತನಗೆ ತಾನೆ ಮಾತನಾಡಿಕೊಳ್ಳುತ್ತಿದ್ದ. ಅವಳೆಡೆಯಿಂದ ಸಿಡಿದ ಅಷ್ಟೂ ಗುಂಡುಗಳು ನನ್ನನ್ನು ಛಿದ್ರಗೊಳಿಸುತ್ತಿದ್ದರೂ ನಾನು ಹೇಗೆ ಎದೆಯುಬ್ಬಿಸಿ ನಡೆಯುತ್ತಿದ್ದೇನೆ....ಏನಾಶ್ಚರ್ಯ?

ನಾನು ನಡೆದು ಹೋಗುತ್ತಿರುವುದನ್ನು ಪ್ರಾಥಮಿಕ ಶಾಲೆಯ ಮಕ್ಕಳು ಸಾಲಾಗಿ ನಿಂತು ನೋಡುತ್ತಿದ್ದಾರೆ.

‘ಅದೋ ನಮ್ಮೂರಿನ ಹೆಮ್ಮೆಯ ಯೋಧ ಪ್ರತಾಪಸಿಂಹ. ಅಷ್ಟೂ ಗುಂಡುಗಳ ದಾಳಿಯಿಂದಲೂ ವಿಚಲಿತನಾಗದೆ ದೇಹ ತುಂಬಾ ರಕ್ತ ಸುರಿಸಿಕೊಂಡು ಎದ್ದು ನಡೆದು ಹೋಗುತ್ತಿದ್ದಾನೆ...ಒಂದಿಷ್ಟು ತೂರಾಡಿಲ್ಲ. ಕಣ್ಣಿಂದ ಒಂದು ಹನಿಯೂ ಉದುರಿ ಬಿದ್ದಿಲ್ಲ....’

ಮನೆಯ ಕಡೆಗಿರುವ ಕಿರು ಸೇತುವೆಯನ್ನು ದಾಟುವಾಗ ಅದೇನನಿಸಿತೋ, ಕೈಯಲ್ಲಿದ್ದ ಪೆನ್ನನ್ನು ಆ ಕೆಸರು ತುಂಬಿರುವ ತೋಡಿಗೆ ಎಸೆದು ಬಿಟ್ಟ. ಅದಾವುದೋ ಹೊಲಸೊಂದನ್ನು ಮುಟ್ಟಿದವನಂತೆ ಕೈಯನ್ನೇ ನೋಡಿದ. ಏನೋ ವಾಸನೆ ಹೊಡೆದಂತಾಗಿ ಕೈಯನ್ನು ಮೂಗಿನ ಬಳಿ ತಂದ. ದೂರದಲ್ಲಿ ಮಗ ಬರುತ್ತಿರುವುದನ್ನು ಕಂಡದ್ದೇ ಲಕ್ಷ್ಮಮ್ಮ ಕೂಗಿದಳು ‘‘ಮಗಾ, ಊಟ ತಯಾರಿದೆ. ಕೈ ಕಾಲು ತೊಳೆದು ಬಾ...’’

‘‘ಬೇಡಮ್ಮ...ನನಗೆ ಇನ್ನೂ ಸ್ವಲ್ಪ ನಿದ್ದೆ ಮಾಡಬೇಕು....’’ ಎಂದವನೇ ಬಚ್ಚಲು ಮನೆಗೆ ಹೋಗಿ ಕೈಯನ್ನು ಸೋಪು ಹಾಕಿ ತೊಳೆದ. ಮತ್ತೆ ಮೂಸಿ ನೋಡಿದ. ವಾಸನೆ ಇನ್ನೂ ಇದೆ ಅನ್ನಿಸಿ ಮತ್ತೆ ಸೋಪು ಹಾಕಿ ಕೈಯನ್ನು ಉಜ್ಜಿ ಉಜ್ಜಿ ತೊಳೆದ. ಬಳಿಕ ಕೋಣೆ ಹೊಕ್ಕು ಬಾಗಿಲು ಹಾಕಿಕೊಂಡ. ಗುರೂಜಿ ಮನೆಯಿಂದ ಮರಳಿದ ಮಗನ ಅನ್ಯಮನಸ್ಕತೆ ಕಂಡು ತಾಯಿಯ ಕಣ್ಣೇಕೋ ಅದುರಿತು.

***

ಮರುದಿನ ಅನಂತ ಭಟ್ಟರು ಕೇಳಿದರು ‘‘ಪಪ್ಪು...ಇವತ್ತು ಜಾನಕಿ ಅಮೆರಿಕಕ್ಕೆ ಹೊರಡುವ ದಿನ. ಹೋಗಿ ಬರೋಣ.... ಕಾರಿನಲ್ಲಿ ಜಾಗವಿದೆ. ಮಂಗಳೂರಿನವರೆಗೆ ಬರುವುದಾದರೆ ಬನ್ನಿ ಎಂದಿದ್ದಾರೆ ಗುರೂಜಿ...’’

‘‘ಬೇಡಪ್ಪ...ನನಗೆ ಮನಸ್ಸಿಲ್ಲ. ಸಣ್ಣಗೆ ಜ್ವರ ಬೇರೆ. ನೀವು ಹೋಗಿ ಬನ್ನಿ’’ ಪಪ್ಪು ಉತ್ತರಿಸಿದ.

ಮಗ ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ಮತ್ತೆ ಒತ್ತಾಯ ಮಾಡಲು ಹೋಗಲಿಲ್ಲ. ಮಗನನ್ನು ಬಿಟ್ಟು ಹೋಗಲು ಅನಂತಭಟ್ಟರಿಗೂ ಮನಸ್ಸಿರಲಿಲ್ಲ. ಆದರೆ ಗುರೂಜಿ ಬೇಸರಿಸಬಹುದು ಎಂದು ಮನೆಯಿಂದ ಹೊರಟರು.

ಒಂದೆರಡು ದಿನ ಮನೆ ಬಿಟ್ಟು ಪಪ್ಪು ಕದಲಲೇ ಇಲ್ಲ. ಅನಂತ ಭಟ್ಟರೇ ಅವನಿಗೆ ಹೇಳುವರು

‘‘ಪಪ್ಪು ಬಜತ್ತೂರಿಗೆ ಹೋಗಿ ನಿನ್ನ ಹಳೆಯ ಗೆಳೆಯರನ್ನೆಲ್ಲ ಒಮ್ಮೆ ಭೇಟಿ ಮಾಡಿ ಬರಬಾರದೇ? ಸುಬ್ಬಣ್ಣ ಮೇಷ್ಟ್ರನ್ನೊಮ್ಮೆ ಕಾಣು....ಹಾಗೆಯೇ ನಿನ್ನ ಹಳೆಯ ಸಂಗೀತ ಮೇಷ್ಟ್ರು ನಿನ್ನನ್ನು ನೋಡಬೇಕು ಎಂದಿದ್ದರು...’’

ಪಪ್ಪು ಮಾತ್ರ ಕೋಣೆ ಬಿಟ್ಟು ಕದಲಲಿಲ್ಲ.

(ಗುರುವಾರದ ಸಂಚಿಕೆಗೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News