ಮೃತ ಕ್ರೀಡಾಪಟುವಿನ ಎದೆಬಡಿತ ಆಲಿಸುವ ತಾಯಿಯ ಬಯಕೆ!

Update: 2017-05-07 05:53 GMT

ಅದೊಂದು ಬೆಳಗ್ಗೆ ಜಿಮ್ನಾಶಿಯಂನಲ್ಲಿ ಭಾರ ಎತ್ತುವ ವ್ಯಾಯಾಮ ಮಾಡುತ್ತಿದ್ದ ಕಾನ್ರಾಡ್ ರೀಯ್‌ಲ್ಯಾಂಡ್‌ಗೆ ಏಕಾಏಕಿ ತಲೆಯ ಹಿಂಭಾಗ ಛಳಕು ಹೊಡೆದಂತಾಯಿತು. ಎಡಗಣ್ಣಿನಲ್ಲಿ ಸಣ್ಣಗೆ ಶುರುವಾದ ನೋವು ಬೆಳೆದು ಯಾತನೆ ನೀಡತೊಡಗಿತು. ಗೆಳೆಯರ ಸಹಾಯ ಪಡೆದು ಹತ್ತಿರದ ಸುಸಜ್ಜಿತ ಆಸ್ಪತ್ರೆ ಸೇರಿದ ಕಾನ್ರಾಡ್ ಪುನಃ ಜೀವಂತವಾಗಿ ಹೊರ ಬರಲೇ ಇಲ್ಲ.

ಆರೂವರೆ ಅಡಿ ಎತ್ತರದ, ಇನ್ನೂರ ಎಪ್ಪತ್ತು ಪೌಂಡ್ ತೂಕವಿದ್ದ ದೊಡ್ಡ ದೇಹದ ಕಾನ್ರಾಡ್‌ಗೆ ಅಕಸ್ಮಾತಾಗಿ ಅವಗೂ ಮುನ್ನ ಸಾವಿನ ಕರೆ ಬಂದಾಗ ಅವನಿಗಿನ್ನೂ ಕೇವಲ ಇಪ್ಪತ್ತೊಂಬತ್ತು ವರ್ಷಗಳಾಗಿತ್ತು.

ಈ ಕಾನ್ರಾಡ್ ಸಾಯುವ ಕೆಲವೇ ತಿಂಗಳ ಮುನ್ನ ತನ್ನ ಡ್ರೆವಿಂಗ್ ಲೈಸನ್ಸ್ ನವೀಕರಣಕ್ಕೆಂದು ಹೋಗಿದ್ದಾಗ ಯಾರೋ ಮನವಿ ಮಾಡಿದರೆಂದು, ಮೃತಪಟ್ಟಾಗ ದೇಹದ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿ ಒಂದು ಫಾರಂಗೆ ಸಹಿ ಮಾಡಿ ನೀಡಿ ಬಂದಿದ್ದ. ಈ ವಿಚಾರ ತಿಳಿದಿದ್ದ ಕಾನ್ರಾಡನ ತಾಯಿ ಮೇರಿ ಮಗ ಬದುಕಿ ಬರಲೆಂದು ಆಸ್ಪತ್ರೆಯಲ್ಲಿ ಕಳವಳದಿಂದ ಕಾಯುತ್ತಿದ್ದಾಗ ಡಾಕ್ಟರ್, ‘‘ನಿಮ್ಮ ಹುಡುಗ ಬದುಕಿ ಬರಲಾರ, ಬ್ರೆನ್ ಡೆಡ್ ಆಗಿದೆ. ಕೃತಕ ವ್ಯವಸ್ಥೆಯ ಬೆಂಬಲದಿಂದ ಇನ್ನುಳಿದ ಅಂಗಾಂಗಗಳು ಕೆಲಸ ಮಾಡುತ್ತಿವೆ ಅಷ್ಟೆ’’ ಎಂದು ಬಿಟ್ಟರು.

ಹುಟ್ಟಿದ ಐದೇ ತಿಂಗಳಿಗೆ ಎದ್ದು ನಿಂತಿದ್ದ, ಏಳನೆ ತಿಂಗಳಲ್ಲೇ ನಡೆಯಲು ಕಲಿತಿದ್ದ, ಭರ್ತಿ ತಿನ್ನುತ್ತಿದ್ದ, ದೊಡ್ಡದಾಗಿ ನಗುತ್ತಿದ್ದ, ಮನೆಯನ್ನೆಲ್ಲಾ ಆವರಿಸಿಕೊಂಡಿರುತ್ತಿದ್ದ ಮಗ ಹೀಗೆ ಅನಿರೀಕ್ಷಿತವಾಗಿ ತಮ್ಮನ್ನು ತೊರೆದು ಹೋಗಲಿದ್ದಾನೆಂಬ ಯಾತನಾಮಯ ಸತ್ಯವನ್ನು ಮೇರಿ ದಂಪತಿ ತಲೆಬಾಗಿ ಒಪ್ಪಿಕೊಳ್ಳಲೇ ಬೇಕಾಯಿತು.

ಆಗ ಮೇರಿ ಒಂದು ನಿರ್ಧಾರ ಮಾಡಿದರು. ಅಮೆರಿಕದ ಹೆಸರಾಂತ ಫುಟ್‌ಬಾಲ್ ಆಟಗಾರನಾಗಲಿದ್ದ ಮಗನ ದೇಹ ನಷ್ಟವಾದರೂ ಅವನನ್ನು ಈ ಭೂಮಿಯ ಮೇಲೆ ಇನ್ನೂ ಕೆಲ ಕಾಲ ಉಳಿಸಿಕೊಳ್ಳಲು ಬಯಸಿ ಅಂಗಾಂಗ ದಾನದ ಮಗನ ಇಚ್ಛೆ ಪೂರೈಸಿದರು.

ಉಳಿದ ಕೆಲಸಗಳೆಲ್ಲ ವೇಗವಾಗಿ ನಡೆದು ಹೋದವು. ಯುವ ಕ್ರೀಡಾಪಟು ಕಾನ್ರಾಡ್‌ನ ದೇಹದಿಂದ ಹೃದಯ, ಶ್ವಾಸಕೋಶ, ಲಿವರ್ ಹಾಗೂ ಕಿಡ್ನಿಗಳನ್ನು ಹೊರತೆಗೆದು ಅವುಗಳ ಅಗತ್ಯವಿದ್ದ ರೋಗಿಗಳಿಗೆ ವೈದ್ಯರು ಕಸಿ ಮಾಡಿದರು. ವೈದ್ಯಕೀಯ ಜಗತ್ತಿನ ನಿಯಮ ಏನೆಂದರೆ ಹೀಗೆ ಅಂಗಾಂಗ ದಾನಿಗಳ ಹಾಗೂ ದಾನ ಪಡೆದವರ ವಿವರಗಳನ್ನು ತಿಳಿಸಬಾರದೆಂಬುದು.

ಆದರೆ ಮೇರಿಯ ಹೃದಯ ಈ ನಿಯಮ ಒಪ್ಪಲಿಲ್ಲ. ಆಕೆ ತಾನೆ ಓಡಾಡಿ ತನ್ನ ಮಗನ ಹೃದಯ ಯಾರ ದೇಹದಲ್ಲಿ ಅಡಗಿದೆ ಎಂಬುದನ್ನು ಪತ್ತೆ ಹಚ್ಚಿದರು. ಮೇರಿಯ ಕಾತರ ನೋಡಿದ ವೈದ್ಯರು ಆ ವ್ಯಕ್ತಿ ಆತನೇ ಎಂಬುದನ್ನು ಖಚಿತ ಪಡಿಸಿದರು.

ಆತ ಎಪ್ಪತ್ತೊಂದು ವರ್ಷದ ಅಮೆರಿಕನ್ ಕಪ್ಪುವರ್ಣೀಯ ರಾಡ್ ಕರೀವೂ ಆಗಿದ್ದ. 60-70ರ ದಶಕದಲ್ಲಿ ಪ್ರಖ್ಯಾತ ಬೇಸ್‌ಬಾಲ್ ಆಟಗಾರನಾಗಿದ್ದ ರಾಡ್‌ನ ಹೃದಯ ದುರ್ಬಲವಾಗಿತ್ತು. ಒಮ್ಮೆ ಹಾರ್ಟ್ ಅಟ್ಯಾಕ್ ಆಗಿ ಆತನ ಹೃದಯ ಪಂಪ್ ನೆರವಿನಿಂದ ಕೆಲಸ ಮಾಡುತ್ತಿತ್ತು. ರಾಡ್‌ನ ಮಗಳು ಮಿಶೆಲ್ ಹದಿನೆಂಟನೆ ವಯಸ್ಸಿನಲ್ಲೇ ಕ್ಯಾನ್ಸರ್‌ಗೆ ಬಲಿಯಾಗಿದ್ದಳು. ಮೌನವೇ ಮಾತು ಎಂಬಂತಿದ್ದ ರಾಡ್‌ಗೂ ತನಗೆ ಜೀವದಾನ ನೀಡಿದ ಯುವಕ ಮತ್ತವನ ಕುಟುಂಬದ ಬಗ್ಗೆ ಗೊತ್ತಾಯಿತು.

 ಆಮೇಲಿನದು ಮನಕರಗಿಸುವ ಸನ್ನಿವೇಶ. ರಾಡ್ ದಂಪತಿ ಇತ್ತೀಚೆಗೆ ಮೇರಿಯ ಮನೆಗೆ ಬಂದರು. ಇಪ್ಪತ್ತೊಂಬತ್ತರ ವಯಸ್ಸಿನ ಹೃದಯ ಪಡೆದಿದ್ದ ರಾಡ್, ಒಂದು ಸ್ಟೆತಾಸ್ಕೋಪ್ ಅನ್ನು ಮೇರಿ ದಂಪತಿಗೆ ಉಡುಗೊರೆಯಾಗಿ ತಂದಿದ್ದ. ಮೇರಿ ಅದನ್ನು ರಾಡ್‌ನ ಎದೆಯ ಮೇಲಿಟ್ಟು ಒಳಗಿನಿಂದ ಮಿಡಿಯುತ್ತಿದ್ದ ತನ್ನ ಮಗ ಕಾನ್ರಾಡನ ಲಬ್‌ಡಬ್ ಸದ್ದು ಆಲಿಸಿದರು.

ನನ್ನ ಮಗ ಮತ್ತೆ ಮನೆಗೆ ಬಂದನೆಂದು ಸಂಭ್ರಮಿಸಿದರು. ಅತ್ತರು, ನಕ್ಕರು, ಕೊನೆಗೆ ಸಮಾಧಾನ ಅನಿಸದೆ ನೇರ ರಾಡ್‌ನ ಎದೆಯ ಮೇಲೊರಗಿ ತನ್ನ ಕಿವಿಯನ್ನು ಹತ್ತಿರವಿಟ್ಟು ಮಗನ ಇರುವಿಕೆಯನ್ನು ಹೃದಯ ತುಂಬಿಸಿಕೊಂಡರು.

ಹೊರಡುವ ಮೊದಲು ಈ ರಾಡ್ ತಾನು ಜತನದಿಂದ ಎತ್ತಿಟ್ಟುಕೊಂಡಿದ್ದ, ತನಗೆ ಕೀರ್ತಿ ಗೆಲುವು ತಂದುಕೊಟ್ಟಿದ್ದ ಒಂದು ಬೇಸ್‌ಬಾಲ್ ಅನ್ನು ಮೇರಿ ದಂಪತಿಗೆ ನೆನಪಿನ ಕಾಣಿಕೆಯಾಗಿ ಕೊಟ್ಟ. ಅದರ ಮೇಲೆ

‘‘ಪ್ರಿಯ ಕಾನ್ರಾಡ್,

ಈ ನಿನ್ನ ಬೆಲೆಕಟ್ಟಲಾಗದ

ಕೊಡುಗೆಗೆ ಧನ್ಯವಾದ.

ನಾವು ಶೀಘ್ರದಲ್ಲೇ ಭೇಟಿಯಾಗುವ ತನಕ

ನಿನ್ನ ಕ್ರಿಸ್ತ ಸಹೋದರನಾಗಿರುವೆ’’

- ಎಂದು ಬರೆದ ರಾಡ್‌ನ ಸಹಿ ಇತ್ತು.

ಜನರು ಈ ಜಗತ್ತಿನಿಂದ ನಿರ್ಗಮಿಸಿದ ಮೇಲೂ ಕೆಲಕಾಲ ಬೇರೊಂದು ರೂಪದಲ್ಲಿ, ಅನ್ಯರ ದೇಹದಲ್ಲಿದ್ದು ಇರಬಹುದಾದ ಈ ‘ಆರ್ಗನ್ ಡೊನೇಷನ್’ ಬಗ್ಗೆ ಜಾಗೃತಿ ಕಡಿಮೆ ಇದೆ. ಕರ್ನಾಟಕದಲ್ಲಿ ನಟ ರಾಜ್‌ಕುಮಾರ್ ಹಾಗೂ ಲೋಕೇಶ್ ಜೀವ ತೊರೆದ ನಂತರ ತಮ್ಮ ಅಂಗಾಂಗ ದಾನ ಮಾಡಿದ್ದರು. ಕರ್ನಾಟಕದ ರೈತ ಹೋರಾಟದ ನಾಯಕ ವೀರಸಂಗಯ್ಯ ದಾನಿಯೊಬ್ಬರಿಂದ ಕಿಡ್ನಿ ಪಡೆದಿದ್ದಾರೆ. ಕರ್ನಾಟಕದಲ್ಲಿ ಪ್ರತೀ ಹತ್ತು ಲಕ್ಷಕ್ಕೊಬ್ಬರು ಅಂಗಾಂಗ ದಾನದ ಬಗ್ಗೆ ತಿಳಿದವರಿದ್ದಾರಷ್ಟೆ. ನಮ್ಮಲ್ಲೇ ಈಗ ಹೃದಯದ ಕಸಿಗಾಗಿ 28, ಕಿಡ್ನಿಗಾಗಿ 1053, ಲಿವರ್‌ಗಾಗಿ 274 ಹಾಗೂ ಶ್ವಾಸಕೋಶಕ್ಕಾಗಿ 14 ಮಂದಿ ಹೆಸರು ನೋಂದಾಯಿಸಿ ದಾನಿಗಳಿಗಾಗಿ ಕಾದಿದ್ದಾರೆ. ಆದರೆ ದಾನಿಗಳ ಸಂಖ್ಯೆ ಅಷ್ಟಿಲ್ಲ. ನಮ್ಮ ಕ್ರೀಡಾ ಪತ್ರಕರ್ತರು ಇನ್ನೂ ಶೈಷವಾವಸ್ಥೆಯಲ್ಲೇ ಇರುವುದರಿಂದ ಇಂತಹ ಹೃದಯಂಗಮ ಘಟನೆಗಳು ನಡೆದಾಗಲೂ ಅಂತಹವು ಓದುಗರ ಗಮನಕ್ಕೆ ಬರುತ್ತಿಲ್ಲ.

ಅಮೆರಿಕದಲ್ಲೀಗ ರಾಡ್ ಹಾಗೂ ಕಾನ್ರಾಡ್‌ರ ಹೃದಯ ವಿನಿಮಯದ ಪ್ರಸಂಗ ಬಹು ಚರ್ಚಿತ ವಿಚಾರ. ಅಲ್ಲಿನ ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ಸಂಸ್ಥೆಯೊಂದು ‘ಏಛಿಚ್ಟಠಿ ಟ್ಛ 29’ ಎಂಬ ಹೆಸರಿನ ಪ್ರಚಾರಾಂದೋಲನವನ್ನು ಆರಂಭಿಸಿದೆ. ಈ 29 ಎಂಬುದು ಹೃದಯ ದಾನ ಪಡೆದಿರುವ ರಾಡ್ ಕರೀವ್ ಬೇಸ್‌ಬಾಲ್ ಆಡುತ್ತಿದ್ದಾಗ ಧರಿಸುತ್ತಿದ್ದ ಜರ್ಸಿ ನಂಬರ್ ಆಗಿತ್ತು.

ಶಕ್ತಿಶಾಲಿ ಯುವ ಹೃದಯವೊಂದನ್ನು ಪಡೆದಿರುವ ರಾಡ್ ಈಗ ಬಿಡುವಿರದ ಮನುಷ್ಯ.

ಅಂಗಾಂಗ ದಾನದ ಮಹತ್ವದ ಬಗ್ಗೆ ಈಗವನು ಊರೂರು ಸುತ್ತುತ್ತಾ ಪ್ರಚಾರ ಮಾಡುತ್ತಿದ್ದಾನೆ. ಮೃತ ಕ್ರೀಡಾಳು ಕಾನ್ರಾಡ್ ಇನ್ನೊಬ್ಬ ಕ್ರೀಡಾಪಟು ರಾಡ್‌ನೊಳಗೆ ಪರಕಾಯ ಪ್ರವೇಶ ಮಾಡಿ ತಾನೂ ತನ್ನ ದೈಹಿಕ ಗೈರು ಹಾಜರಿಯಲ್ಲೂ ಎಲ್ಲರ ಹೃದಯ ಗೆಲ್ಲುತ್ತಿದ್ದಾನೆ. ‘‘ನನ್ನ ಮಗನ ಹೃದಯ ಅರ್ಹನೊಬ್ಬನೊಂದಿಗಿದೆ’’ ಅಂದಿದ್ದಾರೆ ತಾಯಿ ಮೇರಿ.

ಸಾವು ಬದುಕಿನ ಆಟದಲ್ಲಿ ಕ್ರೀಡಾಪಟು ಕಾನ್ರಾಡ್ ಸಾವನ್ನು ಸೋಲಿಸಿದ್ದಾನೆ.

Writer - ಪಾರ್ವತೀಶ ಬಿಳಿದಾಳೆ

contributor

Editor - ಪಾರ್ವತೀಶ ಬಿಳಿದಾಳೆ

contributor

Similar News