×
Ad

ಪ್ರೇಯಸಿಯನ್ನು ಮದುವೆಯಾಗಲು ಮೋದಿ ನೆರವು ಕೋರಿದ ಭೂಪ

Update: 2017-05-07 14:28 IST

ಚಂಡಿಗಡ,ಮೇ 7: ನರ್ಸ್ ಆಗಿರುವ ತನ್ನ ಗೆಳತಿಯನ್ನು ಮದುವೆಯಾಗಲು ತನಗೆ ನೆರವಾಗುವಂತೆ ಇಲ್ಲಿಯ ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಪ್ರಧಾನಿ ನರೇಂದ್ರ ಮೋದಿಯವರನ್ನು ಕೋರಿಕೊಂಡಿದ್ದಾನೆ. ಮದುವೆಗೆ ಒಪ್ಪುವಂತೆ ಎರಡೂ ಕುಟುಂಬಗಳ ಮನವೊಲಿಸಲು ಸ್ವಯಂಸೇವಕರನ್ನೊಬ್ಬರನ್ನು ಚಂಡಿಗಡಕ್ಕೆ ಕಳುಹಿಸುವಂತೆಯೂ ಆತ ವಿನಂತಿಸಿಕೊಂಡಿದ್ದಾನೆ. ಇದು ತಮಾಷೆಯಲ್ಲ. ಇದು ಪ್ರತಿದಿನ ಚಂಡಿಗಡದಿಂದ ಕೇಂದ್ರೀಕೃತ ಸಾರ್ವಜನಿಕ ದೂರುಗಳ ಪರಿಹಾರ ಮತ್ತು ನಿಗಾ ವ್ಯವಸ್ಥೆಯ ಮೂಲಕ ಪ್ರಧಾನಿ ಕಚೇರಿಗೆ ರವಾನೆಯಾಗುತ್ತಿರುವ ಇಂತಹ ಹಲವಾರು ವಿಲಕ್ಷಣ ಮನವಿಗಳ ಲ್ಲೊಂದಾಗಿದೆ.

ವಾಸ್ತವದಲ್ಲಿ ಶೇ.60ರಷ್ಟು ದೂರುಗಳು ಮತ್ತು ಮನವಿಗಳು ಜುಜುಬಿ ಮತ್ತು ಹಾಸ್ಯಾಸ್ಪದವಾಗಿರುತ್ತವೆ ಎಂದು ಈ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವ ಅಧಿಕಾರಿಗಳು ಹೇಳುತ್ತಾರೆ. ಉದಾಹರಣೆಗೆ ಚಂಡಿಗಡ ಪೊಲೀಸರು ಸಕಾಲದಲ್ಲಿ ಅಪರಾಧ ಸ್ಥಳವನ್ನು ತಲುಪಲು ಸಾಧ್ಯವಾಗುವಂತೆ ಅವರಿಗೆ ಹೆಲಿಕಾಪ್ಟರ್‌ನ್ನು ಒದಗಿಸುವಂತೆ ಇಲ್ಲಿಯ ಓರ್ವ ನಿವಾಸಿ ಮೋದಿಯವರನ್ನು ಕೋರಿಕೊಂಡಿದ್ದಾನೆ. ಚಂಡಿಗಡ ನಗರವು ಕೇವಲ 114 ಚ.ಕಿ.ಮೀ.ವಿಸ್ತೀರ್ಣ ಮತ್ತು 10 ಲಕ್ಷಕ್ಕಿಂತ ಸ್ವಲ್ಪವೇ ಹೆಚ್ಚು ಜನಸಂಖ್ಯೆ ಹೊಂದಿದ್ದರೂ ಈ ಭೂಪನ ಅಭಿಪ್ರಾಯದಂತೆ ಇಲ್ಲಿಯ ಪೊಲೀಸರಿಗೆೆ ಹೆಲಿಕಾಪ್ಟರ ಅಗತ್ಯವಂತೆ! ಯಾರೋ ತನ್ನ ಅನುಮತಿ ಪಡೆಯದೆ ತನ್ನ ಗಾರ್ಡನ್‌ನಿಂದ ಹೂವುಗಳನ್ನು ಕೀಳುತ್ತಿದ್ದಾರೆ ಮತ್ತು ಈ ಬಗ್ಗೆ ಯಾರೂ ಕ್ರಮ ಕೈಗೊಳ್ಳುತ್ತಿಲ್ಲ ಎನ್ನುವುದು ಇನ್ನೋರ್ವ ನಿವಾಸಿಯ ದೂರು.

ಈ ಪ್ರಧಾನಿ ಕಚೇರಿಯ ದೂರುಗಳ ವ್ಯವಸ್ಥೆಯ ಮೂಲಕ ಚಂಡಿಗಡ ಆಡಳಿತವು ಪ್ರತಿ ತಿಂಗಳು ಸುಮಾರು 400 ದೂರುಗಳನ್ನು ಸ್ವೀಕರಿಸುತ್ತಿದ್ದು,ಇವುಗಳ ಪೈಕಿ ಹೆಚ್ಚಿನವು ವೈಯಕ್ತಿಕ ಸ್ವರೂಪದ್ದಾಗಿರುತ್ತವೆ ಎನ್ನುತ್ತಾರೆ ಅಧಿಕಾರಿಗಳು.

ಕೇಂದ್ರೀಕೃತ ವ್ಯವಸ್ಥೆಯ ಮೂಲಕ ದೂರುಗಳು ನೇರವಾಗಿ ಪ್ರಧಾನಿ ಕಚೇರಿಯನ್ನು ತಲುಪುತ್ತವೆ. ಅಲ್ಲಿ ಆಯಾ ನಗರಗಳಿಗನುಗುಣವಾಗಿ ವರ್ಗೀಕರಿಸಲ್ಪಟ್ಟ ಬಳಿಕ ಅಗತ್ಯ ಕ್ರಮಗಳಿಗಾಗಿ ಆಯಾ ನಗರಗಳ ಅಧಿಕಾರಿಗಳಿಗೆ ರವಾನೆಯಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News