ಉತ್ತರ ಪ್ರದೇಶದಲ್ಲೀಗ ‘ಯೋಗಿ’ ಮಾವಿನಹಣ್ಣು

Update: 2017-05-07 12:08 GMT

 ಲಕ್ನೋ,ಮೇ 7: ನಗರದ ಪ್ರಸಿದ್ಧ ಮಾವು ಬೆಳೆಗಾರ ಪದ್ಮಶ್ರೀ ಹಾಜಿ ಕಲೀಮುಲ್ಲಾ ಅವರು ಬೆಳೆಸಿರುವ ಹೊಸ ತಳಿಯ ಮಾವಿನಹಣ್ಣು ಈ ಬೇಸಿಗೆಯಲ್ಲಿ ಮಾವು ಪ್ರಿಯರ ಮನಸ್ಸನ್ನು ತಣಿಸಲಿದೆ. ಈ ನೂತನ ತಳಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರ ’ಯೋಗಿ’ ಹೆಸರನ್ನು ಇಡಲಾಗಿದೆ.

ಈ ಹಿಂದೆ ತಾನು ಬೆಳೆದಿದ್ದ ಮಾವಿನ ಹಣ್ಣುಗಳಿಗೆ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಅವರ ಹೆಸರುಗಳನ್ನಿರಿಸಿದ್ದ ಕಲೀಮುಲ್ಲಾ (74) ಈ ‘ಯೋಗಿ ’ಮಾವಿನಹಣ್ಣನ್ನು ಇಲ್ಲಿಯ ಮಲಿಹಾಬಾದ್ ಪ್ರದೇಶದಲ್ಲಿರುವ ತನ್ನ ಮಾವಿನ ತೋಟದಲ್ಲಿ ಬೆಳೆಸಿದ್ದಾರೆ.

ಯೋಗಿ ಮಾವಿನಹಣ್ಣನ್ನು ನೈಸರ್ಗಿಕವಾಗಿ ಬೆಳೆಸಲಾಗಿದೆ. ತುಂಬ ಮೃದುವಾಗಿದ್ದು ಸುಂದರ ರೂಪವನ್ನೂ ಹೊಂದಿದೆ. ಇದು ಪ್ರಸಿದ್ಧ ದಶೇರಿ ಮಾವಿನಹಣ್ಣಿನ ಹೈಬ್ರಿಡ್ ತಳಿಯಾಗಿದೆ ಎಂದು ಹೇಳಿದ ಕಲೀಮುಲ್ಲಾ, ಆದರೆ ಅದಿನ್ನೂ ಹಣ್ಣಾಗಿಲ್ಲ, ಹೀಗಾಗಿ ಅದರ ರುಚಿಯ ಬಗ್ಗೆ ಈಗಲೇ ಏನೂ ಹೇಳಲಿಕ್ಕಾಗುವುದಿಲ್ಲ. ಅದು ಒಳ್ಳೆಯದೇ ಇರುತ್ತದೆ ಎಂದು ಆಶಿಸಿದ್ದೇನೆ ಎಂದರು.

 ಪ್ರಸಿದ್ಧ ವ್ಯಕ್ತಿಗಳ ಹೆಸರುಗಳನ್ನು ಚಿರಸ್ಥಾಯಿಯಾಗಿಸಲು ತಾನು ಮಾವಿನ ತಳಿಗಳಿಗೆ ಅವರ ಹೆಸರುಗಳನ್ನಿಡುತ್ತಿರುವುದಾಗಿ ಅವರು ತಿಳಿಸಿದರು.

1957ರಿಂದಲೂ ಮಾವು ಬೆಳೆಯುತ್ತಿರುವ ಕಲೀಮುಲ್ಲಾ ಐದು ಎಕರೆ ವಿಸ್ತೀರ್ಣದ ಮಾವಿನ ತೋಪು ಹೊಂದಿದ್ದಾರೆ. ಈ ತೋಟದಲ್ಲಿ ಶತಮಾನದಷ್ಟು ಪುರಾತನ ಮರವೊಂದಿದ್ದು, 1987ರಿಂದಲೂ ಅದರಲ್ಲಿ ವಿವಿಧ ಜಾತಿಗಳ ಕಸಿ ಮಾವಿನಹಣ್ಣುಗಳನ್ನು ಅವರು ಅಭಿವೃದ್ಧಿಗೊಳಿಸುತ್ತಿದ್ದಾರೆ.ಈ ಮರದಲ್ಲಿ ಬೆಳೆಯಲಾದ ಹಣ್ಣುಗಳಿಗೆ ತಮ್ಮ ಕುಟುಂಬ ಸದಸ್ಯರ ಹೆಸರುಗಳನ್ನೂ ಅವರು ಇಟ್ಟಿದ್ದಾರೆ.

ಕಸಿ ಮಾಡುವಿಕೆ ಮತ್ತು ವಿವಿಧ ತಳಿಗಳ ಮಾವುಗಳನ್ನು ಬೆಳೆಸುವ ಅವರ ಕೌಶಲ ಅವರಿಗೆ ಪದ್ಮಶ್ರೀ ಪ್ರಶಸ್ತಿಯ ಜೊತೆಗೆ ಉ.ಪ್ರ.ಸರಕಾರದ ‘ಉದ್ಯಾನ ಪಂಡಿತ’ ಪ್ರಶಸ್ತಿಗೂ ಭಾಜನರನ್ನಾಗಿಸಿದೆ.

ಒಂದೇ ಮರದಲ್ಲಿ 300 ವಿವಿಧ ಜಾತಿಗಳ ಮಾವನ್ನು ಬೆಳೆಸುವ ಮೂಲಕ ಅವರು ಪ್ರಸಿದ್ಧರಾಗಿದ್ದಾರೆ. ಅವರನ್ನು ಜನರು ಪ್ರೀತಿಯಿಂದ ‘ಮಾವಿನ ಮನುಷ್ಯ’ಎಂದೇ ಕರೆಯುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News