'ನೀಟ್' ಅವಾಂತರ:ಕೇರಳದಲ್ಲಿ ವಿದ್ಯಾರ್ಥಿನಿಯರ ಒಳಉಡುಪು ಕಳಚಿಸಿದರು!

Update: 2017-05-08 03:58 GMT

ಕಣ್ಣೂರು, ಮೇ 8: ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕಾಗಿ ದೇಶದಾದ್ಯಂತ ರವಿವಾರ ನೀಟ್ (ರಾಷ್ಟ್ರೀಯ ಅರ್ಹತಾ ಪರೀಕ್ಷೆ) ವಿವಿಧ ನಗರಗಳಲ್ಲಿ ಭಾರೀ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ನಡೆದರೆ, ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಹಲವು ವಿದ್ಯಾರ್ಥಿನಿಯರು ಹಲವು ವಿಧದ ಕಿರುಕುಳಗಳನ್ನು ಅನುಭವಿಸಬೇಕಾಗಿ ಬಂದಿತ್ತು. 

ಕಣ್ಣೂರಿನ ನೀಟ್ ಪರೀಕ್ಷಾ ಕೇಂದ್ರಕ್ಕೆ ಹಾಜರಾದ ಕೆಲ ವಿದ್ಯಾರ್ಥಿನಿಯರು ತಮ್ಮ ಒಳಉಡುಪುಗಳು ಹಾಗೂ ಜೀನ್ಸ್ ಕಳಚಿ ಬೇರೆ ಬಟ್ಟೆ ಧರಿಸಬೇಕಾದ ಪ್ರಮೇಯ ಬಂದಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ವಿದ್ಯಾರ್ಥಿನಿಯರ ವಸ್ತ್ರಗಳಲ್ಲಿದ್ದ ಪಿನ್ ಹಾಗೂ ಬಟನ್ ಗಳಿಂದಾಗಿ ಮೆಟಲ್ ಡಿಟೆಕ್ಟರ್ ಬೀಪ್ ಸದ್ದು ಹೊರಡಿಸಿರುವುದೇ ಈ ಎಲ್ಲಾ ಗೊಂದಲ ಹಾಗೂ ಪ್ರಮಾದಕ್ಕೆ ಕಾರಣವಾಗಿದೆ.

ವಿದ್ಯಾರ್ಥಿಗಳ ವಸ್ತ್ರಸಂಹಿತೆಯ ಬಗ್ಗೆ ಕಠಿಣ ನಿಯಮಗಳನ್ನು ಹೇರಲಾಗಿತ್ತೆನ್ನುವುದನ್ನು ಇಲ್ಲಿ ಸ್ಮರಿಸಬಹುದು. ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ದೊರೆಯದ ಒಬ್ಬಳು ವಿದ್ಯಾರ್ಥಿನಿ ತನ್ನ ಒಳ ಉಡುಪು ಕಳಚಿ ಅದನ್ನು ಕೇಂದ್ರದ ಹೊರಗಿರುವ ತನ್ನ ತಾಯಿಯ ಕೈಗೆ ನೀಡುವ ಪ್ರಮೇಯವೂ ಬಂದಿತ್ತು.

ಜೀನ್ಸ್ ಧರಿಸಿದ್ದ ಇನ್ನೊಬ್ಬಳು ವಿದ್ಯಾರ್ಥಿನಿಗೆ ಪ್ಯಾಂಟಿನ ಕಿಸೆ ಹಾಗೂ ಲೋಹದ ಬಟನ್ ತೆಗೆಯುವಂತೆ ಹೇಳಲಾಗಿತ್ತು. ‘‘ತಾನು ಪರೀಕ್ಷಾ ಕೇಂದ್ರದಿಂದ ಮೂರು ಕಿ.ಮೀ. ದೂರವಿರುವ ಬಟ್ಟೆ ಅಂಗಡಿಯೊಂದಕ್ಕೆ ಹೋಗಿ ಆಕೆಗೆ ಹೊಸ ಬಟ್ಟೆ ಖರೀದಿಸಿ ತಂದು ಕೊಟ್ಟೆ’’ ಎಂದು ಆಕೆಯ ತಂದೆ ಹೇಳಿದ್ದಾರೆ.

ತೊಂದರೆಗೊಳಗಾದ ವಿದ್ಯಾರ್ಥಿನಿಯರಿಗೆ ಪರೀಕ್ಷಾ ಕೇಂದ್ರದ ಹತ್ತಿರದ ನಿವಾಸಿಗಳು ಬಟ್ಟೆಗಳನ್ನು ನೀಡಿ ಸಹಕರಿಸಿದರು. ಪೂರ್ಣ ತೋಳು ಇರುವ ಅಂಗಿಗಳನ್ನು ಧರಿಸಿದ್ದ ಹಲವು ವಿದ್ಯಾರ್ಥಿಗಳಿಗೆ ಅದನ್ನು ಅರ್ಧ ತೋಳು ಮಾಡಲು ಕತ್ತರಿಸುವಂತೆ ಅಧಿಕಾರಿಗಳು ಹೇಳಿದ ಕಾರಣ ಹಲವು ವಿದ್ಯಾರ್ಥಿಗಳ ಶರ್ಟುಗಳಿಗೆ ಕತ್ತರಿ ಪ್ರಯೋಗವೂ ನಡೆದಿದೆಯೆಂದು ತಿಳಿದು ಬಂದಿದೆ.

ಪರೀಕ್ಷೆಯೇನೂ ನಡೆದಿದ್ದರೂ ಇಷ್ಟೆಲ್ಲಾ ಕಿರುಕುಳಕ್ಕೊಳಗಾಗಿ ವಿದ್ಯಾರ್ಥಿನಿಯರು ಏಕಾಗ್ರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಯಿತೇ ಎಂಬ ಪ್ರಶ್ನೆಯೂ ಎದುರಾಗಿದೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಿಂದೂ ಕೃಷ್ಣ ಹೇಳಿದ್ದು, ತಾನು ಈ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಗಮನ ಸೆಳೆಯುವುದಾಗಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News