ಮಹಿಳಾ ಐಪಿಎಸ್ ಅಧಿಕಾರಿಗೆ ಯುಪಿ ಸಿಎಂ ಆಪ್ತ ಶಾಸಕನಿಂದ ಸಾರ್ವಜನಿಕವಾಗಿ ಅವಮಾನ
ಗೋರಖಪುರ, ಮೇ 8: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರ ತವರು ಕ್ಷೇತ್ರವಾದ ಗೋರಖಪುರದಲ್ಲಿ ಅವರ ಸಮೀಪವರ್ತಿ ಬಿಜೆಪಿ ಶಾಸಕರೊಬ್ಬರು ಐಪಿಎಸ್ ಅಧಿಕಾರಿಣಿಯೊಬ್ಬರನ್ನು ಸಾರ್ವಜನಿಕವಾಗಿ ಅವಮಾನಿಸಿ ಛೀಮಾರಿ ಹಾಕಿ ಅವರು ಕಣ್ಣೀರು ಸುರಿಸುವಂತೆ ಮಾಡಿದ ಘಟನೆ ರವಿವಾರ ಅಪರಾಹ್ನ ನಡೆದಿದೆ.
ಆಡಳಿತ ಹಾಗೂ ಪೊಲೀಸರ ಸಹಕಾರದಿಂದ ಅಕ್ರಮ ಮದ್ಯ ಮಾರಾಟ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ಕೊಯಲಹವಾ ಎಂಬ ಗ್ರಾಮದ ಸಮೀಪದ ಜನನಿಬಿಡ ಪ್ರದೇಶದಲ್ಲಿ ಮಹಿಳೆಯರು ರಸ್ತೆ ತಡೆ ನಡೆಸುತ್ತಿದ್ದ ವೇಳೆ ಪರಿಸ್ಥಿತಿ ಕೈಮೀರಿ ಕಲ್ಲು ತೂರಾಟ ನಡೆದಿತ್ತು. ಈ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಬೇಕಾಗಿ ಬಂದಿತ್ತು. ಇದರಿಂದ ಕೆಲವು ಮಹಿಳೆಯರು ಗಾಯಗೊಂಡಿದ್ದರು. ಈ ಸಂದರ್ಭ ಅಲ್ಲಿಗೆ ಆಗಮಿಸಿದ ಗೋರಖಪುರ ಶಾಸಕ ಡಾ.ರಾಧಾ ಮೋಹನ ದಾಸ್ ಅಗರ್ವಾಲ್ ಅಲ್ಲಿ ಹಾಜರಿದ್ದ ಐಪಿಎಸ್ ಅಧಿಕಾರಿ ಹಾಗೂ ಎಎಸ್ಪಿ ಚಾರು ನಿಗಮ್ ಅವರೊಂದಿಗೆ ವಾಗ್ವಾದಕ್ಕಿಳಿದಿದ್ದರು. 2013ನೆ ವರ್ಷದ ಬ್ಯಾಚಿನ ಐಪಿಎಸ್ ಅಧಿಕಾರಿ ಚಾರು ನಿಗಮ್ ಅವರನ್ನು ಲಾಠಿಚಾರ್ಜ್ ಮಾಡಿದ್ದಕ್ಕೆ ತರಾಟೆಗೆ ತೆಗೆದುಕೊಂಡ ಶಾಸಕ ಆಕೆಯತ್ತ ಕೈತೋರಿಸಿ ‘‘ಬಾಯ್ಮುಚ್ಚಿ. ನಿಮ್ಮ ಎಲ್ಲೆ ಮೀರಬೇಡಿ. ಸುಮ್ಮನಿರಿ’’ ಎಂದು ಹೇಳುತ್ತಿರುವುದು ಕೆಲ ಪತ್ರಕರ್ತರು ತೆಗೆದಿರುವ ವೀಡಿಯೋಗಳಲ್ಲಿ ಕಾಣುತ್ತದೆ.
‘‘ನಾನು ಇಲ್ಲಿನ ಉಸ್ತುವಾರಿ ಪೊಲೀಸ್ ಅಧಿಕಾರಿ. ನಾನೇನು ಮಾಡುತ್ತಿದ್ದೇನೆಂದು ನನಗೆ ಗೊತ್ತು’’ ಎಂದೂ ಅಧಿಕಾರಿ ಈ ಸಂದರ್ಭದಲ್ಲಿ ಶಾಸಕರಿಗೆ ಉತ್ತರಿಸಿದ್ದಾರೆ.
ನಂತರ ಸ್ಥಳಕ್ಕೆ ಹಿರಿಯ ಅಧಿಕಾರಿಯೊಬ್ಬರು ಆಗಮಿಸಿದ್ದರು. ಈ ಸಂದರ್ಭ ಚಾರು ನಿಗಮ್ ತಮ್ಮ ಕರ್ಚೀಫ್ ಕೈಗೆತ್ತಿಕೊಂಡು ಕಣ್ಣೀರು ಒರೆಸುತ್ತಿದ್ದುದು ಕಂಡು ಬಂದಿದೆ.
ಆದರೆ ತಾನು ಮಹಿಳಾ ಪೊಲೀಸ್ ಅಧಿಕಾರಿಯೊಂದಿಗೆ ದುರ್ನಡತೆ ತೋರಿಲ್ಲ ಎಂದು ಶಾಸಕ ಹೇಳಿಕೊಂಡಿದ್ದಾರೆ.
‘‘ನಾವು ಕೂಡ ಅಕ್ರಮ ಮದ್ಯ ಮಾರಾಟದ ವಿರೋಧಿಗಳೇ. ಆದರೆ ಇಲ್ಲಿ ಜನರು ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದಾಗ ಮಹಿಳಾ ಪೊಲೀಸ್ ಅಧಿಕಾರಿ ಅವರನ್ನು ಬಲವಂತವಾಗಿ ಚದುರಿಸಲು ಯತ್ನಿಸಿದರು. ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸಿದರು ಹಾಗೂ 80 ವರ್ಷದ ವೃದ್ಧನೊಬ್ಬನನ್ನು ಹಿಡಿದೆಳೆದರು. ಇದನ್ನು ಸಹಿಸಲು ಸಾಧ್ಯವಿಲ್ಲ’’ ಎಂದು ಅಗರ್ವಾಲ್ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ.