ಯೆಮೆನ್‌ನಲ್ಲಿ ಅಪಹೃತ ಪಾದ್ರಿಯಿಂದ ನೆರವಿಗಾಗಿ ವೀಡಿಯೊದಲ್ಲಿ ಮೊರೆ
ಅದೆನ್,ಮೇ 9: ಕಳೆದ ವರ್ಷ ಇಲ್ಲಿಯ ವೃದ್ಧಾಶ್ರಮವೊಂದರ ಮೇಲಿನ ದಾಳಿಯ ಬಳಿಕ ಅಪಹರಿಸಲ್ಪಟ್ಟಿದ್ದ ಭಾರತದ ಕೇರಳ ಮೂಲದ ಪಾದ್ರಿ ಟಾಮ್ ಉಳುನ್ನನಿಲ್ ಅವರು ನೆರವಿಗಾಗಿ ಮೊರೆಯಿಟ್ಟಿರುವ ವೀಡಿಯೊವೊಂದನ್ನು ಯೆಮೆನಿ ಸುದ್ದಿ ಜಾಲತಾಣವೊಂದು ಪ್ರಸಾರ ಮಾಡಿದೆ.
ಟಾಮ್ ಕೇರಳ ನಿವಾಸಿಯಾಗಿದ್ದಾರೆ. 2016,ಮಾರ್ಚ್‌ನಲ್ಲಿ ವೃದ್ಧಾಶ್ರಮದ ನಿವಾಸಿಯೋರ್ವನ ಸಂಬಂಧಿಕರ ಸೋಗಿನಲ್ಲಿ ನುಗ್ಗಿದ್ದ ನಾಲ್ವರು ಬಂದೂಕುಧಾರಿಗಳ ತಂಡವು ನಾಲ್ವರು ಭಾರತೀಯ ನನ್‌ಗಳು, ಇಬ್ಬರು ಯೆಮೆನಿ ಮಹಿಳಾ ಸಿಬ್ಬಂದಿಗಳು, ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಎಂಟು ಹಿರಿಯ ಜೀವಗಳು ಮತ್ತು ಓರ್ವ ಕಾವಲುಗಾರನನ್ನು ಕೊಂದ ಬಳಿಕ ಫಾಟಾಮ್‌ರನ್ನು ಅಪಹರಿಸಿದ್ದರು.
ಯಾವುದೇ ಗುಂಪು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿರಲಿಲ್ಲ ಮತ್ತು ದಾಳಿಯ ಉದ್ದೇಶವೂ ಸ್ಪಷ್ಟವಾಗಿಲ್ಲ. ಆದರೆ ಇದೊಂದು ಭಯೋತ್ಪಾದನೆಯ ಕೃತ್ಯವೆಂದು ಯೆಮೆನ್‌ನ ಅಧ್ಯಕ್ಷ ಅಬ್ದ್-ರಬ್ಬು ಮನ್ಸೂರ್ ಹಾದಿ ಅವರು ಹೇಳಿದ್ದರು.
ಬಿಳಿಯ ಗಡ್ಡಧಾರಿಯಾಗಿರುವ ಫಾಟಾಮ್ ವೀಡಿಯೋದಲ್ಲಿ ಇಂಗ್ಲೀಷ್‌ನಲ್ಲಿ ನಿಧಾನವಾಗಿ ಮಾತನಾಡುತ್ತ, ‘‘ಅವರು ಸಾಧ್ಯವಾದಷ್ಟು ಮಟ್ಟಿಗೆ ನನ್ನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದಾರೆ. ನನ್ನ ಆರೋಗ್ಯ ದಿನೇದಿನೇ ಹದಗೆಡುತ್ತಿದೆ ಮತ್ತು ನಾನು ಸಾಧ್ಯವಾದಷ್ಟು ಶೀಘ್ರ ಆಸ್ಪತ್ರೆಗೆ ದಾಖಲಾಗುವುದು ಅಗತ್ಯವಾಗಿದೆ ’’ಎಂದು ಹೇಳಿದ್ದಾರೆ. ಅವರ ದೇಹಕ್ಕೆ ಅಂಟಿಸಿರುವ ಕಾರ್ಡ್‌ಬೋರ್ಡ್‌ನಲ್ಲಿ 2017,ಎ.15ರ ದಿನಾಂಕವನ್ನು ನಮೂದಿಸಲಾಗಿದೆ.
ತನ್ನ ಅಪಹರಣಕಾರರು ಭಾರತ ಸರಕಾರ ಮತ್ತು ಯುಎಇಯ ಅಬುಧಾಬಿಯಲ್ಲಿನ ಕೆಥೋಲಿಕ್ ಬಿಷಪ್ ಅವರನ್ನು ಸಂಪರ್ಕಿಸಿ ತಮ್ಮ ಬೇಡಿಕೆಗಳನ್ನು ಮಂಡಿಸಿದ್ದರು, ಆದರೆ ಉತ್ತರ ಉತ್ತೇಜಕವಾಗಿರಲಿಲ್ಲ ಎಂದಿರುವ ಫಾಟಾಮ್,‘‘ನನ್ನ ಪ್ರೀತಿಯ ಕುಟುಂಬ ಸದಸ್ಯರೇ, ದಯವಿಟ್ಟು ನನ್ನ ಬಿಡುಗಡೆಗಾಗಿ ನಿಮಗೆ ಸಾಧ್ಯವಿರುವ ನೆರವನ್ನು ನೀಡಿ. ನಿಮ್ಮನ್ನು ದೇವರು ಆಶೀರ್ವದಿಸಲಿ ಎಂದು ಕೋರಿಕೊಂಡಿದ್ದಾರೆ.
ಆದರೆ ಈ ವೀಡಿಯೋದ ಸತ್ಯಾಸತ್ಯತೆ ಇನ್ನೂ ಖಚಿತಪಟ್ಟಿಲ್ಲ.