×
Ad

2015-16ರಲ್ಲಿ ಈ ಐದು ರಾಷ್ಟ್ರೀಯ ಪಕ್ಷಗಳ ಆದಾಯವೆಷ್ಟು ಗೊತ್ತೇ..?

Update: 2017-05-09 15:29 IST

ಹೊಸದಿಲ್ಲಿ,ಮೇ 9: ಬಿಎಸ್‌ಪಿ, ಎನ್‌ಸಿಪಿ, ಸಿಪಿಎಂ, ಸಿಪಿಐ ಮತ್ತು ಟಿಎಂಸಿ ಈ ಐದು ರಾಷ್ಟ್ರೀಯ ಪಕ್ಷಗಳು 2015-16ನೇ ಸಾಲಿನಲ್ಲಿ ಒಟ್ಟೂ 200 ಕೋ.ರೂ.ಗೂ ಅಧಿಕ ಆದಾಯವನ್ನು ಗಳಿಸಿವೆ ಎಂದು ದಿಲ್ಲಿಯ ಚಿಂತನ ಚಿಲುಮೆ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ತನ್ನ ವರದಿಯಲ್ಲಿ ಬಹಿರಂಗಗೊಳಿಸಿದೆ. ಆದರೆ ಮುಖ್ಯ ರಾಜಕೀಯ ಪಕ್ಷಗಳಾಗಿರುವ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಆಡಿಟ್ ವರದಿಗಳನ್ನು ಈವರೆಗೂ ಸಲ್ಲಿಸಿಲ್ಲ.

2015-16ನೇ ಹಣಕಾಸು ವರ್ಷದಲ್ಲಿ ಈ ಐದು ರಾಷ್ಟ್ರೀಯ ಪಕ್ಷಗಳ ಒಟ್ಟೂ ಆದಾಯ 200.76 ಕೋ.ರೂ.ಗಳಾಗಿದ್ದು, ಈ ಪೈಕಿ ಕೇವಲ ಶೇ.2.37ರಷ್ಟು....ಅಂದರೆ 4.75 ಕೋ.ರೂ.ಗಳು ಪರಿಚಿತ ದಾನಿಗಳಿಂದ ಬಂದಿವೆ ಎಂದು ವರದಿಯು ತಿಳಿಸಿದೆ.

ಒಟ್ಟೂ ಆದಾಯದ ಶೇ.66.92ರಷ್ಟು ಪಾಲು (134.35 ಕೋ.ರೂ.) ಆಸ್ತಿ ಮಾರಾಟ, ಸದಸ್ಯತ್ವ ಶುಲ್ಕ, ಬ್ಯಾಂಕ್ ಬಡ್ಡಿ, ಪ್ರಕಟಣೆಗಳ ಮಾರಾಟ ಇತ್ಯಾದಿ ಬಲ್ಲ ಮೂಲಗಳಿಂದ ಬಂದಿದೆ. ಉಳಿದ ಶೇ.30.71ರಷ್ಟು (61.66 ಕೋ.ರೂ.) ಆದಾಯವನ್ನು ಈ ಪಕ್ಷಗಳು ಅಪರಿಚಿತ ಮೂಲಗಳಿಂದ ದೇಣಿಗೆಯಾಗಿ ಸ್ವೀಕರಿಸಿವೆ.

ಅಪರಿಚಿತ ಮೂಲಗಳಿಂದ ಗರಿಷ್ಠ ದೇಣಿಗೆ 45.14 ಕೋ.ರೂ.ಗಳನ್ನು ಸಿಪಿಎಂ ಸ್ವೀಕರಿಸಿದ್ದರೆ, 9.72 ಕೋ.ರೂ.ಗಳು ಟಿಎಂಸಿಗೆ ಲಭಿಸಿವೆ. ಒಟ್ಟು ಆದಾಯದಲ್ಲಿಯೂ 107.48 ಕೋ.ರೂ.ಗಳೊಂದಿಗೆ ಸಿಪಿಎಂ ಅಗ್ರಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿರುವ ಬಿಎಸ್‌ಪಿ 47.387 ಕೋ.ರೂ.ಗಳ ಆದಾಯ ಗಳಿಸಿದೆ. ಸಿಪಿಐ ಆದಾಯ ಕೇವಲ 2.176 ಕೋ.ರೂ.ಗಳಷ್ಟಿದೆ.

ರಾಜಕೀಯ ಪಕ್ಷಗಳು ತಮ್ಮ ಆಡಿಟ್ ವರದಿಗಳನ್ನು ಸಲ್ಲಿಸಲು 2016,ಅ.31 ಕೊನೆಯ ದಿನಾಂಕವಾಗಿತ್ತು. ಆದರೆ ಗಡುವು ಆರು ತಿಂಗಳ ಹಿಂದೆಯೇ ಮುಗಿದಿದ್ದ್ದರೂ ಮೇ 1ರವರೆಗೂ ಬಿಜೆಪಿ ಮತ್ತು ಕಾಂಗ್ರೆಸ್ ತಮ್ಮ ಆದಾಯ ವಿವರಗಳನ್ನು ಸಲ್ಲಿಸಿಲ್ಲ ಎಂದು ವರದಿಯು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News