‘ದಿ ಸಸ್ಪೆಕ್ಟ್’ಗೆ ಮುಕ್ತಕಂಠದ ಪ್ರಶಂಸೆ
ಭಯೋತ್ಪಾದನೆ ಪ್ರಕರಣಗಳಲ್ಲಿ ಸುಳ್ಳು ಆರೋಪ ಹೊರಿಸಿ ಜೈಲಿಗೆ ತಳ್ಳಲ್ಪಟ್ಟಿದ್ದ ಯುವಕನೊಬ್ಬನ ನೈಜ ಕಥೆಯನ್ನು ಆಧರಿಸಿದ ‘ ದಿ ಸಸ್ಪೆಕ್ಟ್’ ಹಿಂದಿ-ಮರಾಠಿ ಕಿರು ಚಿತ್ರವು ಶುಕ್ರವಾರ ಮುಂಬೈನಲ್ಲಿ ತೆರೆಕಂಡಿದ್ದು, ಪ್ರೇಕ್ಷಕರ ಮುಕ್ತಕಂಠದ ಪ್ರಶಂಸೆಗೆ ಪಾತ್ರವಾಗಿದೆ.
ಪಶ್ಚಿಮ ಆಂಧೇರಿಯಲ್ಲಿರುವ ‘ಫಸ್ಟ್‌ಲುಕ್ ಪ್ರಿವ್ಯೆ ಥಿಯೇಟರ್’ನಲ್ಲಿ ನಡೆದ ಚೊಚ್ಚಲ ಪ್ರದರ್ಶನದಲ್ಲಿ ಚಿತ್ರೋದ್ಯ ಮದ ಕೆಲವು ಗಣ್ಯರು, ಸಾಮಾಜಿಕ ಕಾರ್ಯಕರ್ತರು ಹಾಗೂ ಎನ್‌ಜಿಓ ಸಂಸ್ಥೆ ಜಮಿಯತ್ ಉಲೇಮಾ-ಇ-ಮಹಾರಾಷ್ಟ್ರದ ಪದಾಧಿಕಾರಿಗಳು ಭಾಗವಹಿಸಿದ್ದರು. ಭಯೋತ್ಪಾದನೆ ಪ್ರಕರಣಗಳಲ್ಲಿ ಸುಳ್ಳು ಆರೋಪ ಹೊರಿಸಲ್ಪಟ್ಟು, ಆರೋಪಿಗಳೆಂಬ ಹಣೆಪಟ್ಟಿ ಹೊತ್ತ ಅಮಾಯಕರಿಗೆ ಜಮಿಯತ್ ಉಲೇಮಾ-ಇ-ಮಹಾರಾಷ್ಟ್ರ ಸಂಸ್ಥೆಯು ಕಾನೂನು ನೆರವು ಒದಗಿಸುತ್ತಿದೆ.
ಚಿತ್ರಪ್ರದರ್ಶನದ ಬಳಿಕ ನಡೆದ ಚರ್ಚಾಗೋಷ್ಠಿಯಲ್ಲಿ,ಚಿತ್ರದ ನಿರ್ದೇಶಕಿ ನೀರಾ ಚಂದ್ರ ಹಾಗೂ ನ್ಯಾಯವಾದಿ ಟಿ. ಪಠಾಣ್ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಚಿತ್ರದಲ್ಲಿ ಬಿಂಬಿಸಲಾದಂತಹ ಪ್ರಕರಣಗಳು ನಿಜಜೀವನದಲ್ಲೂ ನಡೆದಿವೆಯೇ ಎಂಬುದನ್ನು ತಿಳಿದುಕೊಳ್ಳಲು ಬಹುತೇಕ ಪ್ರೇಕ್ಷಕರು, ಕಾತರರಾಗಿದ್ದರು. ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ ಪಠಾಣ್ ಅವರು ಸಾಮಾನ್ಯ ಜೀವನವನ್ನು ಸಾಗಿಸಲು ಯತ್ನಿಸುತ್ತಿದ್ದ ಯುವ ಮುಸ್ಲಿಮರ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಿದ ಹಲವು ಪ್ರಕರಣಗಳನ್ನು ವಿವರಿಸಿದರು.
ಈ ಕಿರುಚಿತ್ರಕ್ಕೆ ನಿರ್ದಿಷ್ಟವಾಗಿ ಯಾಕೆ ಇದೇ ಕಥಾವಸ್ತುವನ್ನೇ ಆಯ್ಕೆ ಮಾಡಿದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ನಿರ್ದೇಶಕ ಚಂದ್ರ ಅವರು ‘‘ ತಪ್ಪಾಗಿ ದೋಷಿಯೆಂದು ತೀರ್ಮಾನಿಸಲ್ಪಟ್ಟ ಮುಸ್ಲಿಮ್ ವ್ಯಕ್ತಿಯೊಬ್ಬ 23 ವರ್ಷಗಳ ಕಾಲ ಜೈಲಿನಲ್ಲಿದ್ದು ಬಿಡುಗಡೆಯಾದ ನೈಜ ಘಟನೆಯೇ ಈ ಚಿತ್ರಕ್ಕೆ ಸ್ಫೂರ್ತಿಯಾಗಿದೆ ಎಂದರು. ಈ ಕಥೆಯನ್ನು ಕೂಲಂಕಶವಾಗಿ ಅಧ್ಯಯನ ಮಾಡಿದ ನಾನು, ಈ ಬಗ್ಗೆ ಚಿತ್ರ ಮಾಡಲು ನಿರ್ಧರಿಸಿದೆ ಎಂದು ಹೇಳಿದರು.
ಈ ಕಿರುಚಿತ್ರವು ಅದ್ಭುತವಾಗಿ ಮೂಡಿಬಂದಿದೆಯಾದರೂ, ಅದನ್ನೊಂದು ಪೂರ್ಣ ಪ್ರಮಾಣದ ಚಿತ್ರವಾಗಿ ಯಾಕೆ ನಿರ್ಮಿಸಲಿಲ್ಲವೆಂದು ಪ್ರೇಕ್ಷಕರೊಬ್ಬರು ಪ್ರಶ್ನಿಸಿದರು. ಅದಕ್ಕುತ್ತರಿಸಿದ ಚಂದ್ರ ಅವರು, ಈ ಕಿರುಚಿತ್ರವನ್ನು ಜನರಿಂದ ದೇಣಿಗೆ ಸಂಗ್ರಹಿಸಿ ನಿರ್ಮಿಸಲಾಗಿದೆ. ಸೀಮಿತ ಸಂಪನ್ಮೂಲಗಳಿಂದ ಕಿರುಚಿತ್ರವನ್ನು ಮಾತ್ರವೇ ನಿರ್ಮಿಸಲು ಸಾಧ್ಯವೆಂದವರು ಹೇಳಿದರು.
ದಿ ಸಸ್ಪೆಕ್ಚ್ ಯೂಟ್ಯೂಬ್‌ನಲ್ಲಿಯೂ ಲಭ್ಯವಿದ್ದು, ಶುಲ್ಕ ಪಾವತಿಸಿ ವೀಕ್ಷಿಸಬಹುದಾಗಿದೆ.