ಕೇರಳದಲ್ಲಿ ಪ್ರಾಣಿಗಳಿಗೆ ಕ್ಯಾನ್ಸರ್ ಇನ್ಸಿಟಿಟ್ಯೂಟ್
ಕೋಟ್ಟಯಂ,ಮೇ 11: ಮನುಷ್ಯರಂತೆ ಪ್ರಾಣಿಗಳಿಗೂ ಕ್ಯಾನ್ಸರ್ ರೋಗ ಭಯಾನಕವಾಗಿ ವ್ಯಾಪಿಸುತ್ತಿದ್ದು, ಈ ನಿಟ್ಟಿನಲ್ಲಿ ಕೇರಳದ ಪ್ರಾಣಿಸಂರಕ್ಷಣಾ ಇಲಾಖೆ ಪ್ರಾಣಿಗಳ ಕ್ಯಾನ್ಸರ್ ಇನ್ಸಿಟಿಟ್ಯೂಟ್ ಆರಂಭಿಸುತ್ತಿದೆಎಂದು ವರದಿಯಾಗಿದೆ. ಮನುಷ್ಯರೊಂದಿಗೆ ಸಾಕುಪ್ರಾಣಿಗಳು ಬೆರೆಯುತ್ತವೆ. ಅವುಗಳಲ್ಲಿ ಈಗ ಕ್ಯಾನ್ಸರ್ ರೋಗಬಾಧೆ ಹೆಚ್ಚು ಕಾಣಿಸುತ್ತಿರುವುದು ಬಹುದೊಡ್ಡ ತಲೆನೋವಾಗಿದೆ. ಪ್ರಾಣಿಗಳ ಅನಾರೋಗ್ಯದಿಂದಾಗಿ ದೂರವ್ಯಾಪಿ ದುಷ್ಪರಿಣಾಮ ವಾಗಬಹುದೇ ಎನ್ನುವ ಸಂದೇಹ ಸೃಷ್ಟಿಯಾಗಿದ್ದು, ಈ ಆಧಾರದಲ್ಲಿ ಸಂಶೋಧನೆ ನಡೆಸುವ ಸಲುವಾಗಿ ಪ್ರಾಣಿಗಳ ಕ್ಯಾನ್ಸರ್ ಇನ್ಸಿಟಿಟ್ಯೂಟ್‌ನ್ನು ತೆರೆಯಲು ಪ್ರಾಣಿ ಸಂರಕ್ಷಣಾ ಇಲಾಖೆ ಉದ್ದೇಶಿಸಿದೆ.
ಪ್ರಾಣಿಗಳಿಗೆ ಉನ್ನತ ಚಿಕಿತ್ಸೆ ಲಭಿಸುವಂತಾಗಲು ಸೂಕ್ತ ಸೌಕರ್ಯ ಒದಗಿಸಲಾಗುವುದು. ಪ್ರಾಣಿಗಳಲ್ಲಿ ರೋಗ ಹೆಚ್ಚಳಗೊಳ್ಳುತ್ತಿದೆ ಎನ್ನುವ ದೂರುಗಳು ಬಂದ ಹಿನ್ನೆಲೆಯಲ್ಲಿ ಪ್ರಾಣಿಸಂರಕ್ಷಣಾ ಇಲಾಖೆ ಕ್ಯಾನ್ಸರ್ ಇನ್ಸಿಟಿಟ್ಯೂಟ್ ತೆರೆಯಲು ನಿರ್ಧರಿಸಿದೆ. ಸಾಕು ನಾಯಿಗಳಲ್ಲಿ ಹೆಚ್ಚು ರೋಗ ಕಂಡು ಬಂದಿದೆ. ಮನುಷ್ಯರು ತಿನ್ನುವ ಆಹಾರವನ್ನೇ ಹೆಚ್ಚಿನ ನಾಯಿಗಳಿಗೆ ಕೊಡಲಾಗುತ್ತದೆ. ಇದು ನಾಯಿಗಳಲ್ಲಿ ಕ್ಯಾನ್ಸರ್ ರೋಗವುಂಟಾಗಲು ಕಾರಣ ಎಂದು ಪ್ರಾಣಿ ಸಂರಕ್ಷಣಾ ಇಲಾಖೆ ಅಭಿಪ್ರಾಯಿಸಿದೆ. ಮೇಕೆಗಳಲ್ಲಿ ಕೂಡಾ ರೋಗ ಪತ್ತೆಯಾಗಿದೆ.
ರೋಗಬಾಧಿಸಿದ ಜಾನುವಾರುಗಳ ಹಾಲನ್ನು ಬಳಸುವುದು ಮನುಷ್ಯರಿಗೂ ಹಾನಿಕಾರಕವಾಗಬಹುದು ಎಂದು ವ್ಯಾಪಕ ಶಂಕೆ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಚಿಕಿತ್ಸೆಯೊಂದಿಗೆ ಸಂಶೋಧನೆಯನ್ನು ಮಾಡುವ ಉದ್ದೇಶದಿಂದ ಅಂಕಾಲಜಿ ಯುನಿಟ್ ಆರಂಭಿಸಲಾಗುತ್ತಿದ್ದು, ಮುಂದಿನ ತಿಂಗಳು ಸಚಿವ ಕೆ. ರಾಜು ಉದ್ಘಾಟಿಸಲಿದ್ದಾರೆ. ಇಲ್ಲಿ ಪ್ರಾಣಿಗಳ ಕ್ಯಾನ್ಸರ್ ಪೀಡಿತ ಭಾಗವನ್ನು ಆಪರೇಷನ್ ಮೂಲಕ ತೆಗೆಯುವುದು ಮತ್ತು ಕಿಮೊಥೆರಪಿ ಇತ್ಯಾದಿ ಮಾಡಲಾಗುತ್ತದೆ ಎಂದು ಪ್ರಾಣಿ ಸಂರಕ್ಷಣಾ ಇಲಾಖೆಯ ನಿರ್ದೇಶಕ ಡಾ. ಎನ್.ಶಶಿ ತಿಳಿಸಿದ್ದಾರೆ.