ಹುತಾತ್ಮರ ಕುಟುಂಬಗಳಿಗೆ ಪತ್ರಗಳನ್ನು ಬರೆದು ದೇಶಪ್ರೇಮ ಮೆರೆಯುತ್ತಿರುವ ವಾಚ್‌ಮನ್
ಸೂರತ್,ಮೇ 11: 38ರ ಹರೆಯದ ಈ ವ್ಯಕ್ತಿಯ ದೇಶಪ್ರೇಮ ಇತರರಂತೆ ಸಂದರ್ಭಕ್ಕೆ ತಕ್ಕ ಹಾಗೆ ಪ್ರದರ್ಶನವಾಗುವಂಥದ್ದಲ್ಲ, ಹದಿಹರೆಯದಿಂದಲೇ ದೇಶಪ್ರೇಮವನ್ನು ಮೈಗೂಡಿಸಿಕೊಂಡಿಯೇ ಬೆಳೆದಿದ್ದಾರೆ. ಸೇನೆಯನ್ನು ಸೇರಿ ದೇಶಸೇವೆ ಮಾಡಬೇಕೆಂಬ ಅವರ ಆಸೆ ಹಣಕಾಸಿನ ತೊಂದರೆ ಮತ್ತು ಖೋಟಾ ನಸೀಬಿನಿಂದಾಗಿ ಈಡೇರಲೇ ಇಲ್ಲ. ರಾಜಸ್ಥಾನದ ಭರತಪುರ ಮೂಲದ ಜಿತೇಂದ್ರ ಸಿಂಗ್ ಗುಜ್ಜರ್ ಈಗ ಹೊಟ್ಟೆಪಾಡಿಗಾಗಿ ಸೂರತ್‌ನ ಅಡಜಾನ್ ಪ್ರದೇಶದಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದಾರೆ. ಅಂದ ಹಾಗೆ ಈ ವ್ಯಕ್ತಿಯಲ್ಲಿನ ವಿಶೇಷತೆಯಾದರೂ ಏನು.....?
ಜಿತೇಂದ್ರ ಓರ್ವ ಪತ್ರಲೇಖಕ....ಅವರು ಅಂತರರಾಷ್ಟ್ರೀಯ ಗಡಿಗಳಲ್ಲಿ ವೈರಿಗಳಿಂದ ಹತರಾಗುವ ಹುತಾತ್ಮರ ಕುಟುಂಬಗಳಿಗೆ ಪತ್ರಗಳನ್ನು ಬರೆದು ಗೌರವಗಳನ್ನು ವ್ಯಕ್ತಪಡಿಸುತ್ತಾರೆ. 1999ರ ಕಾರ್ಗಿಲ್ ಯುದ್ಧದಿಂದಾರಂಭಿಸಿ ಈವರೆಗೆ ಸುಮಾರು 4,000 ಪತ್ರಗಳನ್ನು ಹುತಾತ್ಮರ ಕುಟುಂಬಗಳಿಗೆ ಬರೆದಿದ್ದು, ಅವರಿಂದ 125 ಉತ್ತರಗಳನ್ನೂ ಸ್ವೀಕರಿಸಿದ್ದಾರೆ. ದೇಶಕ್ಕಾಗಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಈ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ಬಡವನಾದ ತನಗೆ ಅಸಾಧ್ಯ,ಆದರೆ ತನ್ನ ಶಬ್ದಗಳ ಮೂಲಕ ಅವರಿಗೆ ಸ್ವಲ್ಪವಾದರೂ ಸಮಾಧಾನ ಒದಗಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಜಿತೇಂದ್ರ ಹೇಳಿದರು.
‘‘ಭಾರತೀಯ ಸೇನೆಯಲ್ಲಿ ನಮ್ಮ ಜಿಲ್ಲೆಯ ಬಹಳ ಜನರಿದ್ದಾರೆ. ಯೋಧರು ತಮ್ಮ ಕರ್ತವ್ಯದ ಸ್ಥಳಗಳಿಂದ ತಮ್ಮ ಕುಟುಂಬಗಳಿಗೆ ಉದ್ದುದ್ದ ಪತ್ರಗಳನ್ನು ಬರೆಯುತ್ತಿದ್ದನ್ನು ನಾವು ಕಂಡಿದ್ದೇವೆ. ಈ ಪತ್ರಗಳು ಅವರ ಕುಟುಂಬಗಳಿಗೆ ಸುಖ ನೀಡುತ್ತಿದ್ದವು. ಹೀಗಾಗಿ 1999ರಲ್ಲಿ ನಾನು ಪತ್ರಗಳನ್ನು ಬರೆಯಲು ಆರಂಭಿಸಿದ್ದೆ. ಶಬ್ದಗಳು ಸಮಾಧಾನವನ್ನು ತರುತ್ತವೆ, ಅವು ನನಗೂ ತೃಪ್ತಿಯನ್ನು ನೀಡುತ್ತವೆ ’’ಎಂದರು.
ತನ್ನ ಏಕಮಾತ್ರ ಪುತ್ರ ಹರದೀಪ್ ಸಿಂಗ್(14) ಓದುತ್ತಿದ್ದು, ಆತ ಸೈನ್ಯವನ್ನು ಸೇರಬೇಕು ಎಂದು ತಾನು ಬಯಸಿದ್ದೇನೆ ಎಂದ ಅವರು, ತಾನು ಸೇನೆಯನ್ನು ಸೇರಲು ಪ್ರಯತ್ನಿಸಿದ್ದೆ, ಆದರೆ ದೈಹಿಕ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದೆ. ಖಾಸಗಿ ಸೆಕ್ಯೂರಿಟಿ ಕಂಪನಿಯ ಸಿಬ್ಬಂದಿಯಾಗಿಯಾದರೂ ಸಮವಸ್ತ್ರವನ್ನು ಧರಿಸಲೇಬೇಕೆಂದು ತಾನು ಆಗಲೇ ನಿರ್ಧರಿಸಿದ್ದೆ ಎಂದು ಹೇಳಿದರು.