ಸರ್ಕಾರ್3 ಚಿತ್ರ ವಿಮರ್ಶೆ: ಆ ಹಳೆಯ ರಾಮಗೋಪಾಲ್ ವರ್ಮಾ ಎಲ್ಲಿದ್ದಾರೆ...?
ನಿರ್ದೇಶಕ ರಾಮಗೋಪಾಲ್ ವರ್ಮಾ ನೋಡಲು ಸುಮಾರಾಗಿದೆ ಎಂದು ಹೇಳಬಹುದಾದ ಚಿತ್ರವನ್ನು ಈ ಹಿಂದೆ ತೆರೆಗೆ ತಂದಿದ್ದು ಯಾವಾಗ ಎನ್ನುವುದು ನೆನಪಿದೆಯೇ? ಅದು ಒಂಭತ್ತು ವರ್ಷಗಳ ಹಿಂದಿನ, ಅವರ ‘ಸರ್ಕಾರ್ ’ಚಿತ್ರದ ಎರಡನೇ ಭಾಗವಾಗಿದ್ದ ‘ಸರ್ಕಾರ್ ರಾಜ್’. ನಿಜ ಹೇಳಬೇಕೆಂದರೆ ಸರ್ಕಾರ್‌ಗಿಂತ ಅದರ ಈ ಭಾಗವೇ ಚೆನ್ನಾಗಿತ್ತು. ಆನಂತರದ ಅವರ ಚಿತ್ರಗಳಲ್ಲಿ ಅವರ ನಿರ್ದೇಶನ ಪ್ರತಿಭೆ ಕುಸಿಯುತ್ತಲೇ ಸಾಗಿತ್ತು.....ಎಲ್ಲೋ ಮಧ್ಯೆ ಒಂದೆರಡು ಚಿತ್ರಗಳು ನಿಜವಾದ ವರ್ಮಾರನ್ನು ಮಸುಕಾಗಿ ಕಾಣಿಸಿದ್ದವು.
ಸರ್ಕಾರ್3 ಚಿತ್ರದ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಅದು ವರ್ಮಾರ ‘ನಾಟ್ ಎ ಲವ್ ಸ್ಟೋರಿ’ಯಷ್ಟು ಭಯಂಕರ ಅಥವಾ ‘ರಾಮಗೋಪಾಲ್ ವರ್ಮಾ ಕಿ ಆಗ್’ನಷ್ಟು ಅಸಡ್ಡಾಳವಾಗಿಲ್ಲ. ಇದು ಈ ಚಿತ್ರದ ಬಗ್ಗೆ ಒಂದಿಷ್ಟು ಸಮಾಧಾನ ನೀಡುವ ಅಂಶ. ಅಮಿತಾಬ್ ಬಚ್ಚನ್,ಮನೋಜ್ ಬಾಜಪೇಯಿ,ಜಾಕಿ ಶ್ರಾಫ್‌ರಂತಹ ದಿಗ್ಗಜ ನಟರು ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ.
ಸರ್ಕಾರ್3 ಬಾಳ್ ಠಾಕ್ರೆಯವರನ್ನೇ ಸುಮಾರಾಗಿ ಹೋಲುವ,ಅಮಿತಾಬ ರ್ನಿಹಿಸಿರುವ ಪಾತ್ರ ಸುಭಾಷ್ ನಾಗ್ರೆ ಅಲಿಯಾಸ್ ಸರ್ಕಾರ್ ಜೊತೆ ನಮ್ಮ ಮರುಭೇಟಿ ಮಾಡಿಸುತ್ತದೆ. 2005ರಲ್ಲಿ ಸರ್ಕಾರ್‌ನಲ್ಲಿ ಮೊದಲ ಬಾರಿಗೆ ಅಮಿತಾಬ್ ಈ ಪಾತ್ರವನ್ನು ನಿರ್ವಹಿಸಿದ್ದರು.
ತನ್ನ ಬಿಳಿಯ ಗಡ್ಡಕ್ಕೆ ಸರಿಹೊಂದುವ ಕಪ್ಪು ದಿರಿಸಿನ, ಕುತ್ತಿಗೆಯಲಿ ರುದ್ರಾಕ್ಷಿ ಮಾಲೆಯನ್ನು ಧರಿಸಿರುವ ಸರ್ಕಾರ್‌ಗೆ ಆತನ ಅಭಿಮಾನಿಗಳ ಜೊತೆಗೆ ವೈರಿಗಳೂ ಹೆದರುತ್ತಾರೆ. ಆತ ಚುನಾಯಿತ ಜನಪ್ರತಿನಿಧಿಯಲ್ಲ,ಆದರೆ ಆತನ ತಾಕತ್ತು,ಅಧಿಕಾರ ಮಂತ್ರಿ ಮಹೋದಯರಿಗೂ ಇಲ್ಲ.
ಸರ್ಕಾರ್3ರಲ್ಲಿ ಸುಭಾಷ್ ನಾಗ್ರೆ ಅಲಿಯಾಸ್ ಸರ್ಕಾರ್‌ನ ಶತ್ರುಗಳ ಸಂಖ್ಯೆ ಸಾಕಷ್ಟು ಹೆಚ್ಚಿದೆ, ಆತನ ಹೆಜ್ಜೆ ಹೆಜ್ಜೆಗೂ ಸವಾಲನ್ನೊಡ್ಡುವ ಹೊಸ ಶತ್ರು ಎದುರಾಗುತ್ತಲೇ ಇರುತ್ತಾನೆ. ಮನೋಜ್ ಬಾಜಪೇಯಿ,ರೋಹಿಣಿ ಹಟ್ಟಂಗಡಿ,ಚಿತ್ರದ ಹೆಚ್ಚಿನ ಭಾಗವೆಲ್ಲ ಬಿಕಿನಿಧಾರಿ ಹೆಣ್ಣಿನೊಂದಿಗೆ ಕಾಣಿಸಿಕೊಂಡಿರುವ ಜಾಕಿ ಶ್ರಾಫ್ ಇತ್ಯಾದಿಗಳೆಲ್ಲ ಸರ್ಕಾರ್‌ಗೆ ಸವಾಲುಗಳನ್ನು ಒಡ್ಡುತ್ತಲೇ ಹೋಗುತ್ತಾರೆ.
ಈ ಹಿಂದಿನ ಸರ್ಕಾರ್ ಆವೃತ್ತಿಗಳಲ್ಲಿ ಅಮಿತಾಬ್‌ಗೆ ಸರಿಸಮನಾದ ಖಳನಟರಿದ್ದರು, ಕಥೆಯಲ್ಲಿ ಅವರಿಗೂ ಅಷ್ಟೇ ಮಹತ್ವ ನೀಡಲಾಗಿತ್ತು. ಹೀಗಾಗಿ ಅವೆರಡೂ ಚಿತ್ರಗಳು ಬಾಕ್ಸಾಫೀಸಿನಲ್ಲಿ ಗೆದ್ದಿದ್ದವು. ಆದರೆ ಸರ್ಕಾರ್3ರಲ್ಲಿ ವರ್ಮಾ ಅದೆಲ್ಲವನ್ನೂ ಮರೆತುಬಿಟ್ಟಿದ್ದಾರೆ. ಪಾತ್ರಗಳ ಬಾಯಿಯಿಂದ ಉದ್ದುದ್ದ ಡೈಲಾಗ್‌ಗಳನ್ನು ಹೊರಡಿಸಿದ್ದಾರೆಯೇ ಹೊರತು ಅವುಗಳಲ್ಲಿ ಪಂಚ್ ಎನ್ನುವುದೇ ಇಲ್ಲ. ಭವಿಷ್ಯದ ಸರ್ಕಾರ್,ಅಮಿತಾಬ್‌ರ ಮೊಮ್ಮಗ ಶಿವಾಜಿಯ ಪಾತ್ರಕ್ಕೆ ಅಮಿತ್ ಸಾಧರನ್ನು ಆಯ್ಕೆ ಮಾಡುವ ಮೂಲಕ ವರ್ಮಾ ಎಡವಿದ್ದಾರೆ. ಸರ್ಕಾರ್‌ನ ನಂಬಿಕಸ್ಥ ಬಂಟನಾಗಿ ರೋನಿತ್ ರಾಯ್ ಉತ್ತಮವಾಗಿ ನಟಿಸಿದ್ದಾರೆ,ಆದರೆ ಹಳಸಲು ಮುಖ. ಹೊಸತನವೆಲ್ಲಿದೆ?
ಅಂದ ಹಾಗೆ ಯಾಮಿ ಗೌತಮಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಅಷ್ಟೇ. ಅವರ ಪಾತ್ರದ ಬಗ್ಗೆ ಇದಕ್ಕಿಂತ ಹೆಚ್ಚಿನ ವಿಮರ್ಶೆಅಗತ್ಯವಿಲ್ಲ.
ಅಮಿತಾಬ್ ತಾನೋರ್ವ ಮೇರುನಟ ಎಂದೇನೋ ತೋರಿಸಿಕೊಂಡಿದ್ದಾರೆ. ಆದರೆ ಕಥೆಯಲ್ಲಿನ ಅವರ ಪಾತ್ರದ ಕಲ್ಪನೆ ಅವರ ಪೂರ್ಣ ಸಾಮಥ್ಯ ಪ್ರದರ್ಶನಕ್ಕೆ ಕಡಿವಾಣ ಹಾಕಿದಂತಿದೆ.
ಹಳೆಯ ರಾಮಗೋಪಾಲ್ ವರ್ಮಾ ಸಂಪೂರ್ಣವಾಗಿ ಕಳೆದು ಹೋಗಿದ್ದರೂ, ಸಾಧಾರಣ ಎನ್ನಬಹುದಾದ ಸರ್ಕಾರ್3ರ ಕೆಲವು ದೃಶ್ಯಗಳು ಆ ಹಳೆಯ ವರ್ಮಾರನ್ನು ನೆನಪಿಸಿದ್ದು ಸುಳ್ಳಲ್ಲ.