×
Ad

ಕಾಲೇಜ್ ಕುಮಾರ್ ಗೆ ಸಂಯುಕ್ತಾ ಕಿರಿಕ್

Update: 2017-05-12 19:20 IST

‘ಕಿರಿಕ್‌ಪಾರ್ಟಿ’ ಖ್ಯಾತಿಯ ಸಂಯುಕ್ತಾ ಹೆಗ್ಡೆ,, ‘ಕಾಲೇಜ್ ಕುಮಾರ್’ ಚಿತ್ರತಂಡಕ್ಕೆ ತಲೆನೋವಾಗಿ ಬಿಟ್ಟಿದ್ದಾಳೆ. ಹಾಗಂತ ಚಿತ್ರದ ನಿರ್ಮಾಪಕರೇ ದೂರುತ್ತಿದ್ದಾರೆ. ‘ಕಾಲೇಜ್ ಕುಮಾರ್’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದ ಸಂಯುಕ್ತಾಗೆ ತಮಿಳು ಚಿತ್ರವೊಂದರಲ್ಲಿ ನಟಿಸಲು ಅವಕಾಶ ಬಂದಿತ್ತು. ಹಿಂದೆಮುಂದೆ ನೋಡದೆ ಸಂಯುಕ್ತಾ ‘ಕಾಲೇಜ್ ಕುಮಾರ್’ ಚಿತ್ರಕ್ಕೆ ಕೈಕೊಟ್ಟಿದ್ದಾರಂತೆ. ಕೆಂಡಸಂಪಿಗೆ ಖ್ಯಾತಿಯ ವಿಕ್ಕಿ ಅರುಣ್ ನಟಿಸುತ್ತಿರುವ ‘ಕಾಲೇಜ್‌ಕುಮಾರ್’ ಚಿತ್ರದಲ್ಲಿ ಸಂಯುಕ್ತಾ ನಾಯಕಿ ಪಾತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದರು.

‘ಅಲೆಮಾರಿ’ ಸಂತು ನಿರ್ದೇಶಿಸುತ್ತಿರುವ ‘ಕಾಲೇಜ್ ಕುಮಾರ್’ ಚಿತ್ರಕ್ಕೆ ಎಲ್.ಪದ್ಮನಾಭನ್ ನಿರ್ಮಾಪಕರು. ಮೇ1ರಂದು ಚಿತ್ರದ ಶೂಟಿಂಗ್ ಆರಂಭಗೊಂಡಿತ್ತು ಮತ್ತು ಸಂಯುಕ್ತಾ ಅವರು ಮುಹೂರ್ತದಲ್ಲಿ ಪಾಲ್ಗೊಂಡಿದ್ದರು. ಮೊದಲ ದೃಶ್ಯಕ್ಕೆ ಕಿಚ್ಚ ಸುದೀಪ್ ಕ್ಲಾಪ್ ಮಾಡಿದ್ದರು.

ಚಿತ್ರೀಕರಣದ ಶೆಡ್ಯೂಲ್‌ನ್ನು ಮುಂಚಿತವಾಗಿಯೇ ಸಂಯುಕ್ತಾಗೆ ನೀಡಿದ್ದರೂ, ಇನ್ನು ಕೂಡಾ ಆಕೆ ಶೂಟಿಂಗ್‌ಗೆ ಹಾಜರಾಗುತ್ತಿಲ್ಲವೆಂದು ನಿರ್ದೇಶಕ ಸಂತು ದೂರಿದ್ದಾರೆ. ಈ ನಡುವೆ ಸಂಯುಕ್ತಾ ಅವರು ತಮಿಳು ಚಿತ್ರವೊಂದರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

‘ಕಾಲೇಜ್ ಕುಮಾರ್’ ಚಿತ್ರದ ಮುಹೂರ್ತ ನಡೆದ ಬೆನ್ನಲ್ಲೇ ಸಂಯುಕ್ತಾ ಚೆನ್ನೈಗೆ ಹಾರಿದ್ದರು. ಕಾರ್ತಿಕ್ ಸುಬ್ಬರಾಜು ನಿರ್ದೇಶನದ ತಮಿಳುಚಿತ್ರದಲ್ಲಿ ಆಕೆ ಪ್ರಭುದೇವಾಗೆ ನಾಯಕಿಯಾಗಿ ಅಭಿನಯಿಸುವ ಸುವರ್ಣಾವಕಾಶ ತನಗೆ ದೊರೆತಿರುವುದಾಗಿ ಆಕೆ ಸಂತಸದಿಂದ ಹೇಳಿಕೊಂಡಿದ್ದಾರೆ. ಆದರೆ ಇತ್ತ ‘ಕಾಲೇಜ್ ಕುಮಾರ್’ ಚಿತ್ರ ತಂಡ ಸಂಯುಕ್ತಾಳಿಗಾಗಿ ಕಾದು ಕಾದು ಸುಸ್ತಾಗಿದೆ. ಹಿರಿಯ ನಟಿ ಶ್ರುತಿ, ನಟರಾದ ಸಾಧುಕೋಕಿಲಾ ಹಾಗೂ ಅಚ್ಯುತ ಕುಮಾರ್ ಅವರು ಶೂಟಿಂಗ್‌ಗೆ ಹಾಜರಾಗಿದ್ದರು. ಆದರೆ ನಾಯಕಿ ಸಂಯುಕ್ತಾ ಅವರ ಗೈರುಹಾಜರಿಯಿಂದಾಗಿ ಅವರು ಕೈಕಟ್ಟಿಕುಳಿತುಕೊಳ್ಳುವಂತಾಯಿತು. ಒಟ್ಟಾರೆಯಾಗಿ ನಾಯಕಿ ನಟಿಯಿಂದಾಗಿ ಹಣ, ಸಮಯ ಎರಡೂ ವ್ಯರ್ಥವಾಗುತ್ತಿದೆಯೆಂದು ನಿರ್ಮಾಪಕ ಪದ್ಮನಾಭ್ ಅಲವತ್ತುಕೊಂಡಿದ್ದಾರೆ.

ನಿರ್ಮಾಪಕ ಎಲ್.ಪದ್ಮನಾಭನ್ ಹಾಗೂ ನಿರ್ದೇಶಕ ಸಂತು, ಸಂಯುಕ್ತಾರನ್ನು ಸಂಪರ್ಕಿಸಲು ಹಲವು ಬಾರಿ ಯತ್ನಿಸಿದರೂ, ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೂ ಬೇಸತ್ತ ನಿರ್ಮಾಪಕ ಪದ್ಮನಾಭಣ್ ಅವರು ಸಂಯುಕ್ತಾ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ದೂರು ನೀಡಲು ನಿರ್ಧರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News