ಸುಪ್ರೀಂಕೋರ್ಟ್‌ಗೆ ಹೆದರಿ ನ್ಯಾ.ಕರ್ಣನ್ ಪರ ವಾದಿಸಲು ಹಿಂಜರಿದ 12 ವಕೀಲರು

Update: 2017-05-12 14:03 GMT

 ಹೊಸದಿಲ್ಲಿ, ಮೇ 12: ಕೋಲ್ಕತಾ ಹೈಕೋರ್ಟ್‌ನ ನ್ಯಾಯಾಧೀಶ ಸಿ.ಎಸ್.ಕರ್ಣನ್ ಇರುವಿಕೆಯ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭಿಸದ ಹಿನ್ನೆಲೆಯಲ್ಲಿ ಎರಡು ರಾಜ್ಯಗಳ ಪೊಲೀಸರು ಅವರನ್ನು ಬಂಧಿಸಲು ಹುಡುಕಾಟ ಮುಂದುವರಿಸಿದ್ದಾರೆ. ಈ ಮಧ್ಯೆ ಕರ್ಣನ್ ಅವರ ಪರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ವಕೀಲರೋರ್ವರು ಕರ್ಣನ್ ಚೆನ್ನೈಯಲ್ಲಿಯೇ ಇದ್ದಾರೆ ಎಂದಿದ್ದಾರೆ.

  ಈ ಮಧ್ಯೆ, ಜೈಲುಶಿಕ್ಷೆಯನ್ನು ರದ್ದುಗೊಳಿಸಬೇಕೆಂದು ಕರ್ಣನ್ ಪರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲು ಆಗಮಿಸಿರುವ ವಕೀಲ ಮ್ಯಾಥ್ಯೂಸ್ ನೆಡುಂಪರ, ನ್ಯಾ.ಕರ್ಣನ್ ಚೆನ್ನೈಯಲ್ಲೇ ಇದ್ದಾರೆ ಎಂದು ತಿಳಿಸಿದ್ದಾರೆ. ನ್ಯಾ.ಕರ್ಣನ್ ತನ್ನ ಪರ ಅರ್ಜಿ ಸಲ್ಲಿಸಲು 12 ಮಂದಿ ವಕೀಲರನ್ನು ಸಂಪರ್ಕಿಸಿದ್ದರು. ಆದರೆ ನಿಮ್ಮ(ಸುಪ್ರೀಂಕೋರ್ಟ್‌ನ) ಹೆದರಿಕೆಯಿಂದ ಅವರೆಲ್ಲಾ ಹಿಂಜರಿದರು. ಕಡೆಗೆ ಅವರನ್ನು ಪ್ರತಿನಿಧಿಸಲು ನನ್ನನ್ನು ಕಳಿಸಿದ್ದಾರೆ. ಈ ಕುರಿತ ಎಲ್ಲಾ ದಾಖಲೆಪತ್ರಗಳಿಗೂ ಅವರು ಹಿ ಹಾಕಿದ್ದಾರೆ ಎಂದವರು ತಿಳಿಸಿದರು.

ನ್ಯಾಯಾಲಯ ನಿಂದನೆಯ ಹಿನ್ನೆಲೆಯಲ್ಲಿ ನ್ಯಾ.ಕರ್ಣನ್ ಅವರಿಗೆ ಸುಪ್ರೀಂಕೋರ್ಟ್ ಆರು ತಿಂಗಳ ಜೈಲುಶಿಕ್ಷೆಯನ್ನು ವಿಧಿಸಿತ್ತು.

   ಕರ್ಣನ್ ಅವರ ಪ್ರತಿನಿಧಿಯಾಗಿರುವ ವಕೀಲ ನೆಡುಂಪರ ಅವರ ವಿರುದ್ಧವೂ ನ್ಯಾಯಾಲಯ ನಿಂದನೆಯ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ಮುಂಬೈ ಹೈಕೋರ್ಟ್‌ನಲ್ಲಿ ವಿಭಾಗೀಯ ಪೀಠವೊಂದು ವಿಚಾರಣೆ ನಡೆಸುತ್ತಿದ್ದ ಸಂದರ್ಭ ನೆಡುಂಪರ ನ್ಯಾಯಾಲಯದ ಘನತೆಯನ್ನು ಧಿಕ್ಕರಿಸಿ ಹೊರನಡೆದಿದ್ದರು ಎಂದು ಪೀಠವು ಇವರಿಗೆ ನ್ಯಾಯಾಲಯ ನಿಂದನೆ ನೋಟಿಸ್ ನೀಡಿತ್ತು.

 ಅಲ್ಲದೆ, ನ್ಯಾ.ಕರ್ಣನ್ ಅವರ ಪರವಿರುವ ಕೆಲವು ವಕೀಲರು ಮತ್ತು ನ್ಯಾಯಾಧೀಶರಲ್ಲಿ ನೆಡುಂಪುರ ಕೂಡಾ ಒಬ್ಬರು. ನ್ಯಾ.ಕರ್ಣನ್ ಓರ್ವ ಕ್ರಾಂತಿಕಾರಿ. ನ್ಯಾಯಾಂಗದಲ್ಲಿರುವ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿರುವ ಧೈರ್ಯಶಾಲಿ ಎಂದು ಇವರು ಬಣ್ಣಿಸಿದ್ದರು. ಅಲ್ಲದೆ ‘ನ್ಯಾಯಾಲಯದಲ್ಲಿ ಪಾರದರ್ಶಕತೆ ಮತ್ತು ಸುಧಾರಣೆ ತರುವ ನಿಟ್ಟಿನಲ್ಲಿ ರೂಪಿಸಲಾಗಿರುವ ವಕೀಲರ ರಾಷ್ಟ್ರೀಯ ಅಭಿಯಾನ’ದ ಮುಖ್ಯಸ್ಥರೂ ಆಗಿದ್ದಾರೆ . ಜೆ.ಎಸ್.ಖೇಹರ್‌ರನ್ನು ಪ್ರಧಾನ ನ್ಯಾಯಾಧೀಶ ಹುದ್ದೆಯಿಂದ ವಜಾಗೊಳಿಸುವಂತೆ ಕಳೆದ ಡಿಸೆಂಬರ್‌ನಲ್ಲಿ ನೆಡುಂಪುರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News