×
Ad

ಮದುವೆ ರದ್ದತಿಯ ನಿಕೃಷ್ಟ ವಿಧಾನ ತ್ರಿವಳಿ ತಲಾಖ್: ಸುಪ್ರೀಂಕೋರ್ಟ್ ವಿಶ್ಲೇಷಣೆ

Update: 2017-05-12 19:37 IST

ಹೊಸದಿಲ್ಲಿ, ಮೇ 12: ಕೆಲವು ವಿದ್ವಾಂಸರು ಕಾನೂನು ಸಮ್ಮತ ಎಂದು ಅಭಿಪ್ರಾಯಪಟ್ಟರೂ , ತ್ರಿವಳಿ ತಲಾಖ್ ಪದ್ದತಿ ಮದುವೆ ರದ್ದತಿಯ ಅತ್ಯಂತ ನಿಕೃಷ್ಟ ಮತ್ತು ಅಪೇಕ್ಷಿಸದ ವಿಧಾನವಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

   ಮಹಿಳೆಯರು ನಿಖಾಹ್‌ನಾಮ (ವಿವಾಹ ಒಪ್ಪಂದ) ಸಂದರ್ಭ ತ್ರಿವಳಿ ತಲಾಖ್‌ಗೆ ಒಪ್ಪುವುದಿಲ್ಲ ಎಂಬ ಷರತ್ತು ವಿಧಿಸಲು ಅವಕಾಶ ಇರುವ ಕಾರಣ ಈ ಪ್ರಕರಣದ ಕುರಿತು ನ್ಯಾಯಾಂಗ ವಿಚಾರಣೆಯ ಅಗತ್ಯವಿಲ್ಲ ಎಂದು, ಪ್ರಕರಣದಲ್ಲಿ ವೈಯಕ್ತಿಕ ನೆಲೆಯಲ್ಲಿ ನ್ಯಾಯಾಲಯಕ್ಕೆ ನೆರವಾಗುತ್ತಿರುವ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ತಿಳಿಸಿದಾಗ ಪ್ರಧಾನ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಈ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿತು.

    ತ್ರಿವಳಿ ತಲಾಖ್ ವಿಷಯದ ಬಗ್ಗೆ ವಿಚಾರಣೆ ಆರಂಭಿಸಿದ ಸುಪ್ರೀಂಕೋರ್ಟ್ ತಾನು ಬಹುಪತ್ನಿತ್ವ ವಿಷಯಕ್ಕೆ ಕೈಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿತು. ಅಲ್ಲದೆ , ತ್ರಿವಳಿ ತಲಾಖ್ ಪದ್ದತಿ ನಿಷೇಧಿಸಲ್ಪಟ್ಟಿರುವ ಮುಸ್ಲಿಂ ಮತ್ತು ಮುಸ್ಲಿಮೇತರ ರಾಷ್ಟ್ರಗಳ ಪಟ್ಟಿಯನ್ನು ತಯಾರಿಸುವಂತೆ ಖುರ್ಷಿದ್‌ಗೆ ಸೂಚಿಸಿತು. ಪಾಕಿಸ್ತಾನ, ಅಫ್‌ಘಾನಿಸ್ತಾನ, ಮೊರೊಕ್ಕೊ ಮತ್ತು ಸೌದಿ ಅರೆಬಿಯ ಇತ್ಯಾದಿ ದೇಶಗಳಲ್ಲಿ ತ್ರಿವಳಿ ತಲಾಖ್ ಪದ್ದತಿ ಆಚರಣೆಯಲ್ಲಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು. ತ್ರಿವಳಿ ತಲಾಖ್ ಪದ್ದತಿಯ ಸಂತ್ರಸ್ತೆಯೋರ್ವರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ರಾಮ್ ಜೇಠ್ಮಲಾನಿ, ತ್ರಿವಳಿ ತಲಾಖ್ ಹಕ್ಕು ಪತಿಗೆ ಮಾತ್ರ ದೊರೆಯುತ್ತಿದ್ದು ಇದು ಸಂವಿಧಾನದ 14ನೇ ಪರಿಚ್ಛೇದ(ಸಮಾನತೆಯ ಹಕ್ಕು)ದ ಉಲ್ಲಂಘನೆಯಾಗಿದೆ. ಮದುವೆ ರದ್ದು ಮಾಡುವ ಏಕಪಕ್ಷೀಯ ಕ್ರಮ ಅಸಹ್ಯವಾಗಿದ್ದು ಇದನ್ನು ತೊಲಗಿಸಬೇಕು ಎಂದರು.

 ಪತಿ ಇಚ್ಚಿಸಿದೊಡನೆ ಓರ್ವ ಪತ್ನಿ ಮಾಜಿ ಪತ್ನಿ ಎನಿಸಿಕೊಳ್ಳುವುದಕ್ಕೆ ಯಾವ ಕಾನೂನಿನಲ್ಲೂ ಅವಕಾಶ ನೀಡಿಲ್ಲ. ಅಲ್ಲದೆ ಇದು ಅಸಾಂವಿಧಾನಿಕ ವರ್ತನೆಯ ಪರಮೋಚ್ಛ ನಿದರ್ಶನವಾಗಿದೆ. ಪವಿತ್ರ ಖುರಾನ್‌ನ ಸಿದ್ದಾಂತಗಳಿಗೆ ವಿರುದ್ಧವಾಗಿರುವ ಈ ಅಸಹ್ಯ, ಹೇಯ ಪದ್ದತಿ ಸಂವಿಧಾನದ ಆಶಯಗಳಿಗೆ ಪ್ರತಿಕೂಲವಾಗಿದೆ ಎಂದು ಜೇಠ್ಮಲಾನಿ ವಾದ ಮಂಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News