ಮಾಲೆಗಾಂವ್ ಸ್ಫೋಟ ಪ್ರಕರಣ: ಪ್ರಜ್ಞಾ ಸಿಂಗ್ ಖುಲಾಸೆಗೆ ಆಕ್ಷೇಪ ಸಲ್ಲಿಸದ ಎನ್‌ಐಎ

Update: 2017-05-12 14:11 GMT

ಮುಂಬೈ, ಮೇ 12: 2008ರಲ್ಲಿ ನಡೆದ ಮಾಲೆಗಾಂವ್ ಬಾಂಬ್‌ಸ್ಫೋಟ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ಞಾ ಸಿಂಗ್ ಠಾಕುರ್‌ರನ್ನು ಖುಲಾಸೆಗೊಳಿಸಲು ತನ್ನ ಆಕ್ಷೇಪವಿಲ್ಲ ಎಂದು ರಾಷ್ಟ್ರೀಯ ತನಿಖಾ ಏಜೆನ್ಸಿ(ಎನ್‌ಐಎ) ತಿಳಿಸಿದೆ.

  ಬಾಂಬೆ ಹೈಕೋರ್ಟ್‌ನಿಂದ ಜಾಮೀನು ದೊರೆತ ಬಳಿಕ ಪ್ರಜ್ಞಾ ಸಿಂಗ್ ಕಳೆದ ವಾರ ಪ್ರಕರಣದಿಂದ ಖುಲಾಸೆಗೊಳಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಗೆ ಉತ್ತರ ನೀಡಿದ್ದೇವೆ. ಎನ್‌ಐಎ ನಿರ್ಧರಿಸಿರುವಂತೆ ಖುಲಾಸೆಗೊಳಿಸುವ ವಿರುದ್ಧ ಯಾವುದೇ ಆಕ್ಷೇಪ ಸಲ್ಲಿಸಲಾಗಿಲ್ಲ ಎಂದು ವಿಶೇಷ ಸರಕಾರಿ ಅಭಿಯೋಜಕ ಅವಿನಾಶ್ ರಸಲ್ ತಿಳಿಸಿದ್ದಾರೆ.

 ಪ್ರಕರಣದಲ್ಲಿ ತನ್ನ ವಿರುದ್ಧ ಸಲ್ಲಿಸಲಾಗಿದ್ದ ಸಾಕ್ಷಿಯ ಕುರಿತು ಹೈಕೋರ್ಟ್ ನೀಡಿದ ಅಭಿಪ್ರಾಯ ಮತ್ತು ಆರೋಪಪಟ್ಟಿ ಸಲ್ಲಿಸುವಾಗ ಎನ್‌ಐಎ ನೀಡಿದ್ದ ಅಭಿಪ್ರಾಯದ ದಾಖಲೆಯನ್ನು ಪ್ರಜ್ಞಾ ಸಿಂಗ್ ಅರ್ಜಿಯ ಜೊತೆ ಸಲ್ಲಿಸಿದ್ದರು.

   ಆರಂಭದಲ್ಲಿ ಈ ಪ್ರಕರಣದ ತನಿಖೆ ನಡೆಸಿದ್ದ ಎಟಿಎಸ್(ಭಯೋತ್ಪಾದನಾ ನಿಗ್ರಹ ದಳ) ಸುಳ್ಳು ಕಥೆ ಕಟ್ಟಿತ್ತು. ಎಟಿಎಸ್ ತನಿಖೆ ಸರಿಯಾದ ಕ್ರಮದಲ್ಲಿ ಸಾಗಿರಲಿಲ್ಲ ಎಂಬುದು ನಂತರ ಎನ್‌ಐಎ ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಳೆದ ವಾರ ಪ್ರಕರಣದಿಂದ ಖುಲಾಸೆಗೊಳಿಸಬೇಕೆಂದು ಕೋರಿ ಅರ್ಜಿ ಸಲ್ಲಿಸಲಾಗಿದೆ ಎಂದು ಪ್ರಜ್ಞಾ ಸಿಂಗ್ ಅವರ ವಕೀಲರು ತಿಳಿಸಿದ್ದಾರೆ.

   ಕಳೆದ ವರ್ಷದ ಮೇ 13ರಂದು ಪೂರಕ ಆರೋಪಪಟ್ಟಿ ಸಲ್ಲಿಸಿದ್ದ ಎನ್‌ಐಎ ಪ್ರಕರಣದಲ್ಲಿ ಪ್ರಜ್ಞಾ ಸಿಂಗ್‌ರನ್ನು ಅಪರಾಧಿ ಎಂದು ಸಾಬೀತುಪಡಿಸುವ ಯಾವುದೇ ಪುರಾವೆಗಳಿಲ್ಲ. ಆದ್ದರಿಂದ ಅವರ ವಿರುದ್ದದ ಎಲ್ಲಾ ಪ್ರಕರಣಗಳ್ನು ಕೈಬಿಟ್ಟು ಅವರನ್ನು ಖುಲಾಸೆಗೊಳಿಸಬಹುದು ಎಂದು ಶಿಫಾರಸು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News