ಬನ್ಸ್ವಾರಾದಲ್ಲಿ ಕೋಮು ಉದ್ವಿಗ್ನತೆ, ಕರ್ಫ್ಯೂ ಹೇರಿಕೆ
ಬನ್ಸ್ವಾರಾ,ಮೇ 12: ಧಾರ್ಮಿಕ ಸ್ಥಳವೊಂದರ ಕುರಿತು ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದು ಕೋಮು ಉದ್ವಿಗ್ನತೆ ತಲೆದೋರಿದ ಬಳಿಕ ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಶುಕ್ರವಾರ ಕರ್ಫ್ಯೂ ಹೇರಲಾಗಿದೆ.
ಕಾಳಿಕಾ ಮಾತಾ, ಗೋರಖ್ ಇಮ್ಲಿ, ಖಟ್ವಾರಾ ಮತ್ತು ಪಥ್ರಿ ಗಂಜ್ ಇವು ಕರ್ಫ್ಯೂ ಹೇರಿಕೆಯಾಗಿರುವ ಪ್ರದೇಶಗಳು.
ಕಾಳಿಕಾ ಮಠ ಪ್ರದೇಶದಲ್ಲಿರುವ ಧಾರ್ಮಿಕ ಸ್ಥಳವೊಂದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವಿವಾದ ಆಗಾಗ್ಗೆ ಭುಗಿಲೇಳುತ್ತಿತ್ತು ಎಂದು ಮೂಲಗಳು ತಿಳಿಸಿವೆ.
ಗುರುವಾರ ರಾತ್ರಿ 11 ಗಂಟೆಯ ಸುಮಾರಿಗೆ ಈ ಪ್ರದೇಶದ ಮೂಲಕ ಶಬೇ ಬರಾತ್ ಮೆರವಣಿಗೆ ಸಾಗುತ್ತಿದ್ದಾಗ ಎರಡೂ ಗುಂಪುಗಳ ನಡುವೆ ಪರಸ್ಪರ ಕಲ್ಲು ತೂರಾಟ,ಘರ್ಷಣೆಗಳು ನಡೆದಿದ್ದು, ಎರಡು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಮೂವರು ಗಾಯಗೊಂಡಿದ್ದಾರೆ. ಇಡೀ ಪ್ರದೇಶದಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ ಮತ್ತು ಭಾರೀ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಬನ್ಸ್ವಾರಾ ಜಿಲ್ಲಾಧಿಕಾರಿ ಭಗವತಿ ಪ್ರಸಾದ್ ಸುದ್ದಿಸಂಸ್ಥೆಗೆ ತಿಳಿಸಿದರು.