ದಾಖಲೆ ಮುರಿದ ‘ಟ್ಯೂಬ್‌ಲೈಟ್’

Update: 2017-05-12 14:32 GMT

ಸಲ್ಮಾನ್‌ಖಾನ್ ಅಭಿನಯದ ‘ಟ್ಯೂಬ್‌ಲೈಟ್’ ಬಿಡುಗಡೆಗೆ ಮೊದಲೇ ‘ಬಾಹುಬಲಿ-2’ನ ದಾಖಲೆಯನ್ನು ಮುರಿದಿದೆಯಂತೆ. ಹೌದು. ಚಿತ್ರದ ಟೀಸರ್ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದ ಕೇವಲ 48 ತಾಸುಗಳಲ್ಲಿ 1 ಕೋಟಿ ಮಂದಿ ವೀಕ್ಷಿಸಿದ್ದಾರೆ. ಈತನಕ ಯಾವುದೇ ಭಾರತೀಯ ಚಿತ್ರದ ಟೀಸರ್‌ಗೆ ಇಂತಹದ್ದೊಂದು ಅದ್ಭುತವಾದ ಪ್ರತಿಕ್ರಿಯೆ ದೊರೆತಿಲ್ಲವಂತೆ.

ಯುದ್ಧದ ಹಿನ್ನೆಲೆಯಲ್ಲಿ ನಡೆಯುವ ಪ್ರೇಮಕಥಾನಕವಿರುವ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅದಕ್ಕೆ ಸಿನಿಪ್ರಿಯರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

‘ಟ್ಯೂಬ್‌ಲೈಟ್’ ಟೀಸರ್‌ಗೆ ದೊರೆತ ಭರ್ಜರಿ ಪ್ರತಿಕ್ರಿಯೆಯಿಂದಾಗಿ ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ‘ಬಾಹುಬಲಿ-2’ನ ದಾಖಲೆಯನ್ನು ಮುರಿದರೂ ಅಚ್ಚರಿಯಿಲ್ಲವೆಂದು ಬಾಲಿವುಡ್ ಮಂದಿ ಲೆಕ್ಕಹಾಕಿದ್ದಾರೆ. ಸಲ್ಮಾ ಖಾನ್ ಹಾಗೂ ಸಲ್ಮಾನ್ ಖಾನ್ ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರಕ್ಕೆ ಬಾಲಿವುಡ್‌ನ ಸರಣಿಹಿಟ್ ಚಿತ್ರಗಳ ನಿರ್ದೇಶಕ ಕಬೀರ್‌ಖಾನ್ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಸಲ್ಮಾನ್ ಸಹೋದರ ಸೊಹೈಲ್ ಖಾನ್ ಕೂಡಾ ಮುಖ್ಯಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಚೀನಿ ನಟಿ ಝ ಝು, ಬಾಲಿವುಡ್‌ಗೆ ಇದೇ ಮೊದಲ ಬಾರಿಗೆ ಪಾದಾರ್ಪಣೆ ಮಾಡಿದ್ದಾರೆ. ಈದುಲ್ ಫಿತ್ರ್ ಹಬ್ಬದ ವೇಳೆಗೆ ‘ಟ್ಯೂಬ್‌ಲೈಟ್’ ವಿಶ್ವದಾದ್ಯಂತ ತೆರೆ ಕಾಣಲಿದೆ.ಇತ್ತೀಚಿನ ದಿನಗಳಲ್ಲಿ ಬಹುತೇಕ ಬಾಲಿವುಡ್ ಚಿತ್ರಗಳ ಬಾಕ್ಸ್ ಆಫೀಸ್ ಸಾಧನೆ ನೀರಸವಾಗಿರುವುದು ಚಿತ್ರೋದ್ಯಮವನ್ನು ುಂಕುಕವಿಯುವಂತೆ ಮಾಡಿದೆ.

ಹೀಗಾಗಿ ‘ಟ್ಯೂಬ್‌ಲೈಟ್’ ಚಿತ್ರ ಗೆಲುವು ಸಾಧಿಸಿದಲ್ಲಿ, ಖಂಡಿತವಾಗಿಯೂ ಬಾಲಿವುಡ್ ಚಿತ್ರರಂಗಕ್ಕೆ ಹೊಸ ಹುಮ್ಮಸ್ಸು ನೀಡಲಿದೆಯೆಂದು ಭರವಸೆಯ ಮಾತುಗಳು ಕೇಳಿಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News