ಆಧಾರ್ ಕಡ್ಡಾಯ ಪ್ರಶ್ನಿಸಿದ ಅರ್ಜಿ : ಮೇ 17ರಂದು ಸುಪ್ರೀಂ ವಿಚಾರಣೆ
ಹೊಸದಿಲ್ಲಿ, ಮೇ 12: ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವ ಕೇಂದ್ರ ಸರಕಾರದ ಅಧಿಸೂಚನೆಯ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮೇ 17ರಂದು ನಡೆ ುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.
ಆಧಾರ್ ವಿಷಯ ಪ್ರಮುಖವಾಗಿರುವ ಕಾರಣ ತ್ವರಿತ ವಿಚಾರಣೆ ಅಗತ್ಯವಿದೆ ಎಂಬ ಹಿರಿಯ ವಕೀಲ ಶ್ಯಾಮ್ ದಿವಾನ್ ಮನವಿಗೆ ಸ್ಪಂದಿಸಿದ ಪ್ರಧಾನ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠವು ಮೇ 17ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು.
ಆಧಾರ್ ಕಡ್ಡಾಯವಲ್ಲ, ಐಚ್ಛಿಕ ಎಂಬ ಸುಪ್ರೀಂಕೋರ್ಟ್‌ನ ಆದೇಶ ಇದ್ದಾಗ್ಯೂ ಸರಕಾರ ಸರಣಿ ಅಧಿಸೂಚನೆ ಮೂಲಕ ವಿವಿಧ ಸರಕಾರಿ ಸವಲತ್ತುಗಳನ್ನು ಪಡೆಯಲು ಆಧಾರ್ ಕಡ್ಡಾಯಗೊಳಿಸಿದೆ. ಈ ವಿಷಯವನ್ನು ಇಬ್ಬರು ನ್ಯಾಯಾಧೀಶರ ವಿಭಾಗೀಯ ಪೀಠ ವಿಚಾರಣೆ ಮಾಡಬೇಕು ಎಂದು ವಕೀಲ ಶ್ಯಾಮ್‌ದಿವಾನ್ ಮನವಿ ಮಾಡಿಕೊಂಡರು. ಶ್ಯಾಮ್‌ದಿವಾನ್ ಮಕ್ಕಳ ಹಕ್ಕು ಸಂರಕ್ಷಣೆಯ ಕುರಿತ ರಾಷ್ಟ್ರೀಯ ಆಯೋಗದ ಮಾಜಿ ಅಧ್ಯಕ್ಷೆ ಶಾಂತ ಸಿನ್ಹ ಅವರ ಪರ ವಕೀಲರಾಗಿದ್ದಾರೆ.
ಆಧಾರ್ ಕುರಿತಂತೆ ಐವರು ನ್ಯಾಯಾಧೀಶರ ಪೀಠವು ಮಧ್ಯಂತರ ಆದೇಶ ಹೊರಡಿಸಿರುವ ಕಾರಣ ಇದನ್ನು ಮತ್ತೆ ಇಬ್ಬರು ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸುವುದು ಸರಿಯಲ್ಲ ಎಂದು ಸರಕಾರದ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ರಂಜಿತ್ ಕುಮಾರ್ ಹೇಳಿದರು. ಆಧಾರ್ ಐಚ್ಛಿಕ ಎಂದು ಸುಪ್ರೀಂಕೋರ್ಟ್ ಹಲವು ಬಾರಿ ಆದೇಶ ನೀಡಿದ ಬಳಿಕ ಕೇಂದ್ರ ಸರಕಾರ ಹೊಸ ಕಾನೂನು ಜಾರಿಗೊಳಿಸಿದೆ. ಇದನ್ನು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿಲ್ಲ ಎಂದವರು ಹೇಳಿದರು.
ಆಧಾರ್ ಕಾರ್ಡ್‌ಗೆ ಇರುವ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ಹಲವು ಅರ್ಜಿಗಳನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಸಲಾಗಿದ್ದು ಇವು ವಿಚಾರಣೆಗೆ ಬಾಕಿಯಿದೆ. ಈ ಹಿಂದೆ, ಸರಕಾರದ ಯೋಜನೆಗಳ ಸವಲತ್ತು ಪಡೆಯಲು ಆಧಾರ್ ಕಾರ್ಡ್ ಕಡ್ಡಾತಗೊಳಿಸುವಂತಿಲ್ಲ. ಆದರೆ ಎಲ್‌ಪಿಜಿ ಸಬ್ಸಿಡಿ, ಜನಧನ ಯೋಜನೆ, ಸಾರ್ವಜನಿಕ ವಿತರಣಾ ವ್ಯವಸ್ಥೆ.. ಇತ್ಯಾದಿಗಳಿಗೆ ಆಧಾರ್ ಕಡ್ಡಾಯಗೊಳಿಸಬುದು ಎಂದು ನ್ಯಾಯಾಲಯ ಸೂಚಿಸಿತ್ತು.