ಪಠಾಣ್‌ಕೋಟ್ ದಾಳಿಯ ಬಳಿಕ ಭದ್ರತೆಯನ್ನು ಮೇಲ್ದರ್ಜೆಗೇರಿಸಲು ವಾಯುಪಡೆಗೆ ಸಿಕ್ಕಿದ್ದೆಷ್ಟು?

Update: 2017-05-12 15:55 GMT

ಹೊಸದಿಲ್ಲಿ,ಮೇ 12: ಕಳೆದ ವರ್ಷದ ಜನವರಿಯಲ್ಲಿ ಪಂಜಾಬ್‌ನ ಪಠಾಣಕೋಟ್ ವಾಯುಪಡೆ ನೆಲೆಗೆ ನುಗ್ಗಿದ್ದ ಭಾರೀ ಶಸ್ತ್ರಸಜ್ಜಿತ ಭಯೋತ್ಪಾದಕರು ಏಳು ಭದ್ರತಾ ಸಿಬ್ಬಂದಿಗಳನ್ನು ಕೊಂದಿದ್ದರು. ಸತತ 80 ಗಂಟೆಗಳ ಸುದೀರ್ಘ ಕಾರ್ಯಾಚರಣೆಯ ಬಳಿಕ ಅವರನ್ನು ಹೊಡೆದುರುಳಿಸಲಾಗಿತ್ತು. ಭದ್ರತೆಯಲ್ಲಿನ ಭಾರೀ ಲೋಪಗಳ ಬಗ್ಗೆ ತನಿಖೆ ನಡೆದ ನಂತರ ಸಶಸ್ತ್ರ ಪಡೆಗಳು ಭದ್ರತಾ ವ್ಯವಸ್ಥೆಯ ಪುನಃಶ್ಚೇತನ ಅಗತ್ಯವಿರುವ 3000 ಸೂಕ್ಷ್ಮನೆಲೆಗಳನ್ನು ಗುರುತಿಸಿದ್ದವು ಮತ್ತು ಅದಕ್ಕಾಗಿ 2,000 ಕೋ.ರೂ.ಗಳನ್ನು ಒದಗಿಸುವಂತೆ ಕೇಂದ್ರವನ್ನು ಕೋರಿದ್ದವು.

 ಆದರೆ ಸರಕಾರದಿಂದ ಈವರೆಗೆ ಒಂದೇ ಪೈಸೆಯೂ ಮಂಜೂರಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ರಕ್ಷಣಾ ಸಚಿವಾಲಯವು ಈ ಬೇಡಿಕೆಯನ್ನು ನಿರಾಕರಿಸಿಲ್ಲ, ಆದರೆ ಅದು ಯಾವ ಪಡೆಗೆ ಎಷ್ಟು ಹಣಕಾಸು ಅಗತ್ಯವಿದೆ ಎಂಬ ವಿವರಗಳಿಗೆ ಕಾಯುತ್ತಿದೆ. ಇಂತಹ ವಿವರಗಳು ಲಭ್ಯವಾದಾಗ ಈ ವರ್ಷದ ರಕ್ಷಣಾ ಬಜೆಟ್‌ನಿಂದ ಇದಕ್ಕಾಗಿ ಹಣಕಾಸನ್ನು ಒದಗಿಸಲಾಗುತ್ತದೆ ಎಂದೂ ಮೂಲಗಳು ತಿಳಿಸಿವೆ.

ಪಠಾಣಕೋಟ್ ಭಯೋತ್ಪಾದಕ ದಾಳಿಯ ಬಳಿಕ ಮೂರೂ ಸಶಸ್ತ್ರ ಪಡೆಗಳ ಪ್ರತಿನಿಧಿಗಳನ್ನೊಳಗೊಂಡಿದ್ದ, ಲೆಜಫಿಲಿಪ್ ಕಾಂಪೋಸ್ ನೇತೃತ್ವದ ಸಮಿತಿಯು ಭದ್ರತಾ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಅತ್ಯಂತ ಸೂಕ್ಷ್ಮ ಮಿಲಿಟರಿ ಸ್ಥಾವರಗಳನ್ನು ತನ್ನ ವರದಿಯಲ್ಲಿ ಗುರುತಿಸಿತ್ತು. ಇದಕ್ಕಾಗಿ 2,000 ಕೋ.ರೂ.ಅಗತ್ಯವಿದೆ ಎಂದು ಸಶಸ್ತ್ರ ಪಡೆಗಳು ಅಂದಾಜಿಸಿದ್ದು, ತಕ್ಷಣವೇ 1,000 ಕೋ.ರೂ.ಒದಗಿಸುವಂತೆ ಭೂಸೇನೆಯು ಕೇಳಿಕೊಂಡಿತ್ತು.

ದಾಳಿಯು ನಡೆದು 14 ತಿಂಗಳುಗಳೇ ಕಳೆದು ಹೋಗಿವೆ ಮತ್ತು ಸಶಸ್ತ್ರ ಪಡೆಗಳು ಹಣಕ್ಕಾಗಿ ಇನ್ನೂ ಕಾಯುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News