ಮಾಸ್ತಿಗುಡಿ: ಹೊಡೆದಾಟದ ಮಧ್ಯೆ ಕಳೆದುಹೋಗುವ ಸಂದೇಶ

Update: 2017-05-14 07:12 GMT

ರೇಟಿಂಗ್ - ** 1/3

ಕಾಡು ಮತ್ತು ಹುಲಿ ಸಂರಕ್ಷಣೆ ಕುರಿತ ಸಂದೇಶದೊಂದಿಗೆ ತಯಾರಾಗಿರುವ ಸಿನೆಮಾ ‘ಮಾಸ್ತಿ ಗುಡಿ’. ಶೂಟಿಂಗ್ ಅವಘಡದಲ್ಲಿ ಇಬ್ಬರು ಖಳನಟರು ಪ್ರಾಣ ಕಳೆದುಕೊಂಡಿದ್ದು ಸೇರಿದಂತೆ ಆರಂಭದಿಂದಲೂ ಒಂದಿಲ್ಲೊಂದು ವಿವಾದಕ್ಕೀಡಾಗಿದ್ದ ಚಿತ್ರವಿದು. ಸಾಕಷ್ಟು ನಿರೀಕ್ಷೆಗಳೊಂದಿಗೆ ಬಿಡುಗಡೆಯಾಗಿರುವ ಸಿನೆಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲವಾಗಿದೆಯೇ? ಸಮಾಜಕ್ಕೆ ಒಳಿತಾಗುವ ಸಂದೇಶ ಯಶಸ್ವಿಯಾಗಿ ದಾಟುತ್ತದೆಯೇ? ಎನ್ನುವ ಪ್ರಶ್ನೆಗಳನ್ನು ಹಾಕಿಕೊಂಡರೆ ನಿರಾಸೆ ಮೂಡುತ್ತದೆ.

ಭರ್ಜರಿ ಆ್ಯಕ್ಷನ್ ಸನ್ನಿವೇಶಗಳೊಂದಿಗೆ ದುನಿಯಾ ವಿಜಯ್ ತಮ್ಮ ಪಾತ್ರಕ್ಕೆ ಸೂಕ್ತ ನ್ಯಾಯ ಸಲ್ಲಿಸಿದ್ದು, ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತಾರೆ. ಇದರ ಹೊರತಾಗಿ ಚಿತ್ರಕಥೆ ಮತ್ತು ನಿರೂಪಣೆಯಲ್ಲಿ ಮಾತ್ರ ಯಾವುದೇ ವಿಶೇಷತೆ ಕಾಣಿಸುವುದಿಲ್ಲ. ದಸರಾ ಹಬ್ಬದಲ್ಲಿ ಸಿಗುವ ಪುಟ್ಟ ಮಗುವಿಗೆ ಮಾವುತನೊಬ್ಬ ‘ಮಾಸ್ತಿ’ ಎಂದು ನಾಮಕರಣ ಮಾಡಿ ಸಾಕಿ ಬೆಳೆಸುತ್ತಾನೆ. ಮುಂದೆ ಅರಣ್ಯ ಇಲಾಖೆ ನೌಕರನಾಗಿ ಕಾಡಿನ ಸೇವೆಗೆ ನಿಲ್ಲುವ ಮಾಸ್ತಿ ಅರಣ್ಯ ವಾಸಿಗಳು ಮತ್ತು ಸುತ್ತಮುತ್ತಲಿನ ಹಳ್ಳಿಗರಿಗೆ ಆತ್ಮೀಯನಾಗುತ್ತಾನೆ. ಈ ಮಧ್ಯೆ ಹುಲಿ ಬೇಟೆಯ ಸಂಚಿನಲ್ಲಿ ಭಾಗಿಯಾದ ಅರಣ್ಯಾಧಿಕಾರಿಯ ಕೊಲೆಯಾಗುತ್ತದೆ.

ಇಂತಹ ಬೆಳವಣಿಗೆಗಳ ಹಿಂದೆ ಕಾಡಿನ ದೇವತೆ ಮಾಸ್ತಮ್ಮ, ಪ್ರೇತಾತ್ಮಗಳ ಶಕ್ತಿಯಿದೆ ಎನ್ನುವಂತೆ ತೋರಿಸಿರುವ ನಿರ್ದೇಶಕರು ಇದಕ್ಕೆ ತಾರ್ಕಿಕ ಅಂತ್ಯ ನೀಡುವಲ್ಲಿ ವಿಫಲವಾಗಿದ್ದಾರೆ. ಕಾಡಿನ ದೇವತೆ ದುಷ್ಟಶಕ್ತಿಗಳನ್ನು ಸಂಹರಿಸುತ್ತಾಳೆ ಎನ್ನುವ ಚಿತ್ರಕಥೆಯ ಹೆಣಿಗೆಯೇ ದುರ್ಬಲವಾಗಿದೆ. ಅಲ್ಲಲ್ಲಿ ಕೆಲವು ರೋಚಕ ದೃಶ್ಯಗಳು ಕಾಣಿಸಿದರೂ ಇವೆಲ್ಲವೂ ಕತೆಗೆ ಪೂರಕವಾಗಿರದೆ ಬಿಡಿಬಿಡಿಯಾಗಿ ಕಾಣಿಸುತ್ತವೆ.

ಚಿತ್ರದ ಮೊದಲಾರ್ಧವೇನೋ ಸರಾಗವಾಗಿ ನೋಡಿಸಿಕೊಂಡು ಹೋಗುತ್ತದೆ. ಹುಲಿಬೇಟೆಯ ದೃಶ್ಯಗಳು, ನಾಯಕಿಯರ ಎಂಟ್ರಿ ಸೇರಿದಂತೆ ಒಂದಷ್ಟು ಕುತೂಹಲಕರ ದೃಶ್ಯಗಳಿವೆ. ಪ್ರೇಕ್ಷಕರನ್ನು ಆ ಕ್ಷಣಕ್ಕೆ ಆಕರ್ಷಿಸುವ ಅತೀಂದ್ರಿಯ ಶಕ್ತಿಗಳಿಗೂ ಕತೆಯಲ್ಲಿ ಜಾಗವಿದೆ. ವಿರಾಮದ ವೇಳೆಗೆ ದೊಡ್ಡ ಕಥಾಹಂದರಕ್ಕೆ ಭೂಮಿಕೆ ಸಿದ್ಧಮಾಡಿಕೊಳ್ಳುವ ನಿರ್ದೇಶಕರು ಮಧ್ಯಾಂತರದ ನಂತರ ಹಳಿ ತಪ್ಪುತ್ತಾರೆ.

ಭರ್ಜರಿ ಸ್ಟಂಟ್‌ಗಳಿದ್ದರೂ ಫೈಟ್‌ಗಳು ಅನಗತ್ಯವೆನಿಸುತ್ತವೆ. ಅಪ್ಪ-ಅಮ್ಮನನ್ನು ಕಳೆದುಕೊಂಡ ಪುಟ್ಟ ಹೆಣ್ಣುಮಗುವೊಂದು ನಾಯಕನೊಂದಿಗೆ ಬೆಳೆಯುತ್ತಿರುತ್ತದೆ. ಭಾವುಕ ಸನ್ನಿವೇಶಗಳಿಗಾಗಿ ಸೃಷ್ಟಿಸಿಕೊಂಡಿರುವ ಈ ಟ್ರ್ಯಾಕ್ ಕತೆಯಿಂದ ಪ್ರತ್ಯೇಕವಾಗಿಯೇ ಉಳಿಯುತ್ತದೆ. ಗೊಂಬೆಯಲ್ಲಿ ಡೈನಾಮೈಟ್ ಇಟ್ಟು ಆ ಮಗುವನ್ನು ಕೊಲ್ಲುವ ಸೀನ್‌ನ ಅಗತ್ಯವೇ ಇರಲಿಲ್ಲ. ಖಳನಟರಿಬ್ಬರ ದುರ್ಮರಣದಿಂದಾಗಿ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ಅಪೂರ್ಣಗೊಂಡಂತಿದ್ದು, ಗಡಿಬಿಡಿಯಿಂದ ಸಿನೆಮಾ ಮುಗಿಸಿದಂತಿದೆ.

ನಿರ್ದೇಶಕ ನಾಗಶೇಖರ್ ಹಿಂದೆ ಪ್ರೀತಿಯ ಕತೆಗಳನ್ನು ತೆರೆಗೆ ಅಳವಡಿಸಿದವರು. ನಿಧಾನಗತಿಯ ನಿರೂಪಣೆಯಿದ್ದರೂ ಉತ್ತಮ ಕತೆಯ ಕಾರಣಕ್ಕೆ ಅಲ್ಲಿ ಅವರು ಯಶಸ್ಸು ಕಂಡಿದ್ದರು. ‘ಮಾಸ್ತಿಗುಡಿ’ಗಾಗಿ ವೇಗದ ನಿರೂಪಣಾ ತಂತ್ರಕ್ಕೆ ಮೊರೆಹೋಗಿರುವ ಅವರು ಹಿಡಿತ ಕಳೆದುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಕಾಡು ಮತ್ತು ಕಾಡುವಾಸಿಗಳ ಅನೂಹ್ಯ ಜಗತ್ತನ್ನು ಆಕರ್ಷಕವಾಗಿ ತೋರಿಸುವ ಅವಕಾಶವನ್ನು ಕೈಚೆಲ್ಲಿದ್ದಾರೆ. ಹೀರೋ ದುನಿಯಾ ವಿಜಯ್ ಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದು, ಆ್ಯಕ್ಷನ್ ಸನ್ನಿವೇಶಗಳಲ್ಲಿ ಮಿಂಚಿದ್ದಾರೆ. ನಾಯಕಿಯರಾದ ಅಮೂಲ್ಯ ಮತ್ತು ಕೃತಿ ಕರಬಂಧ ಅವರದ್ದು ಪಾತ್ರೋಚಿತ ಅಭಿನಯ. ಭೀಮವ್ವಳಾಗಿ ಬಿ.ಜಯಶ್ರೀ ಅವರಿಗೆ ವಿಶೇಷ ಪಾತ್ರವಿದೆ. ಕವಿರಾಜ್ ಗೀತಸಾಹಿತ್ಯ, ಸಾಧುಕೋಕಿಲ ಸಂಗೀತದಲ್ಲಿನ ಎರಡು ಹಾಡುಗಳು ಗುನುಗುವಂತಿವೆ.

ನಿರ್ದೇಶನ: ನಾಗಶೇಖರ್, ನಿರ್ಮಾಣ: ಸುಂದರ್ ಪಿ. ಗೌಡ್ರು ಮತ್ತು ಅನಿಲ್ ಕುಮಾರ್, ಸಂಗೀತ: ಸಾಧು ಕೋಕಿಲ, ತಾರಾಗಣ: ದುನಿಯಾ ವಿಜಯ್, ಅಮೂಲ್ಯ, ಕೃತಿ ಕರಬಂಧ, ದೇವರಾಜ್, ಬಿ.ಜಯಶ್ರೀ, ರಂಗಾಯಣ ರಘು, ಶ್ರೀನಿವಾಸಮೂರ್ತಿ, ಅನಿಲ್ ಕುಮಾರ್, ಉದಯ್ ಮತ್ತಿತರರು

* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ

Writer - ಶಶಿಧರ ಚಿತ್ರದುರ್ಗ

contributor

Editor - ಶಶಿಧರ ಚಿತ್ರದುರ್ಗ

contributor

Similar News