ಫ್ಲೈ ಓವರ್ ನಿಂದ ಕೆಳಕ್ಕೆ ಬಿದ್ದ ಕಾರು: ಇಬ್ಬರು ವಿದ್ಯಾರ್ಥಿಗಳು ಮೃತ್ಯು; ಐವರ ಸ್ಥಿತಿ ಗಂಭೀರ
ದಿಲ್ಲಿ, ಮೇ 15: ಹೋಂಡಾ ಸಿಟಿ ಕಾರೊಂದು ಫ್ಲೈ ಓವರ್ ನಿಂದ ಕೆಳಕ್ಕೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟು ಐವರು ಗಾಯಗೊಂಡ ಘಟನೆ ದಿಲ್ಲಿಯ ಪಂಜಾಬಿ ಬಾಘ್ ವ್ಯಾಪ್ತಿಯಲ್ಲಿ ನಡೆದಿದೆ.
ಇಬ್ಬರು ಬಾಲಕಿಯರು ಸೇರಿದಂತೆ ಏಳು ವಿದ್ಯಾರ್ಥಿಗಳು ನರೇಲಾದಲ್ಲಿ ನಡೆಯುತ್ತಿದ್ದ ಪರೀಕ್ಷೆ ಬರೆಯಲು ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅತಿಯಾದ ವೇಗದಿಂದ ಚಲಾಯಿಸುತ್ತಿದ್ದುದರಿಂದ ಕಾರಿನ ನಿಯಂತ್ರಣ ತಪ್ಪಿದ್ದು, ಡಿವೈಡರ್ ಗೆ ಢಿಕ್ಕಿ ಹೊಡೆದು ಫ್ಲೈ ಓವರ್ ನಿಂದ ಕೆಳಕ್ಕೆ ಬಿದ್ದಿದೆ. ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
“ಕಾರು ಚಲಾಯಿಸುತ್ತಿದ್ದ ರಜತ್ ಅಪ್ರಾಪ್ತನೇ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆ ನಡೆದ ಸಂದರ್ಭ ರಸ್ತೆಯಲ್ಲಿ ಸಾಗುತ್ತಿದ್ದ ಓರ್ವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿ, ಕಾರಿನಲ್ಲಿ ಸಿಲುಕಿಕೊಂಡಿದ್ದ ವಿದ್ಯಾರ್ಥಿಗಳನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. “ಸಂಚಿತ್ ಹಾಗೂ ರೀತು ಎಂಬವರು ಮೃತಪಟ್ಟಿದ್ದು, ಐವರ ಸ್ಥಿತಿ ಗಂಭೀರವಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.