ಹರಿಯಾಣ: ಬೀದಿ ಕಾಮಣ್ಣರ ಕೀಟಲೆ ವಿರೋಧಿಸಿ ಅನ್ನ ಸತ್ಯಾಗ್ರಹಕ್ಕಿಳಿದ 80 ವಿದ್ಯಾರ್ಥಿನಿಯರು
ರೇವಡಿ, ಮೇ 15: ಹರಿಯಾಣದ ರೇವಡಿಯ ಗೋಠಡಾ ಡಹೇನಾ ಗ್ರಾಮದಲ್ಲಿ 80 ವಿದ್ಯಾರ್ಥಿನಿಯರು ಶಾಲೆಗೆ ಹೋಗದೆ ಮಾರ್ಚ್ 10ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ತಮ್ಮ ಗ್ರಾಮದಲ್ಲಿ ಪದವಿಪೂರ್ವ ಕಾಲೇಜು ಸ್ಥಾಪಿಸಬೇಕು ಎಂದು ವಿದ್ಯಾರ್ಥಿನಿಯರು ಒತ್ತಾಯಿಸುತ್ತಿದ್ದಾರೆ.ಹಿಂದೂಸ್ಥಾನ್ ಟೈಮ್ಸ್ ವರದಿ ಪ್ರಕಾರ ಗ್ರಾಮದಿಂದ ಮೂರು ಕಿಲೋ ಮೀಟರ್ ದೂರದ ಶಾಲೆಗೆ ಇವರೆಲ್ಲ ಹೋಗಬೇಕಾಗಿದೆ.
ಗ್ರಾಮದ ಸರಪಂಚರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿನಿಯರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಆದ್ದರಿಂದ ತಮ್ಮ ಗ್ರಾಮದ ಶಾಲೆಯನ್ನು ಮೇಲ್ದರ್ಜೆಗೇರಿಸಿ ಹನ್ನೆರಡನೆ ತರಗತಿಗೆ ಮಾಡಬೇಕೆಂದು ಉಪವಾಸ ಕುಳಿತ ವಿದ್ಯಾರ್ಥಿನಿಯರು ಒತ್ತಾಯಿಸಿದ್ದಾರೆ.
ರಸ್ತೆಯಲ್ಲಿ ನಡೆದು ಹೋಗುವಾಗ ಹೆಲ್ಮೆಟ್ ಧರಿಸಿದ ಬೈಕ್ ಸವಾರರು ಹುಡುಗಿಯರನ್ನು ಚುಡಾಯಿಸುತ್ತಾರೆ. ಅವರು ಹೆಲ್ಮೆಟ್ ಹಾಕಿದ್ದರಿಂದ ಯಾರು ಹೀಗೆ ಮಾಡುತ್ತಿದ್ದಾರೆನ್ನುವುದು ಗೊತ್ತಾಗುವುದಿಲ್ಲ. ಆದರೆ , ಜಿಲ್ಲಾ ಎಸ್ಪಿ ಸಂಗೀತಾ ಕಾಲಿಯಾ ಇಂತಹ ಯಾವ ದೂರು ಈವರೆಗೆ ಯಾರೂ ನೀಡಿಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಜಿಲ್ಲಾ ಶಿಕ್ಷಣ ಅಧಿಕಾರಿ ಧರ್ಮವೀರ್ ಬಾಲೊಡಿಯ ವಿದ್ಯಾರ್ಥಿನಿಯರನ್ನು ಅವರ ಸರಪಂಚರು ಮತ್ತು ಪೋಷಕರು ಉತ್ತೇಜಿಸುತ್ತಿದ್ದಾರೆ ಎಂದು ಹೇಳಿದ್ದಾರೆ.