×
Ad

ಪಠಾಣ್ ಕೋಟ್ ಹುತಾತ್ಮನ ಸಹೋದರನಿಗೆ ನಡುಬೀದಿಯಲ್ಲೇ ಥಳಿಸಿದ ತಂಡ

Update: 2017-05-15 18:29 IST

ಗುರುದಾಸ್ ಪುರ, ಮೇ 15: ಪಠಾಣ್ ಕೋಟ್ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧ ಕುಲ್ವಂತ್ ಸಿಂಗ್ ಅವರ ಸಹೋದರ ಹಾಗೂ ಅವರ ಪತ್ನಿಗೆ ಟ್ರಾವೆಲ್ ಏಜೆಂಟ್ ಹಾಗೂ ಆತನ ಸಹಚರರು ಬೀದಿಬದಿಯಲ್ಲೇ ಹಲ್ಲೆ ನಡೆಸಿದ ಘಟನೆ ನಡೆದಿದೆ.

ಹಣಕಾಸಿನ ವಿವಾದಕ್ಕೆ ಸಂಬಂಧಿಸಿ ಕುಲ್ವಂತ್ ಸಿಂಗ್ ರ ಸಹೋದರ ಹರ್ದೀಪ್ ಸಿಂಗ್ ಹಾಗೂ ಅವರ ಪತ್ನಿ ಕುಲ್ವಿಂದರ್ ಕೌರ್ ರ ಮೇಲೆ ದಾಳಿ ನಡೆಸಿದ ತಂಡ ಹಿಗ್ಗಾಮುಗ್ಗ ಥಳಿಸಿದ್ದು, ಇದರ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ವಿದೇಶಕ್ಕೆ ತೆರಳುವ ಸಲುವಾಗಿ ಹರ್ದೀಪ್ ಟ್ರಾವೆಲ್ ಏಜೆಂಟ್ ಗೆ 9 ಲಕ್ಷ ನೀಡಿದ್ದರು. ಆದರೆ ಏಜೆಂಟ್ ಗುರ್ನಾಮ್ ಹಣ ಪಡೆದ ಬಳಿಕ ನೀಡಿದ್ದ ಭರವಸೆಯನ್ನು ಈಡೇರಿಸಿರಲಿಲ್ಲ. ಇದರಿಂದಾಗಿ ಹರ್ದೀಪ್ ಹಣ ವಾಪಸ್ ಕೇಳಿದ್ದು, ಏಜೆಂಟ್ 5 ಲಕ್ಷಗಳನ್ನು ನೀಡಿ,ಶೀಘ್ರ 4 ಲಕ್ಷ ಮರಳಿಸುವುದಾಗಿ ಭರವಸೆ ನೀಡಿದ್ದ. ಆದರೆ ಇದನ್ನು ಪಾಲಿಸದಿದ್ದುದರಿಂದ ಹರ್ದೀಪ್ ಹಾಗೂ ಅವರ ಪತ್ನಿ ಪೊಲೀಸ್ ದೂರು ನೀಡಲು ನಿರ್ಧರಿಸಿ ಠಾಣೆಗೆ ತೆರಳಿದ್ದು, ರಿಚಾರ್ಜ್ ಮಾಡಿಸಲೆಂದು ಅಂಗಡಿಯೊಂದಕ್ಕೆ ಹೋಗಿದ್ದರು. ಈ ಸಂದರ್ಭ ಗುರ್ನಾಮ್ ಮತ್ತು ಆತನ ಸಹಚರರು ಅಲ್ಲಿಗೆ ಆಗಮಿಸಿ ದಂಪತಿಯನ್ನು ಹೊರಗೆಳೆದು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಗುರ್ನಾಮ್ ಸೇರಿದಂತೆ 11 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News