×
Ad

ತನ್ನ ಜತೆ ನರ್ತಿಸಲು ನಿರಾಕರಿಸಿದ ಪತ್ನಿಯನ್ನು ಮಹಡಿ ಮೇಲಿಂದ ದೂಡಿದ ಪತಿರಾಯ

Update: 2017-05-16 17:08 IST

ಕಾನ್ಪುರ್,ಮೇ 16 : ಪತ್ನಿ ತನ್ನ ಜತೆ ನೃತ್ಯ ಮಾಡಲು ಒಪ್ಪಿಲ್ಲ ಎಂಬ ಕಾರಣಕ್ಕೆ ಕುಡಿತದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಆಕೆಯನ್ನು ಮನೆ ಮಹಡಿ ಮೇಲಿಂದ ಕೆಳಕ್ಕೆ ದೂಡಿದ ಘಟನೆ ಬಂಡ ಜಿಲ್ಲೆಯ ಚಿಲ್ಲಘಾಟ್ ಪ್ರದೇಶದಲ್ಲಿರುವ ದಿಘ್ವತ್ ಗ್ರಾಮದಿಂದ ವರದಿಯಾಗಿದೆ. ಮನೆಯಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ.

ಗಾಯಗೊಂಡ ಮಹಿಳೆಯನ್ನು ವಿಶಾಖ ತಿವಾರಿ (28) ಎಂದು ಗುರುತಿಸಲಾಗಿದೆ. ಆಕೆ ಖಪ್ತಿಹ ಗ್ರಾಮದವಳಾಗಿದ್ದು ಕೆಳಕ್ಕೆ ಬಿದ್ದ ರಭಸಕ್ಕೆ ಆಕೆಯ ಎರಡೂ ಕಾಲುಗಳ ಮೂಳೆ ಮುರಿದಿವೆ. ಆಕೆಯ ಕೈಗಳು ಹಾಗೂ ಹೊಟ್ಟೆಯ ಭಾಗದಲ್ಲೂ ಗಾಯಗಳಾಗಿವೆ.

ವಿಶಾಖಾಳ ಸೋದರ ಸಂಬಂಧಿಯ ಮದುವೆ ನಡೆಯುತ್ತಿದ್ದ ವೇಳೆ ಕಲೆವಾ ಸಂಪ್ರದಾಯದಂತೆ ಆಕೆಯ ಪತಿ ಆಕೆಯನ್ನು ತನ್ನೊಂದಿಗೆ ಹಾಗೂ ಅಲ್ಲಿದ್ದ ಇತರ ಅತಿಥಿಗಳೊಂದಿಗೆ ನರ್ತಿಸಲು ಒತ್ತಾಯಿಸಿದರೂ ಆಕೆ ನಿರಾಕರಿಸಿದಾಗ ಸಿಟ್ಟಿನಿಂದ ಆಕೆಯನ್ನು ಮೇಲಿನಿಂದ ಕೆಳಕ್ಕೆ ದೂಡಿದ್ದಾನೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆಯ ಪತಿಯ ವಿರುದ್ಧ ಪ್ರಕರಣ ದಾಖಲಾಗಿದೆಯಾದರೂ ಆತನನ್ನು ಇನ್ನೂ ಬಂಧಿಸಲಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News