ಜೆಎನ್‌ಯು ವಿದ್ಯಾರ್ಥಿ ನಾಪತ್ತೆ ಪ್ರಕರಣ : ತನಿಖೆ ಸಿಬಿಐಗೆ ವಹಿಸಿದ ಹೈಕೋರ್ಟ್

Update: 2017-05-16 12:24 GMT

 ಹೊಸದಿಲ್ಲಿ, ಮೇ 16: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆ ಪ್ರಕರಣದ ತನಿಖೆಯನ್ನು ದಿಲ್ಲಿ ಹೈಕೋರ್ಟ್ ಸಿಬಿಐಗೆ ವಹಿಸಿದೆ.

ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ನಜೀಬ್ ಅಹ್ಮದ್ ತಾಯಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ಪೀಠವೊಂದು ಈ ಆದೇಶ ನೀಡಿತು. ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ತಮ್ಮ ಅಭ್ಯಂತರ ಇಲ್ಲ ಎಂದು ದಿಲ್ಲಿ ಪೊಲೀಸರು ತಿಳಿಸಿದ ಮೇರೆಗೆ ನ್ಯಾಯಾಧೀಶರಾದ ಜಿ.ಎಸ್.ಸಿಸ್ತಾನಿ ಮತ್ತು ರೇಖಾ ಪಳ್ಳಿ ಅವರಿದ್ದ ನ್ಯಾಯಪೀಠ ಆದೇಶ ನೀಡಿದ್ದು, ಸಿಬಿಐ ತನಿಖೆಯ ಮೇಲ್ವಿಚಾರಣೆಯನ್ನು ಓರ್ವ ಅಧಿಕಾರಿ ವಹಿಸಬೇಕು ಮತ್ತು ಡಿಐಜಿ ಶ್ರೇಣಿಗಿಂತ ಕೆಳಮಟ್ಟದ ಅಧಿಕಾರಿ ಈ ಕರ್ತವ್ಯ ನಿಭಾಯಿಸುವಂತಿಲ್ಲ ಎಂದು ಸ್ಪಷ್ಟಪಡಿಸಿತು.

ಇದುವರೆಗೆ ನ್ಯಾಯಾಲಯ ನೀಡಿದ್ದ ಎಲ್ಲಾ ಸಲಹೆ ಮತ್ತು ನಿರ್ದೇಶನಗಳನ್ನು ದಿಲ್ಲಿ ಪೊಲೀಸರು ಅನುಷ್ಠಾನಗೊಳಿಸಿರುವುದನ್ನು ಗಮನಿಸಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ. ಪ್ರಕರಣದ ವಿಚಾರಣೆ ಜುಲೈ 17ರಂದು ಮುಂದುವರಿಯಲಿದೆ.

2016ರ ಅಕ್ಟೋಬರ್ 14ರಂದು ವಿವಿ ಆವರಣದಲ್ಲಿ ಎಬಿವಿಪಿ ಬೆಂಬಲಿತ ವಿದ್ಯಾರ್ಥಿಗಳೊಂದಿಗೆ ಮಾತಿನ ಚಕಮಕಿ ನಡೆದ ಬಳಿಕ ನಜೀಬ್ ನಾಪತ್ತೆಯಾಗಿದ್ದು ಪ್ರಕರಣದ ತನಿಖೆಯನ್ನು ದಿಲ್ಲಿ ಪೊಲೀಸರು ಕೈಗೆತ್ತಿಕೊಂಡಿದ್ದರು. ಪೊಲೀಸರು ಸೂಕ್ತ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂದು ಹೈಕೋರ್ಟ್ ಮೇ 12ರಂದು ಪೊಲೀಸರನ್ನು ತರಾಟೆಗೆತ್ತಿಕೊಂಡಿತ್ತು.

ಕೆಲವರನ್ನು ದೇಶದ ವಿವಿಧೆಡೆ ಶೋಧ ಕಾರ್ಯಾಚರಣೆಗೆ ಕಳುಹಿಸುವುದು, ವಿಶೇಷ ತನಿಖಾ ತಂಡ(ಎಸ್‌ಐಟಿ) ಸ್ಥಾಪಿಸುವುದು ಮುಂತಾದ ಕಾರ್ಯದಲ್ಲಿ ತೊಡಗುವ ಮೂಲಕ ಪೊಲೀಸರು ‘ಪೊದೆಯಲ್ಲಿ ಹುಡುಕುವ ಬದಲು ಪೊದೆಯ ಸುತ್ತ ಬಡಿಯುತ್ತಿದ್ದಾರೆ ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಹೈಕೋರ್ಟ್, ನಜೀಬ್ ನಾಪತ್ತೆ ಪ್ರಕರಣದಲ್ಲಿ ಶಂಕಿತ ಒಂಬತ್ತು ವಿದ್ಯಾರ್ಥಿಗಳನ್ನು ವಿಚಾರಣೆಗೆ ಗುರಿಪಡಿಸದಿರುವ ಅಥವಾ ಅವರನ್ನು ವಶಕ್ಕೆ ಪಡೆದುಕೊಳ್ಳದ ಬಗ್ಗೆ ಪ್ರಶ್ನಿಸಿತ್ತು.

ಪೊಲೀಸರು ಕೆಲವೊಂದು ವಿವರಗಳನ್ನು ‘ರಹಸ್ಯ’ ಎಂಬ ಕಾರಣದಿಂದ ತಮ್ಮ ವಕೀಲರಿಂದಲೇ ಮುಚ್ಚಿಟ್ಟಿರುವ ಬಗ್ಗೆಯೂ ನ್ಯಾಯಾಲಯ ಅಸಮಾಧಾನ ಸೂಚಿಸಿತ್ತು. ಬೇರೊಂದು ಸಮುದಾಯಕ್ಕೆ ಅಥವಾ ರಾಜಕೀಯ ಗುಂಪಿಗೆ ಸೇರಿದವರೆಂಬ ಕಾರಣಕ್ಕೆ ಇಂದು ನಜೀಬ್‌ಗೆ ಆದ ಗತಿ ನಾಳೆ ಯಾರಿಗೂ ಆದೀತು ಎಂದೂ ನ್ಯಾಯಾಲಯ ತಿಳಿಸಿತ್ತು.  ಇದಕ್ಕೆ ಉತ್ತರಿಸಿದ ಎಸ್‌ಐಟಿ ಮುಖ್ಯಸ್ಥ ರಾಮ್‌ಗೋಪಾಲ್ ನಾಕ್, ತನಿಖೆಯ ವಿವರ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News