ಆರೆಸ್ಸೆಸ್ಸಿಗನ ಹತ್ಯೆಗೆ ಸಿಪಿಐಎಂ ಕಾರ್ಯಕರ್ತರ ಸಂಭ್ರಮಾಚರಣೆ
ತಿರುವನಂತಪುರಂ, ಮೇ 16: ಆರೆಸ್ಸೆಸ್ ಕಾರ್ಯಕರ್ತನನ್ನು ಕೊಲೆಗೈದ ಬಳಿಕ ಸಿಪಿಐ(ಎಂ) ಕಾರ್ಯಕರ್ತರು ಸಂಭ್ರಮ ಆಚರಿಸಿದ ವಿಡಿಯೋ ದೃಶ್ಯಾವಳಿಯನ್ನು ತಾನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಇದು ಅಸಲಿ ದೃಶ್ಯಾವಳಿ ಎಂದು ಕೇರಳ ಬಿಜೆಪಿ ಅಧ್ಯಕ್ಷ ಕುಮ್ಮನಂ ರಾಜಶೇಖರನ್ ಹೇಳಿದ್ದಾರೆ.
ರಾಜ್ಯ ಸರಕಾರ ಈ ಬಗ್ಗೆ ತನಿಖೆ ನಡೆಸಿ ಪ್ರಕರಣ ದಾಖಲಿಸಲಿ. ನಾನು ಜೈಲಿಗೆ ಹೋಗಲೂ ಸಿದ್ಧ ಎಂದು ಸುದ್ದಿಗಾರರಿಗೆ ತಿಳಿಸಿದರು. ಆರೆಸ್ಸೆಸ್ ಕಾರ್ಯಕರ್ತ ಬಿಜು ಹತ್ಯೆಯಾದ ಬಳಿಕ ರಾಜ್ಯದ ಕನಿಷ್ಟ 14 ಸ್ಥಳಗಳಲ್ಲಿ ಸಿಪಿಐ(ಎಂ) ಕಾರ್ಯಕರ್ತರು ಸಂಭ್ರಮ ಆಚರಿಸಿದ್ದಾರೆ ಎಂದವರು ದೂರಿದರು. ‘ಕೇರಳದಲ್ಲಿ ಜಂಗಲ್ ರಾಜ್’ ಎಂಬ ತಲೆಬರಹದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ರಾಜಶೇಖರನ್, ಅತ್ಯಂತ ಕ್ರೂರ, ಪಾಶವೀ ಕೃತ್ಯವಿದು. ಆರೆಸ್ಸೆಸ್ ಕಾರ್ಯಕರ್ತ ಬಿಜುವಿನ ತಲೆ ಕತ್ತರಿಸಿದ ಕಣ್ಣೂರಿನ ಕಮ್ಯುನಿಸ್ಟ್ ಕಾರ್ಯಕರ್ತರು ಆತನ ಸಾವಿಗೆ ಸಂಭ್ರಮಾಚರಿಸುತ್ತಿದ್ದಾರೆ- ಎಂಬ ಅಡಿ ಬರಹ ನೀಡಿದ್ದರು. ಈ ವಿಡಿಯೋ ದೃಶ್ಯಾವಳಿ ಬಗ್ಗೆ ತನಿಖೆ ನಡೆಸುವಂತೆ ಡಿಜಿಪಿ ಸೇನ್‌ಕುಮಾರ್ ಕಣ್ಣೂರು ಎಸ್‌ಪಿಗೆ ಆದೇಶಿಸಿದ್ದಾರೆ.
ವಿಡಿಯೋವನ್ನು ಪ್ರಸಾರ ಮಾಡುವ ಮೂಲಕ ಬಿಜೆಪಿ ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂದು ಕಣ್ಣೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ. ಈ ಹಿಂದಿನ ಯುಡಿಎಫ್ ಆಡಳಿತದ ಅವಧಿಯಲ್ಲಿ ಆರ್‌ಎಸ್‌ಎಸ್ ಕಾರ್ಯಕರ್ತರು 27 ಸಿಪಿಐ(ಎಂ) ಕಾರ್ಯಕರ್ತರನ್ನು ಕೊಲೆ ಮಾಡಿದ್ದರು. ಆದರೆ ಈ ಸಂದರ್ಭ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ(ಎಎಫ್‌ಎಸ್‌ಪಿಎ)ಯನ್ನು ರಾಜ್ಯದಲ್ಲಿ ಜಾರಿಗೊಳಿಸಬೇಕೆಂದು ಬಿಜೆಪಿ ಆಗ್ರಹಿಸಿಲ್ಲ. ಹಲವು ರಾಜ್ಯಗಳಲ್ಲಿ ಈ ಕಾಯ್ದೆಯನ್ನು ಆಂಶಿಕವಾಗಿ ಅಥವಾ ಪೂರ್ಣವಾಗಿ ಜಾರಿಗೊಳಿಸಲಾಗಿದೆ. ಆದರೆ ಯಾವುದೇ ಕಡೆ ಶಾಂತಿ ನೆಲೆಸಲು ಇದು ಪೂರಕವಾಗಿರಲಿಲ್ಲ. ಗುಜರಾತ್‌ನಲ್ಲಿ 2002ರಲ್ಲಿ 2000ಕ್ಕೂ ಹೆಚ್ಚಿನ ಜನರನ್ನು ಹತ್ಯೆ ಮಾಡಲಾಗಿತ್ತು. ಆಗ ಈ ಕಾಯ್ದೆ ಜಾರಿಗೊಳಿಸಿರಲಿಲ್ಲ ಎಂದವರು ಹೇಳಿದರು.
ಯಾವುದೋ ವಿನೋದಕೂಟವೊಂದರ ದೃಶ್ಯಾವಳಿ ಇದಾಗಿದೆ ಎಂದು ಸಿಪಿಐ(ಎಂ) ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಪಿ.ಜಯರಾಜನ್ ತಿಳಿಸಿದ್ದಾರೆ.
ಈ ಮಧ್ಯೆ, ಇದೊಂದು ನಕಲಿ ವಿಡಿಯೋ ಆಗಿದ್ದು ಸಮಾಜದಲ್ಲಿ ಶಾಂತಿ ಕದಡುವ ಹುನ್ನಾರ ಇದರ ಹಿಂದೆ ಇದೆ. ಆದ್ದರಿಂದ ರಾಜಶೇಖರನ್ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ‘ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ’ದ ಕಣ್ಣೂರು ಜಿಲ್ಲಾಧ್ಯಕ್ಷ ಮುಹಮ್ಮದ್ ಸಿರಾಜ್ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ.