ರಾಜಕೀಯದಲ್ಲಿ ರಜನಿ ಮೇನಿಯಾ ಶುರು!

Update: 2017-05-16 17:24 GMT

ಚೆನ್ನೈ, ಮೇ 16: ಸೂಪರ್ ಸ್ಟಾರ್ ರಜನಿಕಾಂತ್ ಕೊನೆಗೂ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಂಡಿದ್ದಾರೆ. ಚೆನ್ನೈ ನಲ್ಲಿ ತಮ್ಮ ಆಪ್ತರೊಂದಿಗೆ ಚಿಂತನಮಂಥನ ನಡೆಸಿದ ಸ್ಟೈಲ್ ಕಿಂಗ್, ಪ್ರಸ್ತುತ  ಪರಿಸ್ಥಿತಿಯಲ್ಲಿ  ತಮ್ಮದೇ ಆದ  ರಾಜಕೀಯ  ಪಕ್ಷವನ್ನು  ಹುಟ್ಟುಹಾಕುವ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

ರಜನಿಕಾಂತ್ ರಾಜಕೀಯ ಪ್ರವೇಶಿಸುವ ಸಾಧ್ಯತೆಗಳ ಬಗ್ಗೆ ಹಲವು ದಿನಗಳಿಂದ ಮಾತುಗಳು ಕೇಳಿಬರುತ್ತಿದ್ದವು. ಅವರು ಪ್ರಧಾನಿಯನ್ನು ಭೇಟಿಯಾಗುತ್ತಿದ್ದ ಬೆಳವಣಿಗೆಗಳು ಬಿಜೆಪಿ ಸೇರುವ ಸಾಧ್ಯತೆಗಳ ಬಗ್ಗೆ ಸುಳಿವು ನೀಡುವಂತಿತ್ತು. ಆದರೆ ಇದೀಗ ಅವರು ಬಿಜೆಪಿ ಬಗ್ಗೆಯೂ ಬೇಸರ ಹೊಂದಿದ್ದಾರೆ ಎನ್ನಲಾಗುತ್ತಿದ್ದು, ಎಲ್ಲ ಪಕ್ಷಗಳಿಗೆ ಪರ್ಯಾಯವಾಗಿ ತಮ್ಮದೇ ಆದ ಹೊಸ ಪಕ್ಷವನ್ನು ಹುಟ್ಟುಹಾಕಲು ತೀರ್ಮಾನಿಸಿದ್ದಾರೆ ಎನ್ನುವ ಮಾಹಿತಿಗಳಿವೆ.

ಸೋಮವಾರವಷ್ಟೇ ರಜನಿಕಾಂತ್ ಅಭಿಮಾನಿಗಳನ್ನು  ಭೇಟಿ ಮಾಡಿದ ಸಂದರ್ಭದಲ್ಲಿ, ತಾವು ರಾಜಕೀಯ ಸೇರುವ ಸಾಧ್ಯತೆಗಳನ್ನು ತಳ್ಳಿಹಾಕಿದ್ದರು. "ನನಗೆ ಯಾವುದೇ ರಾಜಕೀಯ  ಮಹತ್ವಾಕಾಂಕ್ಷೆಗಳಿಲ್ಲ. ನಾನೊಬ್ಬ ಪ್ರಭಾವಿ ರಾಜಕಾರಣಿಯೂ ಅಲ್ಲ. ಸಮಾಜಸೇವಾ ಕಾರ್ಯಕರ್ತನೂ ಅಲ್ಲ. ಈ ಹಿಂದೆಯೂ ಇದನ್ನು ಸಾಕಷ್ಟು ಬಾರಿ ಹೇಳಿದ್ದೇನೆ. ಆದರೂ ನನ್ನನ್ನು  ಹಲವು ಬಾರಿ  ರಾಜಕೀಯ ಚರ್ಚೆಗೆ  ಎಳೆದು ತರಲಾಗಿದೆ" ಎಂದಿದ್ದರು. ಆದರೆ ಮಂಗಳವಾರ ರಜನಿಕಾಂತ್ ಅವರು ಸದ್ಯದಲ್ಲೇ ರಾಜಕೀಯ ಪ್ರವೇಶಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜಕೀಯ ಕಲುಷಿತಗೊಂಡಿದೆ. ಭ್ರಷ್ಟಾಚಾರ ಎಲ್ಲೆ ಮೀರಿದೆ. ಹಾಗಾಗಿ ತನ್ನದೇ ಆದ ರಾಜಕೀಯ ಪಕ್ಷವನ್ನು ಹುಟ್ಟುಹಾಕುತ್ತಿದ್ದೇನೆ ಎಂದು ತಮ್ಮ ಮಿತ್ರರ ಜೊತೆ ರಜನಿ ಹೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಡಿಸೆಂಬರ್ 12ರಂದು  ತಮ್ಮ ಹುಟ್ಟುಹಬ್ಬದಂದು ಹೊಸ ಪಕ್ಷವನ್ನು ಘೋಷಿಸಲಿದ್ದಾರೆ ಎನ್ನುವ ಮಾಹಿತಿಗಳೂ ಇವೆ. ಈ ಎಲ್ಲಾ ವಿಷಯಗಳಿಗೂ ಸ್ವತಃ ರಜನಿಕಾಂತ್ ಸ್ಪಷ್ಟನೆ ನೀಡಿದ ಬಳಿಕವೇ ತೆರೆ ಬೀಳಲಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News