40 ವರ್ಷಗಳಿಂದ ತಲೆಮರೆಸಿಕೊಂಡು, ಕೊನೆಗೂ ಬಂಧಿತನಾದವನಿಗೆ ಕೋರ್ಟ್ ವಿಧಿಸಿದ ದಂಡವೆಷ್ಟು ಗೊತ್ತೇ?
ರಾಜಸ್ತಾನ, ಮೇ 17: ಸುಮಾರು 40 ವರ್ಷಗಳ ಹಿಂದೆ ಅಂದರೆ 1976ರಲ್ಲಿ ಕಲಬೆರಕೆ ಹಾಲು ಉಪಯೋಗಿಸಿ ಸಿಹಿತಿಂಡಿಗಳನ್ನು ತಯಾರಿಸಿ ಮಾರಿದ್ದಕ್ಕಾಗಿ ಮೋತಿಲಾಲ್ ಎಂಬಾತನ ವಿರುದ್ಧ ರಾಜಸ್ತಾನದ ನಾಗೌರ್ ಕೋರ್ಟ್ ವಾರಂಟ್ ಹೊರಡಿಸಿತ್ತು. ನ್ಯಾಯಾಲಯದಿಂದ ವಾರಂಟ್ ಸಿಕ್ಕಿದ್ದೇ ತಡ ಮೋತಿಲಾಲ್ ಊರಿಂದ ಕಾಲ್ಕಿತ್ತಿದ್ದ. ಅದಾಗಿ ಸುಮಾರು 40 ವರ್ಷಗಳ ನಂತರ ಪೊಲೀಸರು ಆತನನ್ನು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಮೋತಿಲಾಲ್ ಗೆ ಇದೀಗ 65 ವರ್ಷವಾಗಿದ್ದು, ನ್ಯಾಯಾಲಯ ಆತನಿಗೆ 100 ರೂ. ದಂಡ ವಿಧಿಸಿ ಬಿಡುಗಡೆಗೊಳಿಸಿದೆ.
ಕಲಬೆರಕೆ ಹಾಲಿನಿಂದ ಆಹಾರೋತ್ಪನ್ನಗಳನ್ನು ತಯಾರಿಸುವವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಆದೇಶವನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷವಷ್ಟೇ ಹೊರಡಿಸಿತ್ತು. ಆದರೆ ಮೋತಿಲಾಲ್ ಅವರ ವಯಸ್ಸನ್ನು ಪರಿಗಣಿಸಿ 100 ದಂಡ ಸ್ವೀಕರಿಸಿ ಅವರನ್ನು ಬಿಡುಗಡೆಗೊಳಿಸಲಾಗಿದೆ.
“ವಾರಂಟ್ ನೀಡಿದ ಬಳಿಕ ಅವರು ಆಂಧ್ರಪ್ರದೇಶಕ್ಕೆ ತೆರಳಿ ಅಲ್ಲಿ ಚಹಾ ಅಂಗಡಿಯೊಂದನ್ನು ತೆರೆದಿದ್ದರು. ಇತ್ತೀಚೆಗಷ್ಟೇ ಪತ್ನಿ ಮೃತಪಟ್ಟ ಹಿನ್ನೆಲೆಯಲ್ಲಿ ತಮ್ಮ ಸ್ವಗ್ರಾಮಕ್ಕೆ ಮರಳಿದ್ದರು” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.