ಅಲಹಾಬಾದ್ ನಲ್ಲೊಂದು “ಅವಿವಾಹಿತ ಯುವಕರ ಗ್ರಾಮ”!
ಅಲಹಾಬಾದ್, ಮೇ 17: ಇಲ್ಲಿನ ಬಾರಾ ತೆಹ್ಸಿಲ್ ನ ಶ್ರೀ ತಾರಾ ಮಜ್ರಾ ಎನ್ನುವ ಗ್ರಾಮ “ಅವಿವಾಹಿತರ ಗ್ರಾಮ” ಎಂದೇ ಕುಖ್ಯಾತಿ ಗಳಿಸಿದೆ. ಈ ಗ್ರಾಮದ ಯುವಕರನ್ನು ಮದುವೆಯಾಗಲು ಯಾವ ಯುವತಿಯೂ ಮುಂದಾಗುವುದಿಲ್ಲ. ಕೇವಲ ಈ ಗ್ರಾಮ ಮಾತ್ರವಲ್ಲದೆ ಸಮೀಪದ ಪ್ರತಾಪಗಢ, ಕೌಶಾಂಭಿ ಹಾಗೂ ಚಿತ್ರಕೂಟದ ಯುವತಿಯರೂ ಮಜ್ರಾ ಗ್ರಾಮದ ಯುವಕರನ್ನು ಮದುವೆಯಾಗುವುದಕ್ಕೆ ಒಪ್ಪುವುದಿಲ್ಲ. ಇದಕ್ಕೆ ಕಾರಣ ಯುವಕರ ಸಮಸ್ಯೆಯಲ್ಲ. ಬದಲಾಗಿ, ಈ ಗ್ರಾಮದಲ್ಲಿ ವಿದ್ಯುತ್, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ.
ಬಾರಾ ತೆಹ್ಸಿಲ್ ನಿಂದ 5 ಕಿ.ಮೀ. ದೂರದಲ್ಲಿರುವ ತಾರಾ ಮಜ್ರಾ ಗ್ರಾಮದಲ್ಲಿ ಸುಮಾರು 1,000 ಮಂದಿ ವಾಸಿಸುತ್ತಿದ್ದಾರೆ. ಆದರೆ ನೀರು, ವಿದ್ಯುತ್ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳಿಂದ ಈ ಗ್ರಾಮ ವಂಚಿತವಾಗಿದೆ. ದೇಶ ಸ್ವಾತಂತ್ರ್ಯಗೊಂಡ ನಂತರದಿಂದಲೂ ಈ ಗ್ರಾಮಸ್ಥರು ಮೂಲಭೂತ ಸೌಕರ್ಯಗಳ ತಮ್ಮ ಗ್ರಾಮಕ್ಕೆ ತಲುಪಲಿದೆ ಎನ್ನುವ ನಿರೀಕ್ಷೆಯಲ್ಲೇ ಇದ್ದಾರೆ.
ಗ್ರಾಮಕ್ಕೆ ಒಂದೇ ಕೈಪಂಪ್ ಇದ್ದು, ಅದನ್ನೂ ಗ್ರಾಮಸ್ಥರೇ ಹಣ ಹಾಕಿ 2002ರಲ್ಲಿ ನಿರ್ಮಿಸಿದ್ದರು. ಗ್ರಾಮದಲ್ಲೊಂದು ಬಾವಿಯಿದ್ದು, ಅದರ ನೀರೂ ಕುಡಿಯಲು ಯೋಗ್ಯವಲ್ಲದ ಕಾರಣ, ಈ ಕೈಪಂಪ್ ಬಿಟ್ಟರೆ ಗ್ರಾಮಸ್ಥರಿಗೆ ಬೇರೆ ಕುಡಿಯುವ ನೀರಿನ ಮೂಲವಿಲ್ಲ.
ಮೂಲಭೂತ ಸೌಕರ್ಯಗಳಿಲ್ಲದ ಈ ಗ್ರಾಮಕ್ಕೆ ಮದುವೆಯಾಗಿ ಬರಲು ಯಾವ ಯುವತಿಯರೂ ಒಪ್ಪದ ಕಾರಣ ಯುವಕರಿಗೆ ವಧು ಅನ್ವೇಷಣೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ವರದಕ್ಷಿಣೆ ರೂಪದಲ್ಲಿ ಕೆಲ ವಿವಾಹಿತರಿಗೆ ನೀಡಲಾದ ಟಿವಿ, ಫ್ರಿಜ್, ಫ್ಯಾನ್ ಹಾಗೂ ಕೂಲರ್ ಗಳು ಧೂಳು ತಿನ್ನುತ್ತಾ ಮೂಲೆಯಲ್ಲಿ ಬಿದ್ದಿದೆ. ಅನೇಕ ಮಂದಿ ಈ ಗ್ರಾಮವನ್ನು ಇದೀಗಾಗಲೇ ತೊರೆದಿದ್ದು, ಸದ್ಯ ಇಲ್ಲಿರುವವರೂ ಕೂಡ ತೊರೆಯುವ ಆಲೋಚನೆಯಲ್ಲಿದ್ದಾರೆ.