×
Ad

ಜೈಲಿನಲ್ಲಿದ್ದೇ 12ನೇ ತರಗತಿಯ ಪರೀಕ್ಷೆಯಲ್ಲಿ ಫಸ್ಟ್‌ಕ್ಲಾಸ್ ಪಡೆದ ಹರ್ಯಾಣದ ಮಾಜಿ ಸಿಎಂ

Update: 2017-05-17 18:59 IST

ಹೊಸದಿಲ್ಲಿ,ಮೇ 17: ಭ್ರಷ್ಟಾಚಾರದ ಆರೋಪದಲ್ಲಿ ಪುತ್ರ ಅಜಯ್ ಚೌಟಾಲಾ ಜೊತೆ ದಿಲ್ಲಿಯ ತಿಹಾರ್ ಜೈಲಿನಲ್ಲಿ ಹತ್ತು ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿರುವ ಹರ್ಯಾಣದ ಮಾಜಿ ಮುಖ್ಯಮಂತ್ರಿ ಹಾಗೂ ಐಎನ್‌ಡಿಎಲ್ ಮುಖ್ಯಸ್ಥ, 82ರ ವಯೋವೃದ್ಧ ಓಂ ಪ್ರಕಾಶ ಚೌಟಾಲಾ ಅವರು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ನಡೆಸಿದ್ದ 12 ನೇ ತರಗತಿಯ ಪರೀಕ್ಷೆಯಲ್ಲಿ ಮೊದಲನೇ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ನನ್ನ ತಂದೆ ಶಾಲೆಯಲ್ಲಿ ಓದುತ್ತಿದ್ದಾಗ ನನ್ನ ಅಜ್ಜ ಹಾಗೂ ಮಾಜಿ ಉಪಪ್ರಧಾನಿ ದೇವಿಲಾಲ್ ಅವರು ರೈತರ ಹಕ್ಕುಗಳಿಗಾಗಿ ಹೋರಾಡಿ ಜೈಲು ಸೇರಿದ್ದರು. ಕುಟುಂಬದ ಹಿರಿಯ ಪುತ್ರನಾಗಿದ್ದ ನನ್ನ ತಂದೆ ಶಿಕ್ಷಣವನ್ನು ಅರ್ಧಕ್ಕೇ ಬಿಟ್ಟು ಕುಟುಂಬದ ಜವಾಬ್ದಾರಿ ಯನ್ನು ವಹಿಸಿಕೊಂಡಿದ್ದರು. ಕುಟುಂಬದ ಇತರ ಸದಸ್ಯರನ್ನು ಓದುವಂತೆ ಅವರು ಉತ್ತೇಜಿಸಿದ್ದರು ಎಂದು ಓಂ ಪ್ರಕಾಶ ಚೌಟಾಲಾರ ಕಿರಿಯ ಪುತ್ರ ಹಾಗೂ ಐಎನ್‌ಎಲ್‌ಡಿ ು ಎಲೆನಾಬಾದ್ ಶಾಸಕ ಅಭಯ್ ಚೌಟಾಲಾ ತಿಳಿಸಿದರು.

ಹಿಸ್ಸಾರ್ ಸಂಸದನಾಗಿರುವ ಮೊಮ್ಮಗ ದುಷ್ಯಂತ್ ಚೌಟಾಲಾರ ಮದುವೆಗಾಗಿ ತನ್ನ ತಂದೆ ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿದ್ದರಾದರೂ 12ನೇ ತರಗತಿಯ ಪರೀಕ್ಷೆಗೆ ಹಾಜರಾಗಲೆಂದು ತಿಂಗಳ ಹಿಂದೆಯೇ ಜೈಲಿಗೆ ಮರಳಿದ್ದರು. ಪರೀಕ್ಷಾ ಕೇಂದ್ರವನ್ನು ಜೈಲಿನಲ್ಲಿಯೇ ವ್ಯವಸ್ಥೆ ಮಾಡಲಾಗಿತ್ತು ಎಂದರು. ಅವರೀಗ ಕಾಲೇಜು ಶಿಕ್ಷಣವನ್ನು ಮುಂದುವರಿಸಲು ಸಜ್ಜಾಗಿದ್ದಾರೆ. ಜೈಲುವಾಸದ ಅವಧಿಯನ್ನು ಅರ್ಥಪೂರ್ಣ ವಾಗಿ ಕಳೆಯಲು ಅವರು ನಿರ್ಧರಿಸಿದ್ದಾರೆ ಎಂದರು.

2000ರಲ್ಲಿ ಹರ್ಯಾಣದಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಸಿದ್ದ ಆರೋಪದಲ್ಲಿ ವಿಚಾರಣಾ ನ್ಯಾಯಾಲಯವು 2013ರಲ್ಲಿ ತಂದೆ-ಮಗನಿಗೆ 10 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿದ್ದು, ಎರಡು ವರ್ಷಗಳ ಬಳಿಕ ಸರ್ವೋಚ್ಚ ನ್ಯಾಯಾಲಯವು ಅದನ್ನು ಎತ್ತಿಹಿಡಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News