ತ್ರಿವಳಿ ತಲಾಖ್ ಅಸ್ತಿತ್ವ ಕಳೆದುಕೊಳ್ಳುತ್ತಿರುವ ಪದ್ದತಿ : ಎಐಎಂಪಿಎಲ್‌ಬಿ
ಹೊಸದಿಲ್ಲಿ, ಮೇ 17 : ತ್ರಿವಳಿ ತಲಾಖ್ ಪದ್ದತಿ ಅವಸಾನದತ್ತ ಸಾಗುತ್ತಿರುವ (ಅಸ್ತಿತ್ವ ಕಳೆದುಕೊಳ್ಳುತ್ತಿರುವ ) ಪದ್ದತಿಯಾಗಿದ್ದು ಇದರ ಬಗ್ಗೆ ಸುಪ್ರೀಂಕೋರ್ಟ್‌ನಂತಹ ಜಾತ್ಯಾತೀತ ವೇದಿಕೆಯಲ್ಲಿ ಚರ್ಚೆ ನಡೆಯುವುದರಿಂದ ಈ ಸಂಪ್ರದಾಯದ ವಾಪಸಾತಿಗೆ ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ( ಎಐಎಂಪಿಎಲ್‌ಬಿ) ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
ತಮ್ಮ ಹಕ್ಕುಗಳನ್ನು ಉಲ್ಲಂಘಿಸಲಾಗುತ್ತಿದೆ ಎಂಬ ಭಾವನೆ ಮುಸ್ಲಿಂ ಸಮುದಾಯದಲ್ಲಿ ಮೂಡಲು ಮತ್ತು ಈ ಮೂಲಕ ಬಹುಪತ್ನಿತ್ವ ಮತ್ತು ವೌಖಿಕ ವಿಚ್ಛೇದನದಂತಹ ಪೂರಕ ಸಂಪ್ರದಾಯಗಳನ್ನು ಬೆಂಬಲಿಸಲು ಇದು ಕಾರಣವಾಗಬಹುದು. ತ್ರಿವಳಿ ತಲಾಖ್ ಪದ್ದತಿಯನ್ನು ಮುಸ್ಲಿಂ ಸಮುದಾಯದ ಕೆಲ ಮಂದಿಯಷ್ಟೇ ಅನುಸರಿಸುತ್ತಿದ್ದಾರೆ ಎಂದು ಎಐಎಂಪಿಎಲ್‌ಬಿ ವಕೀಲ ಕಪಿಲ್ ಸಿಬಲ್ ತಿಳಿಸಿದರು.
ಮುಸ್ಲಿಂ ಸಮುದಾಯವನ್ನು ಸಣ್ಣ ಹಕ್ಕಿಗಳಿಗೆ ಹೋಲಿಸಿದ ಸಿಬಲ್, ಈ ಹಕ್ಕಿಗಳನ್ನು ಸುವರ್ಣ ಹದ್ದುಗಳು(ಗೋಲ್ಡನ್ ಈಗಲ್- ಬಹುಸಂಖ್ಯಾತ ಸಮುದಾಯ) ಬೇಟೆಯಾಡುತ್ತಿವೆ . ಸಮುದಾಯದ ಗೂಡನ್ನು ಸುಪ್ರೀಂಕೋರ್ಟ್ ರಕ್ಷಿಸಬೇಕಿದೆ ಎಂದರು.
ಕಳೆದ 67 ವರ್ಷಗಳಲ್ಲಿ ಮುಸ್ಲಿಂ ಸಮುದಾಯ ಸುಪ್ರೀಂಕೋರ್ಟ್‌ನ ಬಗ್ಗೆ ಮೂಲಭೂತ ವಿಶ್ವಾಸ ಹೊಂದಿದ್ದು ಈ ವಿಶ್ವಾಸವೇ ದೇಶವನ್ನು ಸ್ಪಂದನಶೀಲವಾಗಿಸಿದೆ ಎಂದವರು ಹೇಳಿದರು.
ತ್ರಿವಳಿ ತಲಾಖ್ ಪದ್ದತಿಗೆ ಮಹಿಳೆಯ ಸಮ್ಮತಿ ಇದೆಯೇ ಎಂಬುದನ್ನು ನಿಖಾಹ್‌ನಾಮ(ವಿವಾಹ ಒಪ್ಪಂದ) ಸಂದರ್ಭ ದಾಖಲಿಸಿಕೊಳ್ಳುವಂತೆ ಧರ್ಮಗುರುಗಳಿಗೆ ಎಐಎಂಪಿಎಲ್‌ಬಿ ನಿರ್ದೇಶನ ನೀಡುವುದೇ ಎಂದು ಭಾರತದ ಪ್ರಧಾನ ನ್ಯಾಯಾಧೀಶ ಜೆ.ಎಸ್.ಖೇಹರ್ ಪ್ರಶ್ನಿಸಿದರು. ಮಂಡಳಿಯ ಎಲ್ಲಾ ಸದಸ್ಯರ ಅಭಿಪ್ರಾಯ ಪಡೆದು ಇದಕ್ಕೆ ಉತ್ತರಿಸುವುದಾಗಿ ಸಿಬಲ್ ತಿಳಿಸಿದರು.
Vs ತ್ರಿವಳಿ ತಲಾಖ್ ಪದ್ದತಿಗೆ ಸಾಂವಿಧಾನಿಕ ಮಾನ್ಯತೆ ಇದೆಯೇ ಎಂಬುದರ ಬಗ್ಗೆ ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರನ್ನೊಳಗೊಂಡ ಸಾಂವಿಧಾನಿಕ ಪೀಠವು ವಿಚಾರಣೆ ನಡೆಸುತ್ತಿದೆ. ಸಮಾನತೆಯ ಹುಡುಕಾಟ ಜಾಮಿಯತ್ ಉಲಮ-ಇ- ಹಿಂದ್ ಎಂದು ಈ ಪ್ರಕರಣಕ್ಕೆ ಹೆಸರಿಡಲಾಗಿದೆ.ಶಾಯರ ಬಾನೊ, ಖುರಾನ್ ಸುನ್ನತ್ ಸೊಸೈಟಿ, ಆಫ್ರೀನ್ ರೆಹ್ಮಾನ್, ಗುಲ್‌ಷನ್ ಪರ್ವೀನ್, ಇಷ್ರತ್ ಜಹಾನ್ ಮತ್ತು ಅತಿಯಾ ಸಬ್ರಿ ಅವರು ಅರ್ಜಿದಾರರು. ಪ್ರಕರಣದ ನ್ಯಾಯವಿಚಾರಣೆಗೆ ಆರು ದಿನ ನಿಗದಿಪಡಿಸಲಾಗಿದೆ. ಮೂರು ದಿನ ತ್ರಿವಳಿ ತಲಾಖ್ ಪರ ಇರುವವರು ಮತ್ತು ಮೂರು ದಿನ ಇದನ್ನು ವಿರೋಧಿಸುವವರು ವಾದ ಮಂಡಿಸಲಿದ್ದಾರೆ.