×
Ad

ತ್ರಿವಳಿ ತಲಾಖ್‌ಗೆ ನಕಾರ ಸೂಚಿಸುವ ಆಯ್ಕೆ ಮಹಿಳೆಗಿದೆಯೇ: ಸುಪ್ರೀಂಕೋರ್ಟ್ ಪ್ರಶ್ನೆ

Update: 2017-05-17 19:57 IST

  ಹೊಸದಿಲ್ಲಿ, ಮೇ 17: ಮೂರು ಬಾರಿ ತಲಾಖ್ ಹೇಳುವ ಮೂಲಕ ವಿಚ್ಚೇದ ನ ನೀಡುವ ತ್ರಿವಳಿ ತಲಾಖ್ ಪದ್ದತಿಗೆ ನಕಾರ ಸೂಚಿಸುವ ಆಯ್ಕೆಯನ್ನು ವಧುವಿಗೆ ವಿವಾಹದ ಸಂದರ್ಭ ನೀಡಲಾಗುತ್ತಿದೆಯೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.

ತ್ರಿವಳಿ ತಲಾಖ್ ಪದ್ದತಿ ಮುಂದುವರಿಯಬೇಕೇ ಅಥವಾ ಅದನ್ನು ಸಮಾಪ್ತಿಗೊಳಿಸಬೇಕೇ ಎಂಬ ವಿಷಯದ ಬಗ್ಗೆ ದಿನಂಪ್ರತಿ ತನಿಖೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನ ಐವರು ನ್ಯಾಯಾಧೀಶರನ್ನೊಳಗೊಂಡಿರುವ ಪೀಠವು, ಬುಧವಾರ ತನ್ನ ಕಾರ್ಯಕಲಾಪ ಮುಂದುವರಿಸಿತು.

  ತ್ರಿವಳಿ ತಲಾಖ್‌ಗೆ ಒಪ್ಪದಿರುವ ಆಯ್ಕೆಯನ್ನು ನಿಖಾಹ್‌ನಾಮ(ವಿವಾಹ ಒಪ್ಪಂದ) ಸಂದರ್ಭ ವಧುವಿಗೆ ನೀಡಲಾಗುತ್ತಿದೆಯೇ ಎಂದು ಪ್ರಧಾನ ನ್ಯಾಯಾಧೀಶ ಜೆ.ಎಸ್.ಖೇಹರ್ ಕೇಳಿದರು. ಇದಕ್ಕೆ ಉತ್ತರಿಸಿದ ಕಪಿಲ್ ಸಿಬಲ್(ಅಖಿಲಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯನ್ನು ಪ್ರತಿನಿಧಿಸುತ್ತಿರುವ ವಕೀಲ) , ಈ ಸಲಹೆ ಸ್ವಾಗತಾರ್ಹವಾದುದು ಎಂದರು. ಆದರೆ ಆರಂಭಿಕ ಹಂತದಲ್ಲೇ(ವಿವಾಹ ಸಂದರ್ಭ) ಈ ಆಯ್ಕೆಯನ್ನು ವಧುವಿಗೆ ನೀಡುವ ಬಗ್ಗೆ ಖಾಜಿ ಅಥವಾ ಧಾರ್ಮಿಕ ನ್ಯಾಯಾಲಯವು ಕಾನೂನು ಮಂಡಳಿಯ ನಿರ್ದೇಶನಕ್ಕೆ ಬದ್ಧರಾಗಿರಬೇಕಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ ಎಂದು ಸಿಬಲ್ ತಿಳಿಸಿದರು.

 ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ಯಾವುದನ್ನೂ ಊಹಿಸುವುದು ಸರಿಯಲ್ಲ . ವಿವಿಧ ಸಾಧ್ಯತೆಗಳನ್ನು ಅನ್ವೇಷಿಸುವ ಕಾರ್ಯವಾಗಲಿ ಎಂದರು.

 ಇದಕ್ಕೂ ಮುನ್ನ , ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಾರಿಗೊಳಿಸಿದ ನಿರ್ಣಯವನ್ನು ನ್ಯಾಯಾಲಯದಲ್ಲಿ ಸಿಬಲ್ ಪ್ರಸ್ತುತಪಡಿಸಿದರು. ತ್ರಿವಳಿ ತಲಾಖ್ ಒಂದು ಅಪರಾಧವಾಗಿದೆ. ಈ ಪದ್ದತಿಯನ್ನು ಬೆಂಬಲಿಸುವ ವ್ಯಕ್ತಿಗಳನ್ನು ಸಮುದಾಯ ಬಹಿಷ್ಕರಿಸಬೇಕು ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಅದಾಗ್ಯೂ, ಸುಪ್ರೀಂಕೋರ್ಟ್ ಈ ವಿಷಯದಲ್ಲಿ ಮಧ್ಯಪ್ರವೇಶಿಸಬಾರದು ಎಂದು ಆಗ್ರಹಿಸಿದ ಸಿಬಲ್, - ಸಮುದಾಯದ ಎಲ್ಲಾ ಜನರೂ ಮುಂಜಾನೆ ಎದ್ದು ತ್ರಿವಳಿ ತಲಾಖ್ ಹೇಳುತ್ತಿದ್ದಾರೆ ಎಂಬ ರೀತಿಯಲ್ಲಿ ಈ ಪ್ರಕರಣವನ್ನು ಬಿಂಬಿಸಲಾಗುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News