×
Ad

ಆರ್‌ಜೆಡಿ-ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ: ಆರು ಮಂದಿಗೆ ಗಂಭೀರ ಗಾಯ

Update: 2017-05-17 20:33 IST

  ಪಾಟ್ನಾ, ಮೇ 17: ಕಳೆದೊಂದು ತಿಂಗಳಿನಿಂದ ಬಿಜೆಪಿ ಮತ್ತು ಆರ್‌ಜೆಡಿ ಕಾರ್ಯಕರ್ತರ ನಡುವೆ ನಡೆಯುತ್ತಿದ್ದ ಆರೋಪ-ಪ್ರತ್ಯಾರೋಪಗಳ ವಾಕ್ಸಮರ ಬುಧವಾರ ಉಭಯ ಪಕ್ಷದ ಕಾರ್ಯಕರ್ತರು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು ಘರ್ಷಣೆಯಲ್ಲಿ ಆರಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪಾಟ್ನಾದ ಬೀರ್‌ಚಂದ್ ಪಟೇಲ್ ರಸ್ತೆಯಲ್ಲಿರುವ ಬಿಜೆಪಿ ಪಕ್ಷದ ರಾಜ್ಯ ಘಟಕದ ಕೇಂದ್ರ ಕಚೇರಿಯಲ್ಲಿ ಈ ಘರ್ಷಣೆ ನಡೆದಿದೆ. ಘಟನೆಯ ಕುರಿತು ಬಿಜೆಪಿ ಮುಖಂಡರು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು , ಆರ್‌ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್, ಲಾಲೂ ಅವರ ಪುತ್ರ, ರಾಜ್ಯದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಬಿಹಾರದ ಸಚಿವರಾಗಿರುವ ಇನ್ನೊಬ್ಬ ಪುತ್ರ ತೇಜ್‌ಪ್ರತಾಪ್ ಯಾದವ್ ಅರು ಬಿಜೆಪಿ ಕಚೇರಿ ಮೇಲೆ ದಾಳಿ ಮಾಡುವಂತೆ ಕಾರ್ಯಕರ್ತರಿಗೆ ಉತ್ತೇಜನ ನೀಡಿದ್ದರು ಎಂದು ಆರೋಪಿಸಲಾಗಿದೆ.

  ದಿಲ್ಲಿಯಲ್ಲಿ ಮಂಗಳವಾರ ಆದಾಯತೆರಿಗೆ ಇಲಾಖೆಯು ಲಾಲೂಪ್ರಸಾದ್ ಯಾದವ್ ನಿಕಟವರ್ತಿಗಳ ಸಂಸ್ಥೆ ಹಾಗೂ ನಿವಾಸದ ಮೇಲೆ ದಾಳಿ ನಡೆಸಿದ್ದು ಇದನ್ನು ಖಂಡಿಸಿ ಆರ್‌ಜೆಡಿಯ ವಿದ್ಯಾರ್ಥಿ ಘಟಕವು ಬೀರ್‌ಚಂದ್ ಪಟೇಲ್ ರಸ್ತೆಯ ಮೂಲಕ ಮೆರವಣಿಗೆಯೊಂದನ್ನು ಆಯೋಜಿಸಿತ್ತು. ಈ ರಸ್ತೆಯಲ್ಲಿ ಎರಡೂ ಪಕ್ಷ(ಬಿಜೆಪಿ, ಆರ್‌ಜೆಡಿ) ಕಚೇರಿಗಳಿವೆ. ಆರ್‌ಜೆಡಿ ಕಚೇರಿಯಿಂದ ಆದಾಯತೆರಿಗೆ ಇಲಾಖೆಯ ಕಚೇರಿವರೆಗೆ ಈ ಮೆರವಣಿಗೆ ಹಮ್ಮಿಕೊಳ್ಳಲಾಗಿದ್ದು ಪೊಲೀಸರ ಭದ್ರತೆಯಲ್ಲಿ ಮೆರವಣಿಗೆ ಹೊರಟಿತ್ತು. ಬಿಜೆಪಿ ಕಚೇರಿಯೆದುರು ಮೆರವಣಿಗೆ ಬಂದಾಗ ಆರ್‌ಜೆಡಿ ಕಾರ್ಯಕರ್ತರು ಘೋಷಣೆಗಳನ್ನು ಕೂಗುತ್ತಾ ಕಚೇರಿಯೊಳಗೆ ನುಗ್ಗಲು ಯತ್ನಿಸಿದರು. ಮದ್ಯಪಾನ ಮಾಡಿದ್ದ ಕಾರ್ಯಕರ್ತರಲ್ಲಿ ಬಹುತೇಕ ಮಂದಿ ಶರ್ಟ್ ಧರಿಸಿರಲಿಲ್ಲ. ಅಷ್ಟರಲ್ಲಿ ಕಚೇರಿಯಲ್ಲಿದ್ದವರು ಗೇಟಿನ ಬಾಗಿಲು ಮುಚ್ಚಿದಾಗ ರೊಚ್ಚಿಗೆದ್ದ ಕಾರ್ಯಕರ್ತರು ಕಲ್ಲು ತೂರಾಟಕ್ಕೆ ಆರಂಭಿಸಿದರು. ಅಲ್ಲದೆ ಕಚೇರಿಯೊಳಗೆ ಸಾರಾಯಿ ಬಾಟಲಿಗಳನ್ನೂ ಎಸೆದರು. ಕಚೇರಿಯೆದುರು ಪಾರ್ಕ್ ಮಾಡಲಾಗಿದ್ದ ಕಾರಿನ ಗಾಜನ್ನು ಒಡೆದುಹಾಕಿದರು ಎಂದು ಬಿಜೆಪಿಯ ಕಾರ್ಯಕರ್ತ ಬೃಜೇಶ್ ತಿವಾರಿ ತಿಳಿಸಿದ್ದಾರೆ. ಘಟನೆಯಲ್ಲಿ ತಿವಾರಿಯ ತಲೆಗೆ ಹೊಡೆತ ಬಿದ್ದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ನಡೆದ ಸಂದರ್ಭ ಬಿಜೆಪಿ ಕಾರ್ಯಕರ್ತರು ಗರ್ದನಿಬಾಗ್ ಎಂಬಲ್ಲಿ ಧರಣಿ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ತಡೆದರು ಎಂದು ಬಿಜೆಪಿ ಮುಖಂಡರು ದೂರಿದ್ದಾರೆ. ಅಲ್ಲದೆ ಆರ್‌ಜೆಡಿ ಕಾರ್ಯಕರ್ತರು ದಾಂಧಲೆ ನಡೆಸುತ್ತಿದ್ದಾಗ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು ಎಂದೂ ಅವರು ದೂರಿದ್ದಾರೆ.

ಬಿಜೆಪಿ ಕಚೇರಿಯೆದುರು ನಮ್ಮ ಮೆರವಣಿಗೆ ಬಂದಾಗ ಬಿಜೆಪಿ ಕಾರ್ಯಕರ್ತರು ಅಶ್ಲೀಲ ಪದಗಳಿಂದ ನಿಂದಿಸುತ್ತಾ, ದೊಣ್ಣೆಯಿಂದ ಹಲ್ಲೆ ನಡೆಸುವುದಾಗಿ ಬೆದರಿಸಿದರು. ಆಗ ನಾವು ಬಿಜೆಪಿಯವರು ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಿ ಅಲ್ಲಿ ಧರಣಿ ಮುಷ್ಕರ ನಡೆಸಿದೆವು. ಆಗ ಬಿಜೆಪಿ ಕಾರ್ಯಕರ್ತರು ಸಾರಾಯಿ ಬಾಟಲಿ ಮತ್ತು ಕಲ್ಲುಗಳಿಂದ ನಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಆರ್‌ಜೆಡಿ ರಾಜ್ಯ ಘಟಕದ ವಿದ್ಯಾರ್ಥಿ ವಿಭಾಗದ ಅಧ್ಯಕ್ಷ ಆಕಾಶ್ ಯಾದವ್ ತಿಳಿಸಿದ್ದಾರೆ. ಘಟನೆ ಖಂಡಿಸಿ ಗುರುವಾರ (ಇಂದು) ಪಕ್ಷದ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪ್ರತಿಕೃತಿ ದಹಿಸಲಾಗುವುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದ ರೈ ತಿಳಿಸಿದ್ದಾರೆ. ಆರ್‌ಜೆಡಿ ಕಾರ್ಯಕರ್ತರು ಅಮಾಯಕರಾಗಿದ್ದು ಘಟನೆಗೆ ಬಿಜೆಪಿ ಕಾರಣ ಎಂದು ಆರ್‌ಜೆಡಿ ರಾಷ್ಟ್ರೀಯ ವಕ್ತಾರ ಮನೋಜ್ ಝಾ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News