ಪೆರೋಲ್‌ನಲ್ಲಿ ಹೊರಬಂದು ಜೋಡಿ ಕೊಲೆ ಮಾಡಿ ಸೇಡು ತೀರಿಸಿಕೊಂಡ 17ರ ಬಾಲಕ

Update: 2017-05-18 10:56 GMT

ಹೊಸದಿಲ್ಲಿ,ಮೇ 18: ಸರಗಳ್ಳತನದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಪೆರೋಲ್ ಮೇಲೆ ಹೊರಬಂದಿದ್ದ 17ರ ಹರೆಯದ ಬಾಲಾರೋಪಿ ತನ್ನ ನಾಲ್ವರು ವಯಸ್ಕ ಗೆಳೆಯರ ನೆರವಿನೊಂದಿಗೆ ಕೇವಲ ಎರಡು ಗಂಟೆಗಳ ಅಂತರದಲ್ಲಿ ಎರಡು ಕೊಲೆಗಳನ್ನು ಮಾಡಿದ್ದಾನೆ.

ಶುಕ್ರವಾರ ರಾತ್ರಿ ಈ ಜೋಡಿಕೊಲೆ ನಡೆದಿದ್ದು, ಮೊದಲು ಸರಗಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಬಾಲನ್ಯಾಯ ಗೃಹದಲ್ಲಿದ್ದ ಈತ ಕೇವಲ ಒಂದು ವಾರದ ಮೊದಲು ಪೆರೋಲ್‌ನಲ್ಲಿ ಹೊರಗೆ ಬಂದಿದ್ದ. ಈ ಹಿಂದೆ ಚಿಲ್ಲರೆ ಅಪರಾಧಗಳಿಗಾಗಿ ಕನಿಷ್ಠ ಮೂರು ಬಾರಿ ಈತ ಬಂಧಿಸಲ್ಪಟ್ಟಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಪೆರೋಲ್‌ನಲ್ಲಿ ಹೊರಗೆ ಬಂದಾಗಿನಿಂದ ಈ ಬಾಲಾರೋಪಿ ವರ್ಷದ ಹಿಂದೆ ಕ್ಷುಲ್ಲಕ ಕಾರಣದಿಂದ ತನ್ನೊಡನೆ ಜಗಳವಾಡಿ ಚೂರಿಯಿಂದ ತನ್ನನ್ನು ಇರಿದಿದ್ದ ತನ್ನ ಶತ್ರುಗಳಾದ ಸುನಿಲ್ ಮತ್ತು ರಾಹುಲ್ ವಿರುದ್ಧ ಸೇಡು ತೀರಿಸಿಕೊಳ್ಳಲು ತವಕಿಸುತ್ತಿದ್ದ.

ಶುಕ್ರವಾರ ರಾತ್ರಿ ತನ್ನ ಸ್ನೇಹಿತ ಮನೋಜ್(22) ಮತ್ತು ಇತರ ಮೂವರಿಗೆ ಕರೆ ಮಾಡಿದ್ದ ಈತ ಅಂದೇ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದ.

ಸುನಿಲ್ ವಾಸವಿದ್ದ ಪೂರ್ವ ದಿಲ್ಲಿಯ ಖ್ಯಾಲಾ ಪ್ರದೇಶಕ್ಕೆ ತೆರಳಿದ್ದ ಈ ಐವರು ಆತನನ್ನು ಅಲ್ಲಿಯ ಪಾರ್ಕೊಂದಕ್ಕೆ ಕರೆಸಿ ಚೂರಿಯಿಂದ ಇರಿದು ಕೊಲೆ ಮಾಡಿದ್ದರು. ಅಲ್ಲಿಂದ ತೆರಳುವ ಮುನ್ನ ಆತನ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡಿದ್ದರು.

ಇದಾದ ಎರಡು ಗಂಟೆಗಳ ಬಳಿಕ ನಬಿ ಕರೀಂ ಪ್ರದೇಶದಲ್ಲಿನ ರಾಹುಲ್ ಮನೆಗೆ ನುಗ್ಗಿದ್ದ ತಂಡ ಆತನನ್ನು ಹೊರಗೆಳೆದು ತಂದು 20ಕ್ಕೂ ಅಧಿಕ ಬಾರಿ ಚೂರಿಗಳಿಂದ ಇರಿದು ಹತ್ಯೆ ಮಾಡಿತ್ತು. ಮೊದಲ ಕೊಲೆಯ ಬಳಿಕ ಮನೆಯಿಂದ ತುರ್ತುಕರೆ ಬಂದಿದ್ದರಿಂದ ಮನೋಜ್ ಈ ಹತ್ಯೆಯಲ್ಲಿ ಭಾಗಿಯಾಗಿರಲಿಲ್ಲ.

ಸೇಡು ತೀರಿದ ಖುಷಿಯಲ್ಲಿ ಹಂತಕರು ಪಾರ್ಟಿಯನ್ನೂ ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.

 ಆರೋಪಿಗಳ ಪೈಕಿ ಮನೋಜ್ ಮೊದಲು ಪೊಲೀಸರ ಬಲೆಗೆ ಬಿದ್ದಿದ್ದು, ಆತ ನೀಡಿದ ಮಾಹಿತಿಯ ಮೇರೆಗೆ ಬಾಲಾರೋಪಿಯನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿ ದ್ದಾರೆ. ಇತರ ಮೂವರಿಗಾಗಿ ಪೊಲೀಸರ ಶೋಧ ಕಾರ್ಯಾಚರಣೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News