ಮಾಲೆಗಾಂವ್ ಚುನಾವಣೆ:77 ಅಭ್ಯರ್ಥಿಗಳ ಬಿಜೆಪಿ ಪಟ್ಟಿಯಲ್ಲಿ 45 ಮುಸ್ಲಿಮರು
ಮುಂಬೈ,ಮೇ 18: ಮೇ 24ರಂದು ನಡೆಯಲಿರುವ ಮಾಲೆಗಾಂವ್ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿಯು ಈವರೆಗಿನ ತನ್ನ ಗರಿಷ್ಠ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ನಗರಪಾಲಿಕೆಯ ಒಟ್ಟು 84 ಸ್ಥಾನಗಳ ಪೈಕಿ 77 ಸ್ಥಾನಗಳಿಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಹೆಸರಿಸಿದ್ದು, ಈ ಪಟ್ಟಿಯಲ್ಲಿ 45ಕ್ಕೂ ಅಧಿಕ ಮುಸ್ಲಿಂ ಅಭ್ಯರ್ಥಿಗಳಿದ್ದಾರೆ.
ದೇಶದ ಯಾವುದೇ ಭಾಗದಲ್ಲಿ ಒಂದೇ ಚುನಾವಣೆಯಲ್ಲಿ ಇಷ್ಟೊಂದು ಮುಸ್ಲಿಂ ಅಭ್ಯರ್ಥಿಗಳಿಗೆ ಇದೇ ಮೊದಲ ಬಾರಿಗೆ ಬಿಜೆಪಿ ಟಿಕೆಟ್ ನೀಡಿದೆ. ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ಈ ನಗರದಲ್ಲಿ ‘ಮೋದಿ ಅಲೆ ’ಯನ್ನು ಪರೀಕ್ಷೆಗೊಡ್ಡಲು ಬಿಜೆಪಿ ಸಜ್ಜಾಗಿರುವಂತಿದೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉಳಿದಂತೆ ಕಾಂಂಗ್ರೆಸ್ 73 ಮತ್ತು ಎನ್‌ಸಿಪಿ-ಜೆಡಿಎಸ್ ಮೈತ್ರಿಕೂಟ 66 ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಇದೇ ಮೊದಲ ಬಾರಿಗೆ ಮಾಲೆಗಾಂವ್‌ನಲ್ಲಿ ಸ್ಪರ್ಧಿಸುತ್ತಿರುವ ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ 37 ಮತ್ತು ಶಿವಸೇನೆ 25 ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ.
2012ರಲ್ಲಿ ನಡೆದಿದ್ದ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯ 24 ಅಭ್ಯರ್ಥಿಗಳು ಸ್ಪರ್ಧಿಸಿದ್ದರಾದರೂ ಎಲ್ಲರೂ ಸೋಲನ್ನಪ್ಪಿದ್ದರು. ಈ ಪೈಕಿ 12 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.