ಬಾಹುಬಲಿಯ ಮೇಲೆ ಪ್ರಶಂಸೆಯ ಸುರಿಮಳೆಯಾಗುತ್ತಿರುವಾಗ ಕಮಲ್ ಹಾಸನ್ ಮಾತ್ರ ಏನು ಹೇಳಿದ್ದಾರೆ ಗೊತ್ತೇ?

Update: 2017-05-18 11:24 GMT

ಚೆನ್ನೈ, ಮೇ 18: ನಿರ್ದೇಶಕ ಎಸ್.ಎಸ್. ರಾಜಮೌಳಿಯವರ ಬಾಹುಬಲಿ ಚಿತ್ರವನ್ನು ಎಲ್ಲರೂ ಹಾಡಿಹೊಗಳುತ್ತಿರುವಾಗಲೇ ಚಿತ್ರದ ಬಗ್ಗೆ ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ಖ್ಯಾತ ನಟ ಹಾಗೂ ನಿರ್ದೇಶಕ ಕಮಲ್ ಹಾಸನ್, ಬಾಹುಬಲಿ ಮಹಾಭಾರತ ಹಾಗೂ ತಮಿಳು ಕಾಲ್ಪನಿಕ  ಧಾರವಾಹಿ “ಅಂಬುಲಿ ಮಾಮ” ದ ಇನ್ನೊಂದು ರೂಪವಾಗಿದೆ ಎಂದಿದ್ದಾರೆ.

ಬಾಹುಬಲಿ ಚಿತ್ರದ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಭಾರತದ ಚಲನಚಿತ್ರೋದ್ಯಮದಲ್ಲಿ ಗಳಿಕೆ ವಿಚಾರದಲ್ಲಿ ಚಿತ್ರದ ಸಾಧನೆಯೇ ಉತ್ತಮ ವಿಷಯ ಎಂದಿದ್ದಾರೆ. “ಚಿತ್ರತಂಡ ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಟ್ಟಿದೆ. ಆದರೆ ಹಾಲಿವುಡ್ ಅನ್ನೂ ನಾವು ಮೀರಿಸಬಹುದು ಎಂದು ಅವರು ಹೇಳುವುದಾದರೆ ‘ನಿಮ್ಮ ಕುದುರೆಯನ್ನು ತಡೆಯಿರಿ. ಏಕೆಂದರೆ ಅದು ಸಿಜಿ (ಕಂಪ್ಯೂಟರ್ ಗ್ರಾಫಿಕ್ಸ್) ಕುದುರೆಯಾಗಿದೆ ಎಂದು ಹೇಳಲು ನಾನು ಇಚ್ಛಿಸುತ್ತೇನೆ. ಬಾಹುಬಲಿ ಒಂದು ಹೆಜ್ಜೆ ಮುಂದೆಯೇ ಇದೆ. ಭಾರತದಲ್ಲಿ ಶ್ರೇಷ್ಟ ಸಂಸ್ಕೃತಿ ಹಾಗೂ ಉತ್ತಮ ಕಥೆಗಳಿವೆ ಎನ್ನುವುದನ್ನು ಅದು ನಿರೂಪಿಸಿದೆ” ಎಂದಿದ್ದಾರೆ.

ಬಾಹುಬಲಿಯ ಯಶಸ್ಸು ನಿಮ್ಮ ಮೇಲೆ ಒತ್ತಡ ಬೀರಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿರುವ ಕಮಲ್, “ಹಿಂಡಿನೊಂದಿಗೆ ಹೋಗುವುದು ಕುರಿಗಳು ಆಯ್ಕೆ ಮಾಡುವ ದಾರಿಯಾಗಿದೆ. ನಾನು ಕುರಿಯಲ್ಲ. ಕುರುಬನೂ ಅಲ್ಲ. ನಾನು ಬೇರೆ ಪ್ರಾಣಿ” ಎಂದು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News