×
Ad

ಕೊಲೆ ಪ್ರಕರಣದಲ್ಲಿ ಮಾಜಿ ಸಂಸದ ಹಾಗೂ ಆರ್‌ಜೆಡಿ ನಾಯಕ ಪ್ರಭುನಾಥ ಸಿಂಗ್ ದೋಷಿ

Update: 2017-05-18 18:58 IST

ರಾಂಚಿ,ಮೇ 18: ಬಿಹಾರದ ಮಾಜಿ ಸಂಸದ ಹಾಗೂ ಆರ್‌ಜೆಡಿ ನಾಯಕ ಪ್ರಭುನಾಥ ಸಿಂಗ್ ಅವರು 22 ವರ್ಷಗಳ ಹಿಂದಿನ ಆಗಿನ ಶಾಸಕ ಅಶೋಕ ಸಿಂಗ್ಕೊಲೆ ಪ್ರಕರಣದಲ್ಲಿ ದೋಷಿಯಾಗಿದ್ದಾರೆ ಎಂದು ಜಾರ್ಖಂಡ್‌ನ ಹಝಾರಿಬಾಗ್ ಜಿಲ್ಲಾ ನ್ಯಾಯಾಲಯವು ಗುರುವಾರ ಘೋಷಿಸಿದೆ.

ಸಿಂಗ್ ಜೊತೆ ಅವರ ಸೋದರ ದೀನಾನಾಥ ಸಿಂಗ್ ಮತ್ತು ರಿತೇಶ ಸಿಂಗ್ ಅವರನ್ನೂ ಪ್ರಕರಣದಲ್ಲಿ ದೋಷಿಗಳೆಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಪ್ರಕಟಿಸಿದರು.

ಅಶೋಕ ಸಿಂಗ್ 1995ರಲ್ಲಿ ಬಿಹಾರದ ಮಶ್ರಕ್ ವಿಧಾನಸಭಾ ಕ್ಷೇತ್ರದಲ್ಲಿ ಪ್ರಭುನಾಥ ಸಿಂಗ್‌ರನ್ನು ಸೋಲಿಸಿ ಆಯ್ಕೆಯಾಗಿದ್ದರು. 90 ದಿನಗಳ ಬಳಿಕ ಅವರನ್ನು ಹತ್ಯೆ ಮಾಡಲಾಗಿತ್ತು.

1995ರಲ್ಲಿ ಜನತಾದಳದಲ್ಲಿದ್ದ ಪ್ರಭುನಾಥ ಸಿಂಗ್ ಬಳಿಕ ಜೆಡಿಯುಗೆ ಸೇರಿದ್ದರು. ಹಾಲಿ ಅವರು ಆರ್‌ಜೆಡಿ ನಾಯಕರಾಗಿದ್ದು, ಬಿಹಾರದ ಮಹಾರಾಜಗಂಜ್ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದಾರೆ.

ಶಾಸಕನಾಗಿ ಆಯ್ಕೆಯಾದ 90 ದಿನಗಳಲ್ಲಿ ತನ್ನ ಸೋದರನ ಹತ್ಯೆ ಮಾಡುವುದಾಗಿ ಪ್ರಭುನಾಥ ಸಿಂಗ್ ಬಹಿರಂಗವಾಗಿಯೇ ಹೇಳಿದ್ದರು ಮತ್ತು 90ನೇ ದಿನ ತನ್ನ ಸೋದರನ ಕೊಲೆಯಾಗಿತ್ತು ಎಂದು ಅಶೋಕ ಸಿಂಗ್‌ರ ಸೋದರ ತಾರಕೇಶ್ವರ್ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.

ಸರ್ವೋಚ್ಚ ನ್ಯಾಯಲಯದ ನಿರ್ದೇಶದ ಮೇರೆಗೆ ಈ ಪ್ರಕರಣವನ್ನು ಬಿಹಾರದಿಂದ ಜಾರ್ಖಂಡ್‌ನ ಹಝಾರಿಬಾಗ್‌ಗೆ ವರ್ಗಾಯಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News