ಹೊಳೆಗೆ ಬಿದ್ದ ಮೂವರನ್ನು ರಕ್ಷಿಸಿದ ವಿದ್ಯಾರ್ಥಿನಿ ವಿಸ್ಮಯ
ಬಾಲುಶ್ಶೇರಿ(ಕೇರಳ) , ಮೇ 19; ಹೊಳೆಯಲ್ಲಿ ಮುಳುಗಿದ ಕುಟುಂಬದ ಮೂವರ ಜೀವವನ್ನು ಉಳಿಸಿದ ಪ್ಲಸ್‌ಟು(ದ್ವಿತೀಯ ಪಿಯುಸಿ) ವಿದ್ಯಾರ್ಥಿನಿಗೆ ಊರ ಗೌರವ. ಕೊಟ್ಟೂರು ಪಂಚಾಯತ್‌ನ ಹದಿಮೂರನೆ ವಾರ್ಡ್‌ನ ತೆಕ್ಕಯಿಲ್ ರಾಧಾ(52), ಪುತ್ರಿ ರಾಜುಲಾ(33), ರಾಜುಲಾಳ ಪುತ್ರ ಆದಿದೇವ್(5) ರನ್ನು ನೆರೆಯ ಚಂದ್ರ ಎನ್ನುವವರ ಪುತ್ರಿ ವಿಸ್ಮಯ(17) ಧೈರ್ಯದಿಂದ ಈಜಿ ಹೋಗಿ ಹೊಳೆಯಿಂದ ಮೇಲೆತ್ತಿ ಸಾಹಸಮೆರೆದು ಊರಿನ ಜನರ ಗೌರವಕ್ಕೆ ಪಾತ್ರಳಾಗಿದ್ದಾಳೆ.
ಕಳೆದ ಎಪ್ರಿಲ್ 8ರಂದು ಬೆಳಗ್ಗೆ ಎಂಟೂವರೆ ಗಂಟೆಗೆ ಅವಘಡ ಸಂಭವಿಸಿತ್ತು. ರಾಧಾ, ರಾಜುಲಾ ಹೊಳೆಬದಿಯ ಕಲ್ಲಿನ ಮೇಳೆ ಕುಳಿತಿದ್ದರು. ಆಗ ಮಗು ಆದಿದೇವ್ ಹೊಳೆಗೆ ಬಿದ್ದಿದ್ದಾನೆ. ನೀರಿನ ಲ್ಲಿ ಮಗು ಮುಳುಗುತ್ತಿರುವುದನ್ನುನೋಡಿದ ರಾಧಾ ಹೊಳೆಗೆ ಹಾರಿದ್ದಾರೆ. ರಾಧಾರೂ ಮುಳುಗಿದಾಗ ಇವರನ್ನು ರಕ್ಷಿಸಲು ರಾಜುಲಾಳೂ ಹಾರಿದ್ದಾಳೆ. ಮೂವರು ನೀರಲ್ಲಿ ಮುಳುಗುತ್ತಿರುವುದನ್ನು ಸಮೀಪದಲ್ಲೇ ಸ್ನಾನ ಮಾಡುತ್ತಿದ್ದ ವಿಸ್ಮಯಾ ಮತ್ತು ಗೆಳತಿ ಆದಿರಾ ನೋಡಿದ್ದಾರೆ. ಕೂಡಲೇ ವಿಸ್ಮಯಾ ಈಜಿ ಹೋಗಿ ಅತಿಸಾಹಸಿಕವಾಗಿ ಮೂವರನ್ನು ದಡಕ್ಕೆ ತಂದು ಜೀವ ಉಳಿಸಿದ್ದಾಳೆ.
ವಿಸ್ಮಯಾ ವಾಕಯಾಡ್ ಹೈಯರ್ ಸೆಕಂಡರಿ ಶಾಲೆಯಲ್ಲಿ ಪ್ಲಸ್ ಟು ವಿದ್ಯಾರ್ಥಿನಿಯಾಗಿದ್ದು, ನಟುವಣ್ಣೂರಿನಲ್ಲಿ ಆಟೊ ಚಾಲಕ ಚಂದ್ರ ಮತ್ತುರಮಾ ದಂಪತಿಯ ಏಕಪುತ್ರಿಯಾಗಿದ್ದಾಳೆ. ತೀರಾ ಬಡ ಕುಟುಂಬ ಇವರದ್ದಾಗಿದ್ದು, ವಿಸ್ಮಯಾಳ ಸಾಹಸ ಊರಿನಲ್ಲೇ ಹುದುಗಿ ಹೋಗಿತ್ತು. ಹೆಚ್ಚುಪ್ರಚಾರಗೊಂಡಿರಲಿಲ್ಲ.ಆದರೆ ವಿಸ್ಮಯಾಳ ಸಾಹಸವನ್ನು ಗುರುತಿಸಿ ಕುಟುಂಬ ಶ್ರೀ , ನವಜೋತಿ ಕುಟುಂಬಶ್ರೀಗಳು ಸನ್ಮಾನಿಸಿ ಹರಸಿವೆ. ವಿಸ್ಮಯಾಳ ಸಾಹಸದಿಂದ ಜೀವ ಉಳಿಸಿಕೊಂಡ ಕುಟುಂಬದವರು ವಿಸ್ಮಯಾಳಿಗೆ ಉಡುಗೊರೆ ನೀಡಿದ್ದಾರೆ.