×
Ad

ಪ್ರಿಯಕರನ ಮದುವೆ ಮಂಟಪಕ್ಕೆ ಬೆಂಕಿ ಹಚ್ಚಿದ ವಂಚಿತ ಪ್ರಿಯತಮೆ

Update: 2017-05-19 14:22 IST
ಸಾಂದರ್ಭಿಕ ಚಿತ್ರ

ಪುಣೆ,ಮೇ 19: ಪ್ರಿಯಕರ ತನ್ನನ್ನು ನಡುನೀರಿನಲ್ಲಿ ಕೈಬಿಟ್ಟು ಬೇರೊಬ್ಬಳನ್ನು ಮದುವೆಯಾಗಲು ನಿರ್ಧರಿಸಿದ್ದರಿಂದ ಆಕ್ರೋಶಿತ 36ರ ಹರೆಯದ ಮಹಿಳೆಯೋರ್ವಳು ಆತನ ಮದುವೆಗಾಗಿ ನಿರ್ಮಿಸಿದ್ದ ಮಂಟಪಕ್ಕೆ ಬೆಂಕಿ ಹಚ್ಚಿರುವ ಘಟನೆ ಬುಧವಾರ ಕತ್ರಾಜ್‌ನಲ್ಲಿ ನಡೆದಿದೆ. ಇದಕ್ಕೂ ಮುನ್ನ ರವಿವಾರ ಮಹಿಳೆ ತಾನು ಆತನಿಗೆ ಉಡುಗೊರೆಯಾಗಿ ನೀಡಿದ್ದ ಸ್ಕೂಟರ್‌ಗೂ ಬೆಂಕಿ ಹಚ್ಚಿದ್ದಳು.

ತನ್ನ ಸ್ಕೂಟರ್‌ಗೆ ಬೆಂಕಿ ಹಚ್ಚಲಾಗಿದೆಯೆಂದು 33ರ ಹರೆಯದ ವ್ಯಕ್ತಿ ರವಿವಾರ ದೂರು ದಾಖಲಿಸಿದ್ದ. ಅದಿನ್ನೂ ತನಿಖೆಯ ಹಂತದಲ್ಲಿರುವಾಗಲೇ ಬುಧವಾರ ಮತ್ತೆ ಠಾಣೆಗೆ ಬಂದು ತನ್ನ ಮದುವೆಗೆ ಒಂದು ದಿನ ಬಾಕಿಯಿರುವಾಗ ಮದುವೆ ಮಂಟಪಕ್ಕೆ ಯಾರೋ ಬೆಂಕಿ ಹಚ್ಚಿದ್ದಾರೆ ಎಂದು ಇನ್ನೊಂದು ದೂರನ್ನು ದಾಖಲಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿ ವಿಜಯಸಿಂಹ ಗಾಯಕ್ವಾಡ್ ತಿಳಿಸಿದರು.

ಲಭ್ಯ ಮಾಹಿತಿಯ ಮೇರೆಗೆ ಪೋಲೀಸರು ಆರೋಪಿ ಮಹಿಳೆಯನ್ನು ನಿನ್ನೆ ದತ್ತನಗರದಿಂದ ಬಂಧಿಸಿದ್ದು, ಎರಡೂ ಅಪರಾಧಗಳನ್ನು ಆಕೆ ಒಪ್ಪಿಕೊಂಡಿದ್ದಾಳೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಮೇ 20ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಳೆದ ಆರು ವರ್ಷಗಳಿಂದಲೂ ತಾವಿಬ್ಬರೂ ಪರಸ್ಪರ ಪ್ರೇಮಿಸುತ್ತಿದ್ದು, ಆತ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಆದರೆ ಯಾವುದೇ ಕಾರಣವನ್ನು ನೀಡದೆ ಇನ್ನೊಬ್ಬಳನ್ನು ಮದುವೆಯಾಗಲು ಮುಂದಾಗಿದ್ದಾನೆ ಎಂದು ಆಕೆ ಆರೋಪಿಸಿದ್ದಾಳೆ.

 ಇಷ್ಟೇ ಅಲ್ಲ, ಪ್ರಿಯಕರ ತನ್ನ ಮದುವೆಗೆ ಈ ಮಹಿಳೆಯನ್ನೂ ಆಹ್ವಾನಿಸಿದ್ದ. ಇದರಿಂದ ಇನ್ನಷ್ಟು ರೊಚ್ಚಿಗೆದ್ದ ಆಕೆ ನೇರವಾಗಿ ವಧುವಿನ ಮನೆಗೆ ತೆರಳಿ ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಆ ಕುಟುಂಬಕ್ಕೆ ತಿಳಿಸಿದ್ದಳು. ಆದರೆ ಈ ತಂತ್ರ ಫಲಿಸದಿದ್ದಾಗ ಆಕೆ ಮಂಟಪಕ್ಕೆ ಬೆಂಕಿ ಹಚ್ಚಿ ಮದುವೆ ಕಾರ್ಯಕ್ರಮಕ್ಕೆ ಅಡಚಣೆಯನ್ನುಂಟು ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News