ನನ್ನನ್ನು ಬೆದರಿಸಲು ಬರಬೇಡಿ, ದಿಲ್ಲಿ ಕುರ್ಚಿಯಿಂದ ಇಳಿಸುತ್ತೇನೆ: ಬಿಜೆಪಿ,ಆರೆಸ್ಸೆಸ್ ವಿರುದ್ಧ ಲಾಲು ಗುಡುಗು !
ಹೊಸದಿಲ್ಲಿ, ಮೇ 19: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ರ ದಿನಗಳು ಈಗ ಅಷ್ಟು ಸರಿಯಿಲ್ಲ. ಸುಪ್ರೀಂಕೋರ್ಟಿನಿಂದ ಪ್ರಹಾರ ಸಿಕ್ಕಿದ ನಂತರ ಲಾಲುರಿಗೆ ಸಂಬಂಧಿಸಿದ 22 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆಯಿಂದ ದಾಳಿಯಾಗಿತ್ತು. 1,000 ಕೋಟಿ ರೂ. ಮೊತ್ತದ ಬೇನಾಮಿಆಸ್ತಿ ಪ್ರಕರಣದಲ್ಲಿ ಈ ದಾಳಿಯನ್ನು ಸಂಘಟಿಸಲಾಗಿತ್ತು. ಆದರೆ ಲಾಲು ಈ ದಾಳಿಯನ್ನು ರಾಜಕೀಯ ಪ್ರೇರಿತ ಹಾಗೂ ಅಧಿಕಾರದ ದುರುಪಯೋಗ ಎಂದು ಬಣ್ಣಿಸಿದ್ದರು.
ನಂತರ ಲಾಲುಪ್ರಸಾದ್ ಯಾದವ್‌ರು ಮುಂದಿನ ಆಗಸ್ಟ್ ತಿಂಗಳಲ್ಲಿ ಪಾಟ್ನಾದಲ್ಲಿ ಅರ್‌ಜೆಡಿ ವತಿಯಿಂದ ಜಾಥಾ ನಡೆಸುವುದಾಗಿ ಘೋಷಿಸಿದ್ದರು. ಲಾಲುರ ಈ ಘೋಷಣೆಯನ್ನು ಬಿಜೆಪಿವಿರುದ್ಧ ಪ್ರತಿದಾಳಿಗೆ ಮುಂದಿಟ್ಟ ಹೆಜ್ಜೆಯಾಗಿದೆ ಎಂದು ಹೇಳಲಾಗುತ್ತಿದೆ.
ಈಗ ಪುನಃ ಲಾಲೂ ಟ್ವೀಟ್ ಮಾಡಿದ್ದು, ಬಿಜೆಪಿಮತ್ತು ಆರೆಸ್ಸೆಸ್‌ಗೆ ತೀಕ್ಷ್ಣ ಎಚ್ಚರಿಕೆ ನೀಡಿದ್ದಾರೆ. ಲಾಲೂ ಅವರ ಟ್ವೀಟ್ ಈ ರೀತಿ ಇದೆ. "ಬಿಜೆಪಿ ಹಾಗೂ ಆರೆಸ್ಸೆಸ್ಸಿಗರೆ ಕೇಳಿರಿ, ಯಾವುದೇ ಸ್ಥಿತಿ ಬಂದೊದಗಿದರೂ ಲಾಲು ನಿಮ್ಮನ್ನು ದಿಲ್ಲಿಯ ಕುರ್ಚಿಯಿಂದ ಕೆಳಗಿಸಲು ಸಮರ್ಥನಿದ್ದಾನೆ ಎಂದು ತಿಳಿಯಿರಿ. ನಾನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ.. ನನ್ನನ್ನು ಬೆದರಿಸುವ ಕೆಲಸವನ್ನು ಬಿಟ್ಟು ಬಿಡಿರಿ"
ಲಾಲು ಪ್ರಸಾದ್ ಯಾದವ್ ಈ ಹಿಂದೆ ಮಾಡಿದ್ದ ಟ್ವೀಟ್‌ನಿಂದಾಗಿ ಬಿಹಾರದ ರಾಜಕೀಯದಲ್ಲಿ ಅಲ್ಲೋಲಕಲ್ಲೋಲವೇ ಅಗಿತ್ತು. ಅಂದು ಲಾಲು" ಬಿಜೆಪಿಯ ಹೊಸ ಪಾಲುದಾರರಿಗೆ ಶುಭಾಶಯ ಎಂದು ಟ್ವೀಟ್ ಮಾಡಿದ್ದರು. ಬಿಹಾರದ ಮಹಾಘಟ್‌ಬಂಧನ್(ಮಹಾಮೈತ್ರಿ) ಅಪಾಯದಲ್ಲಿದೆಯೇ ಎನ್ನುವ ಸಂದೇಹ ಅವರ ಟ್ವೀಟ್‌ನಿಂದಾಗಿ ಸೃಷ್ಟಿಯಾಗಿತ್ತು. ಆದರೆ ಸ್ವಯಂ ಲಾಲು ಇನ್ನೊಂದು ಟ್ವೀಟ್ ಮಾಡಿ ಬಿಹಾರದ ಮಹಾಮೈತ್ರಿ ಈಗಲೂ ಸುಭದ್ರ ಎಂದು ಸ್ಪಷ್ಟಪಡಿಸಿದ್ದರು.