18 ಕೋಟಿರೂ.ಜಾಹೀರಾತು ಕೊಡುಗೆ ನಿರಾಕರಿಸಿದ ಪ್ರಭಾಸ್

Update: 2017-05-19 12:44 GMT

ಬಾಹುಬಲಿ 2 ಚಿತ್ರದ ಪ್ರಚಂಡ ಯಶಸ್ಸಿನ ಬಳಿಕ ಭಾರತೀಯ ಚಿತ್ರರಂಗದ ಅತ್ಯಂತ ಬೇಡಿಕೆಯ ತಾರೆಯೆನಿಸಿರುವ ಪ್ರಭಾಸ್‌ರನ್ನು ತಮ್ಮ ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್ ಮಾಡಲು ಹಲವು ವಾಣಿಜ್ಯ ಕಂಪೆನಿಗಳು ಮುಂದೆ ಬಂದಿದ್ದು, ಭಾರೀ ಮೊತ್ತದ ಸಂಭಾವನೆಯ ಕೊಡುಗೆಯನ್ನು ನೀಡಿವೆ. ಆದರೆ ಪ್ರಭಾಸ್, ಚಿತ್ರರಂಗದಲ್ಲೇ ತನ್ನ ಗಮನವನ್ನು ಕೇಂದ್ರೀಕರಿಸಲು ಬಯಸಿದ್ದು, ಜಾಹೀರಾತುಗಳಲ್ಲಿ ನಟಿಸಲು ಒಲ್ಲೆ ಎಂದಿದ್ದಾರೆ. ಜಾಹೀರಾತೊಂದರಲ್ಲಿ ನಟಿಸಲು ವಾಣಿಜ್ಯ ಕಂಪೆನಿಯೊಂದರ 18 ಕೋಟಿ ರೂ.ನ ಭಾರೀ ಸಂಭಾವನೆಯ ಕೊಡುಗೆಯನ್ನು ಕೂಡಾ ಪ್ರಭಾಸ್ ತಿರಸ್ಕರಿಸಿದ್ದಾರೆಂದು ಅವರ ವಕ್ತಾರರೊಬ್ಬರು ಬಹಿರಂಗಪಡಿಸಿದ್ದಾರೆ.

ಈ ಮಧ್ಯೆ ಅಮೆರಿಕ ಪ್ರವಾಸದಿಂದ ಮರಳಿ ಬಂದಿರುವ ಪ್ರಭಾಸ್, ‘ಸಾಹೋ’ ಎಂಬ ಬಿಗ್ ಬಜೆಟ್ ತೆಲುಗು ಚಿತ್ರಕ್ಕೆ ಬಣ್ಣ ಹಚ್ಚಲು ಸನ್ನದ್ಧರಾಗಿದ್ದಾರೆ. ಚಿತ್ರದ ಟೀಸರ್ ಕೂಡಾ ಬಿಡುಗಡೆಯಾಗಿದ್ದು, ಇದೊಂದು ಭರ್ಜರಿ ಆ್ಯಕ್ಷನ್ ಚಿತ್ರವಾಗಲಿದೆಯೆಂಬ ಸುಳಿವನ್ನು ನೀಡಿದೆ. ಜುಲೈನಲ್ಲಿ ಚಿತ್ರೀಕರಣ ಆರಂಭಿಸಲಿರುವ ‘ಸಾಹೋ’ ಚಿತ್ರದ ನಾಯಕಿಯಾಗಿ ಕತ್ರೀನಾ ಕೈಫ್ ಆಯ್ಕೆಯಾಗಿದ್ದಾರೆ. ಆದರೆ ಉಳಿದ ಪಾತ್ರಗಳ ಬಗ್ಗೆ ಇನ್ನೂ ಯಾವುದೇ ವಿವರಗಳು ಬಹಿರಂಗಗೊಂಡಿಲ್ಲ.

ಸಾಹೋ ಚಿತ್ರದ ಜೊತೆಜೊತೆಗೆ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಅಭಿನಯದ ‘ಭಾಗ್‌ಮತಿ’ ಸೆಟ್ಟೇರಲು ಸಜ್ಜಾಗಿದೆ. ಮೊದಲಿಗೆ ‘ಭಾಗ್‌ಮತಿ’ ಐತಿಹಾಸಿಕ ಚಿತ್ರವೆಂಬ ಊಹಾಪೋಹಗಳಿದ್ದವಾದರೂ, ಚಿತ್ರತಂಡ ಅದನ್ನೀಗ ತಳ್ಳಿಹಾಕಿದೆ. ಇದೊಂದು ಥ್ರಿಲ್ಲರ್ ಕಥಾವಸ್ತುವಿರುವ ಚಿತ್ರವೆಂದು ಅದು ಸ್ಪಷ್ಟಪಡಿಸಿದೆ. ಇದೊಂದು ನಾಯಕಿ ಪ್ರಧಾನ ಚಿತ್ರವೆಂಬ ಮಾತೂ ಕೇಳಿಬರುತ್ತಿದೆ. ಬಾಹುಬಲಿ ಸರಣಿಯ ಚಿತ್ರಗಳಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಬೇರೆ ಯಾವುದೇ ಚಿತ್ರಗಳಲ್ಲಿ ನಟಿಸದೆ ಇದ್ದ ಪ್ರಭಾಸ್ ಈ ಚಿತ್ರಕ್ಕಾಗಿ ಕಾಲ್‌ಶೀಟ್ ನೀಡಲು ಒಪ್ಪಿಕೊಂಡಿದ್ದಾರೆ. ಚಿತ್ರದ ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದ್ದು, ಒಂದೆರಡು ತಿಂಗಳೊಳಗೆ ಶೂಟಿಂಗ್ ಆರಂಭಗೊಳ್ಳಲಿದೆ. ಪ್ರಭಾಸ್ ಅವರ ಆಪ್ತ ಮಿತ್ರರಾದ ಪ್ರಮೋದ್ ಉಪಾಲಪಟ್ಟಿ ಹಾಗೂ ವಂಶಿಕೃಷ್ಣ ರೆಡ್ಡಿ ‘ಭಾಗ್‌ಮತಿ’ಯನ್ನು ನಿರ್ಮಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News