ಕಿರಿಕ್ ಪಾರ್ಟಿ ರಿಷಭ್ ಕಥಾಸಂಗಮ

Update: 2017-05-19 12:49 GMT

‘ಕಿರಿಕ್‌ಪಾರ್ಟಿ’ಯ ಮೂಲಕ ಸ್ಯಾಂಡಲ್‌ವುಡ್ ಪ್ರೇಕ್ಷಕರ ಹೃದಯಗೆದ್ದ ಯುವನಿರ್ದೇಶಕ ರಿಷಭ್ ಶೆಟ್ಟಿಯವರ ಮುಂದಿನ ಚಿತ್ರ ಯಾವುದೆಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಏಳು ಕಥೆಗಳಿರುವ ‘ಕಥಾಸಂಗಮ’ ಎಂಬ ಚಿತ್ರವನ್ನು ನಿರ್ಮಿಸುವುದಾಗಿ ಅವರು ಘೋಷಿಸಿದ್ದಾರೆ. ಚಿತ್ರದ ಪೋಸ್ಟರ್ ಅನ್ನು ಅವರು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದು, ಅದಕ್ಕೆ ಚಿತ್ರಪ್ರೇಮಿಗಳಿಂದ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.

ಒಂಟಿಯಾಗಿ ಕುಳಿತಿರುವ ಅನಾಥ ಹುಡುಗ, ಬೈಕ್ ಪ್ರಯಾಣಿಕ, ಯುವಪ್ರೇಮಿಗಳು ಹೀಗೆ ಹಲವು ದೃಶ್ಯಗಳ ಸಂಯೋಜನೆಯಿರುವ ಈ ಪೋಸ್ಟರ್, ಚಿತ್ರದ ಬಗ್ಗೆ ಸಿನೆಮಾರಸಿಕರ ಕುತೂಹಲವನ್ನು ಹೆಚ್ಚಿಸಿದೆ. 1975ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ಕಥಾಸಂಗಮ ಚಿತ್ರದಿಂದ ಸ್ಫೂರ್ತಿ ಪಡೆದಿರುವ ರಿಷಬ್, ಅದೇ ಚಿತ್ರದ ಹೆಸರಿನೊಂದಿಗೆ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಂದಹಾಗೆ ಇಡೀ ಚಿತ್ರಕ್ಕೆ ರಿಷಭ್ ಪ್ರಧಾನ ನಿರ್ದೇಶಕರಾದರೂ, ಏಳು ಮಂದಿ ಬೇರೆ ಬೇರೆ ನಿರ್ದೇಶಕರು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಜೊತೆಗೆ ಏಳು ಮಂದಿ ಸಂಗೀತ ನಿರ್ದೇಶಕರು ಹಾಗೂ ಛಾಯಾಗ್ರಾಹಕರಿರುವರು.ಆದರೆ ಅವರ್ಯಾರೆಂಬುದನ್ನು ಮಾತ್ರ ಇನ್ನೂ ಬಹಿರಂಗಪಡಿಸಿಲ್ಲ.

ಆದಾಗ್ಯೂ ಚಿತ್ರದ ತಾರಾಬಳಗದ ಬಗ್ಗೆ ಮಾತ್ರ ರಿಷಭ್ ಇನ್ನೂ ಗುಟ್ಟುಬಿಟ್ಟು ಕೊಟ್ಟಿಲ್ಲ.ಅದರೆ ಚಿತ್ರದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ದೊರೆಯಲಿದೆಯಂತೆ. ಒಟ್ಟಿನಲ್ಲಿ ಕಥಾಸಂಗಮ ಕನ್ನಡ ಪ್ರೇಕ್ಷಕರಿಗೆ ಹೊಸ ಅನುಭವವನ್ನು ನೀಡುವುದಂತೂ ಖಂಡಿತ. ರಿಷಭ್ ಶೆಟ್ಟಿ ತನ್ನ ಹೋಮ್ ಬ್ಯಾನರ್ ರಿಷಭ್ ಶೆಟ್ಟಿ ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸುತ್ತಿರುವ ಕಥಾಸಂಗಮ ಚಿತ್ರಕ್ಕೆ ಎಚ್.ಕೆ. ಪ್ರಕಾಶ್ ಹಾಗೂ ಪ್ರದೀಪ್ ಎನ್.ಆರ್ ಸಹನಿರ್ಮಾ ಪಕರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News