ದಾಖಲೆ ಬರೆದ ವಿವೇಗಂ ಟೀಸರ್

Update: 2017-05-19 12:56 GMT

‘ತಲ’ ಅಜಿತ್ ಅಭಿನಯದ ತಮಿಳು ಚಿತ್ರ ‘ವಿವೇಗಮ್’ ಚಿತ್ರ ಇಂಟರ್‌ನೆಟ್‌ನಲ್ಲಿ ಕ್ರಾಂತಿ ಎಬ್ಬಿಸಿದೆ. ಹೌದು ಈ ಚಿತ್ರದ ಟೀಸರ್, ಬಿಡುಗಡೆಯಾದ ಕೇವಲ 48 ಗಂಟೆಗಳೊಳಗೆ ಬರೋಬ್ಬರಿ 7.20 ಲಕ್ಷ ಸಲ ವೀಕ್ಷಣೆಗೊಳಗಾಗುವ ಮೂಲಕ ಹೊಸ ದಾಖಲೆ ಸೃಷ್ಟಿಸಿದೆ. ಬುಧವಾರ ತಡರಾತ್ರಿ ಈ ಟೀಸರ್ ಯೂಟ್ಯೂಬ್‌ನಲ್ಲಿ ಬಿಡುಗಡೆಗೊಂಡಿದ್ದೇ ತಡ, ಅದು ವೈರಲ್ ಆಗಿಬಿಟ್ಟಿದೆ. ಅದ್ಭುತವಾದ ಸಾಹಸ ದೃಶ್ಯಗಳಿಂದ ಕೂಡಿದ ಈ ಟೀಸರ್‌ನ್ನು ಕಂಡು ಅಜಿತ್ ಅಭಿಮಾನಿಗಳು ರೋಮಾಂಚನ ಗೊಂಡಿದ್ದಾರೆ. ಯುರೋಪ್‌ನ ಹಿಮಚ್ಛಾದಿತ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡ ಈ ಚಿತ್ರದಲ್ಲಿ ಅಜಿತ್ ಆ್ಯಕ್ಷನ್ ದೃಶ್ಯಗಳಲ್ಲಿ ಸಕತ್ತಾಗಿ ಮಿಂಚಿದ್ದಾರೆ. ಚಿತ್ರದಲ್ಲಿ ವಿವೇಕ್ ಓಬೆರಾಯ್, ಕಾಜಲ್ ಅಗರ್‌ವಾಲ್ ಹಾಗೂ ಅಕ್ಷರ ಹಾಸನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿವೇಗಮ್‌ನಲ್ಲಿ ವಿವೇಕ್ ಓಬೆರಾಯ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ.

ವಿವೇಗಮ್‌ನ ಆ್ಯಕ್ಷನ್ ದೃಶ್ಯಗಳು ಹಾಲಿವುಡ್‌ನ ಜೇಮ್ಸ್ ಬಾಂಡ್ ಚಿತ್ರ ಸ್ಪೆಕ್ಟರ್ ಹಾಗೂ ಟಾಮ್ ಕ್ರೂಸ್ ಅಭಿನಯದ ಮಿಶನ್ ಇಂಪಾಸಿಬಲ್ ಚಿತ್ರಗಳಿಗೆ ಸರಿಸಾಟಿಯಾಗಿವೆಯೆಂಬ ಮಾತುಗಳು ತಮಿಳುಚಿತ್ರರಂಗದಲ್ಲಿ ಕೇಳಿಬರುತ್ತಿವೆ. ಬೈಕ್ ಸ್ಟಂಟ್ ದೃಶ್ಯವೊಂದನ್ನು ಸ್ವತಃ ಅಜಿತ್ ಯಾವುದೇ ಡ್ಯೂಪ್ ಇಲ್ಲದೆ ನಿರ್ವಹಿಸಿರುವುದು ಈ ಚಿತ್ರದ ಇನ್ನೊಂದು ಹೆಗ್ಗಳಿಕೆ.

ಶಿವಾ ನಿರ್ದೇಶನದ ವಿವೇಗಮ್ ಆಗಸ್ಟ್‌ನಲ್ಲಿ ಬಿಡುಗಡೆಗೊಳ್ಳಲಿದೆ. ಪ್ರಸ್ತುತ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಬಲ್ಗೇರಿಯದಲ್ಲಿ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News